Advertisement

ಸಿಎಂಗೆ ಟಿಪ್ಪು ದೆವ್ವ ಹಿಡಿದಿದೆ, ಈ ಸರ್ಕಾರದಿಂದ ಹಿಂದೂಗಳಿಗೆ ಮಾನಸಿಕ ಹಿಂಸೆ: ಅಶೋಕ್‌

09:27 PM Jun 13, 2024 | Team Udayavani |

ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪು ದೆವ್ವ ಹಿಡಿದಿದೆ. ಕಾಂಗ್ರೆಸ್‌ ಸರ್ಕಾರ ತಾಲಿಬಾನ್‌ ಸರ್ಕಾರವಾಗಿ ಬದಲಾಗಿದ್ದು, ಹಿಂದೂಗಳಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಿ ಬುದ್ಧಿ ಕಲಿಸಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾದರೂ ಕಾಂಗ್ರೆಸ್‌ ಸರ್ಕಾರ, ನಮ್ಮ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದೆ. ಪಾಕಿಸ್ತಾನದ ಕುನ್ನಿಗಳು ಎಂದು ಹೇಳಿದ್ದಾಗಿ ಪೊಲೀಸ್‌ ದಾಖಲೆಯಲ್ಲಿದೆ. ಆದರೆ, ಇದಕ್ಕೆ ಯಾವುದೇ ದಾಖಲೆ ಇಲ್ಲ. ಬಿಜೆಪಿ ಕಾರ್ಯಕರ್ತರು ಭಾರತ್‌ ಮಾತಾ ಕೀ ಜೈ ಎಂದಿದ್ದರು. ಆದರೂ ಮುಸ್ಲಿಮರನ್ನು ರಕ್ಷಣೆ ಮಾಡಿ ಹಿಂದೂಗಳಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತನಿಖೆ ನಡೆಯಲಿ:

ಚಿತ್ರನಟ ದರ್ಶನ್‌ ಪೊಲೀಸರಿಗೆ ದೂರು ನೀಡಿ ರೇಣುಕಾಸ್ವಾಮಿಗೆ ತಿಳಿ ಹೇಳಿಸಬಹುದಿತ್ತು. ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡು ಕೊಂದಿದ್ದರೆ ಅದು ದೊಡ್ಡ ತಪ್ಪು ಎಂದು ಅಶೋಕ್‌ ಹೇಳಿದರು.

ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಪೊಲೀಸರು ಸೂಕ್ತವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದರು.

Advertisement

ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೂಡ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ತನಿಖೆ ಸರಿಯಾಗಿ ನಡೆದು ಸತ್ಯಾಂಶ ಹೊರಬರಲಿ. ಈ ಪ್ರಕರಣದಲ್ಲಿ ಮೃತನಾದ ವ್ಯಕ್ತಿ ಯಾವುದೇ ಅಪರಾಧಿ ಹಿನ್ನೆಲೆ ಹೊಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಎಷ್ಟೋ ಸಂದೇಶಗಳು ಬರುತ್ತವೆ. ಅದಕ್ಕಾಗಿ ಕೊಲೆ ಮಾಡಲು ಹೋಗಬಾರದು. ಇದು ಇಡೀ ಚಿತ್ರೋದ್ಯಮಕ್ಕೆ ಕಳಂಕವಾಗಿದೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next