Advertisement

ಅರಣ್ಯ ಪ್ರದೇಶದಲ್ಲಿ ಸಾಗುವಳಿ ಸಕ್ರಮ ಮಾಡಲು ಅವಕಾಶವಿಲ್ಲ: ಆರ್‌.ಅಶೋಕ್‌

09:03 PM Dec 13, 2021 | Team Udayavani |

ಸುವರ್ಣ ಸೌಧ: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದ್ದರೆ ನೇರವಾಗಿ ಹಕ್ಕು ಪತ್ರ ವಿತರಣೆ ಮಾಡಲು ಅವಕಾಶವಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಕಂದಾಯ ಜಮೀನಿನಲ್ಲಿ ಸಾಗುವಳಿ ಮಾಡಿದ್ದರೆ, ಅವರಿಗೆ ಸಾಗುವಳಿ ಚೀಟಿ ನೀಡಲು ಅವಕಾಶವಿದೆ. ಆದರೆ, ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದರೆ, ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 94ಎ, 94ಬಿ, ಮತ್ತು 94ಎ(4) ಗಳಡಿ ಅರಣ್ಯ ಭೂಮಿಯಲ್ಲಿನ ಯಾವುದೇ ಸಾಗುವಳಿಯನ್ನು ಸಕ್ರಮಗೊಳಿಸಲು ಅವಕಾಶವಿಲ್ಲ. ಅರಣ್ಯ ಇಲಾಖೆ ಅನುಮತಿ ಇಲ್ಲದೆ ಸಾಗುವಳಿ ಚೀಟಿ ನೀಡಲು ಅವಕಾಶವಿಲ್ಲ ಎಂದು ಹೇಳಿದರು. ಬಿಜೆಪಿ ಸದಸ್ಯ ಕೆ.ಜಿ. ಬೋಪಯ್ಯ, ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯಬೇಕೆಂಬ ನಿಯಮ ಎಲ್ಲಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ಫಲಾನುಭವಿ ಬಯಸಿದರೆ ಮನೆಗೆ ಪಿಂಚಣಿ
ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ನೀಡಲಾಗುತ್ತಿರುವ ವಿವಿಧ ಪಿಂಚಣಿಯನ್ನು ಫಲಾನುಭವಿಗಳು ಬಯಸಿದರೆ ಪೋಸ್ಟ್‌ ಮೂಲಕ ಅವರ ಮನೆಗೇ ತಲುಪಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 69.72 ಲಕ್ಷ ಜನರಿಗೆ ಪಿಂಚಣಿ ನೀಡಲಾಗುತ್ತಿದ್ದು, ಸರ್ಕಾರ ವಾರ್ಷಿಕ 7992 ಕೋಟಿ ರೂ. ವೆಚ್ಚ ಮಾಡುತ್ತಿದೆ. ಫಲಾನುಭವಿಗಳಿಗೆ ಪೋಸ್ಟಮನ್‌ಗಳ ಮೂಲಕ ಪಿಂಚಣಿ ತಲುಪಿಸುವಲ್ಲಿ ಸಾಕಷ್ಟು ವಿಳಂಬ ಮತ್ತು ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿತ್ತು. ಅದನ್ನು ತಪ್ಪಿಸಲು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಕಾಶಿ ವಿಶ್ವನಾಥ ಕಾರಿಡಾರ್‌ ಲೋಕಾರ್ಪಣೆ: ಹೂಮಳೆ.. ಹೂಮಳೆ.. ಹೂಗಳ ಸುರಿಮಳೆ!

Advertisement

ಫಲಾನುಭವಿಗಳ ಆಧಾರ್‌ ಲಿಂಕ್‌ ಮಾಡಿರುವುದರಿಂದ 4 ಲಕ್ಷ ಬೋಗಸ್‌ ಫಲಾನುಭವಿಗಳು ಪತ್ತೆಯಾಗಿದ್ದಾರೆ. ಈಗ ಹೊಸದಾಗಿ 4 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ನೀಡಲಾಗುತ್ತಿದೆ. ಫಲಾನುಭವಿಗಳ ಮನೆಗಳಿಗೆ ಪಿಂಚಣಿ ತಲುಪಿಸಲು ಸರ್ಕಾರ ಎಲ್ಲ ರೀತಿಯ ವ್ಯವಸ್ಥೆ ಮಾಡಿದೆ. ಇನ್ನು ಮುಂದೆ ವೃದ್ಧಾಪ್ಯ ವೇತನಕ್ಕೆ ಯಾರೂ ಆರ್ಜಿ ಸಲ್ಲಿಸುವ ಆಗತ್ಯವಿಲ್ಲ. ಸರ್ಕಾರದ ಬಳಿ ಎಲ್ಲರ ಆಧಾರ್‌ ಮತ್ತು ರೇಷನ್‌ ಕಾರ್ಡ್‌ ಇರುವುದರಿಂದ ಅದರಲ್ಲಿ ಅವರ ವಯಸ್ಸು ನಮೂದಿಸಿರುವುದರಿಂದ 60 ವರ್ಷ ತುಂಬಿದ ತಕ್ಷಣ ವೃದ್ಯಾಪ್ಯ ವೇತನ ನೀಡಲಾಗುವುದು. ಫಲಾನುಭವಿಗಳು ಇಚ್ಚಿಸಿದರೆ, ಪೋಸ್ಟಮನ್‌ಗಳ ಮೂಲಕ ಅವರ ಮನೆಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next