ಹೊಸದಿಲ್ಲಿ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಕುಟುಂಬ ಅರ್ಚಕರ ದೇವಸ್ಥಾನ ಮತ್ತು ನಿವಾಸದ ಮೇಲೆ ದಾಳಿ ನಡೆಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಆ ರೀತಿಯ ಯಾವುದೇ ಐಟಿ ದಾಳಿಯನ್ನು ಕರ್ನಾಟಕ ಆದಾಯ ತೆರಿಗೆ ಇಲಾಖೆ ನಡೆಸಿಲ್ಲ ಎಂದು ಐಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.
ದೇವೇಗೌಡರ ಹುಟ್ಟೂರಾದ ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿನ ಶಿವ ದೇವಸ್ಥಾನ ಮತ್ತು ಅದರ ಅರ್ಚಕರ ಮನೆಯ ಮೇಲೆ ಐಟಿ ದಾಳಿ ನಡೆಸಲಾಗಿದೆ ಎಂಬ ವರದಿಯನ್ನು ಅನುಸರಿಸಿ ಐಟಿ ಇಲಾಖೆ ಈ ಸ್ಪಷ್ಟನೆಯನ್ನು ನೀಡಿದೆ.
ಐಟಿ ಇಲಾಖಾಧಿಕಾರಿಗಳು ಎಂದು ಹೇಳಿಕೊಂಡ ಇಬ್ಬರು ಅಪರಿಚಿತ ವ್ಯಕ್ತಿಗಳು ನನ್ನ ಮನೆಗೆ ಬಂದು ನನ್ನನ್ನು ಪ್ರಶ್ನಿಸಿದರು ಮತ್ತು ಹರದನಹಳ್ಳಿ ಶಿವ ದೇವಾಲಯದಲ್ಲಿ ಶೋಧ ಕಾರ್ಯ ನಡೆಸಿದರು ಎಂದು ಅರ್ಚಕರು ನಿನ್ನೆ ಶುಕ್ರವಾರ ದೂರು ನೀಡಿದ್ದರು.
ಇದಕ್ಕೆ ಉತ್ತರವಾಗಿ ಐಟಿ ಇಲಾಖೆ, “ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಿಗೆ ಸೇರಿದ ಸುದ್ದಿಗಾರರು ಈ ರೀತಿ ಸುಳ್ಳುಗಳನ್ನು ವರದಿ ಮಾಡುತ್ತಿರುವುದು ದುರದೃಷ್ಟಕರ ಎಂದು ಐಟಿ ಇಲಾಖೆ ಹೇಳಿದೆ.
ಈ ನಡುವೆ ಕರ್ನಾಟಕ ಕಾಂಗ್ರೆಸ್ ಸಮಿತಿ ಈ ತಥಾಕಥಿತ ಐಟಿ ದಾಳಿಯನ್ನು ಬಲವಾಗಿ ಖಂಡಿಸಿದೆ.