ಜೈಸಲ್ಮೇರ್: ಭಾರತದ ಪೌರತ್ವ ಸಿಗಲಿದೆ ಎಂದು ಭಾವಿಸಿ ಪಾಕಿಸ್ಥಾನದಿಂದ ಆಗಮಿಸಿದ್ದ ಹಿಂದೂಗಳು ಮತ್ತೆ ಪಾಕಿಸ್ಥಾನಕ್ಕೆ ತೆರಳಲು ಮುಂದಾಗಿದ್ದಾರೆ. ಕೇಂದ್ರ ಸರಕಾರ ಪೌರತ್ವ ನೀಡಲು ವಿಳಂಬ ಮಾಡುತ್ತಿದೆ ಎನ್ನುವುದು ಅವರ ಅಳಲು. ಕಳೆದ ಮೂರು ವರ್ಷಗಳಿಂದ ಪಾಕಿಸ್ಥಾನಕ್ಕೆ ಹಿಂತಿರುಗುವವರ ಸಂಖ್ಯೆ ಹೆಚ್ಚಿದೆ. ನೆರೆಯ ರಾಷ್ಟ್ರದಲ್ಲಿ ಅವರನ್ನು ಮುಸ್ಲಿಮರನ್ನಾಗಿ ಮತಾಂತರಿಸಲಾಗುತ್ತಿದೆ ಎಂದು ಹಲವರು ತಮ್ಮ ಗೋಳು ಹೇಳಿಕೊಂಡಿದ್ದಾರೆ. ರಾಜ ಸ್ಥಾನದ ಪಶ್ಚಿಮ ಭಾಗದಲ್ಲಿಯೇ ಸಾವಿರಾರು ಮಂದಿ ಪಾಕಿಸ್ಥಾನದಿಂದ ಬಂದ ಹಿಂದೂಗಳು ಭಾರತ ಸರಕಾರ ತಮಗೆ ಪೌರತ್ವ ನೀಡುವ ವಿಶ್ವಾಸದಿಂದ ಕಾಯುತ್ತಿದ್ದಾರೆ. 2015 ಮತ್ತು 2017ರಲ್ಲಿ ರಾಜಸ್ಥಾನ ಹೈಕೋರ್ಟ್‌ಗೆ ಸಿಐಡಿ ಸಲ್ಲಿಸಿದ ಪ್ರಮಾಣ ಪತ್ರ ಪ್ರಕಾರ 968 ಮಂದಿ ಹಿಂದೂ ಭಾರತಕ್ಕೆ ಆಗಮಿಸಿದ್ದಾರೆ. 2017ರಲ್ಲಿ 44 ಮಂದಿ ಹಿಂದೂಗಳು ಮತ್ತೆ ಪಾಕಿಸ್ಥಾನಕ್ಕೆ ತೆರಳಿದ್ದಾರೆ. ಈ ವರ್ಷದಲ್ಲಿ ಇದುವರೆಗೆ 59 ಮಂದಿ ಪಾಕಿಸ್ಥಾನಕ್ಕೆ ತೆರಳಿದ್ದಾರೆ. ಜೈಸಲ್ಮೇರ್‌ನ ಸ್ಥಳೀಯ ಮುಖಂಡ ನಾಥೂರಾಮ್ ಭೀಲ್ ಮಾತನಾಡಿ ಪಾಕ್‌ನಿಂದ ಹಿಂದೂಗಳು ಸ್ವದೇಶಕ್ಕೆ ಬಂದರೂ ನಿರಾಸೆ ಪಡುವಂತಾಗಿದೆ ಎಂದಿದ್ದಾರೆ.