ಚನ್ನಪಟ್ಟಣ: ವಿಧಾನಸಭೆ ಕ್ಷೇತ್ರ ಬಿಟ್ಟುಕೊಟ್ಟು ರಾಜ್ಯಸಭೆಗೆ ಹೋಗುವ ಆಲೋಚನೆಯಿಲ್ಲ. ಮುಂದೆಯೂ ಇದೇ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ. ರಾಜ್ಯಸಭೆಗೆ ಯಾರನ್ನು ಕಳುಹಿಸಬೇಕೆಂಬ ಬಗ್ಗೆ ಪಕ್ಷದಲ್ಲಿ ಇನ್ನೂ ಚರ್ಚೆ ನಡೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನಗರಸಭೆ ಆವರಣದಲ್ಲಿ ಪೌರಕಾರ್ಮಿಕ ರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಜನಸಾಮಾನ್ಯರ ಕಷ್ಟವನ್ನು ಹತ್ತಿರದಿಂದ ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ನಿಖೀಲ್ ಅವರನ್ನು ಜತೆಯಲ್ಲಿ ಕರೆದುಕೊಂಡು ಬರುತ್ತಿದ್ದೇನೆಯೇ, ಹೊರತು ಅವರನ್ನು ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಲ್ಲ. ಇದುವರೆಗೆ ರಾಜ್ಯಸಭೆ ಚುನಾವಣೆ ಸಂಬಂಧ ಯಾವ ಪಕ್ಷದೊಂದಿಗೂ ಚರ್ಚಿಸಿಲ್ಲ ಎಂದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೋರಾಟದಿಂದಲೇ ಜನರಿಂದ ಆರಿಸಿಯೇ ಅಧಿಕಾರ ಪಡೆದುಕೊಂಡಿದ್ದಾರೆ. ಹಿಂಬಾಗಿಲಿ ನಿಂದ ಅಧಿಕಾರ ಪಡೆದುಕೊಂಡಿಲ್ಲ. ಸದ್ಯ ಕಾಂಗ್ರೆಸ್‌ಗೆ 1, ಬಿಜೆಪಿಗೆ 2 ಸ್ಥಾನಗಳು ಅನಾಯಾಸವಾಗಿ ದಕ್ಕಲಿವೆ. 4ನೇ ಸ್ಥಾನ ಇನ್ನೂ ತೀರ್ಮಾನ ಮಾಡಿಲ್ಲ ಎಂದರು.
ಶೋ ಕೊಡಲು ಬರ್ತೀಲ್ಲ: ಕ್ಷೇತ್ರದ ಜನತೆ ಸಂಕಷ್ಟಕ್ಕೀಡಾದಾಗ ಯಾರೂ ಬಂದು ನೆರವಿಗೆ ನಿಲ್ಲಲಿಲ್ಲ. ಎಪಿಎಂಸಿ ಬಳಿ ಕಾರ್ಮಿಕರ ಮನೆಗಳು ಜಲಾವೃತವಾದಾಗ, ರೈತರ ಬಾಳೆ, ತೆಂಗು ಬೆಳೆಗಳು ಬಿರುಗಾಳಿಗೆ ನೆಲಕಚ್ಚಿದಾಗ ವೈಯಕ್ತಿಕವಾಗಿ ಪರಿಹಾರ ನೀಡಿದ್ದೇನೆ. ಶೋ ಕೊಡುವ ಜಾಯಮಾನ ನನ್ನದಲ್ಲ. ಜನಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಅನಾಹುತ ಸಂಭವಿಸಿದಾಗ ಕಾಂಗ್ರೆಸ್ ನಾಯಕರು ಬಂದಿದ್ದರಾ? ಎಂದು ಹರಿಹಾಯ್ದರು. ನಾನೇನು ಅಭಿವೃದಿಟಛಿ ಮಾಡಿಲ್ಲ, ಎಲ್ಲವನ್ನೂ ಕಾಂಗ್ರೆಸ್‌ನವರೇ ಮಾಡಿದ್ದಾರೆ. ಕೆಲವರು ರಾಮನಗರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಳ್ಳುತ್ತೇವೆಂದು ಹೊರಟಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಭಾರೀ ಬೆಂಬಲ ಕೊಟ್ಟಿದ್ದೇವೆಂದು ಅನುಕಂಪ ಪಡೆದುಕೊಳ್ಳಲು ಹೊರಟಿದ್ದಾರೆ. ಸಿಎಂ ಆಗಿದ್ದಾಗ ಯಾರು, ಯಾವ ರೀತಿ ಬೆಂಬಲ ಕೊಟ್ಟಿದ್ದಾರೆಂಬುದು ತಿಳಿದಿದೆ. ಹೇಗೆ ಪ್ರಚಾರ ತೆಗೆದುಕೊಂಡಿದ್ದಾರೆಂದು ತಿಳಿದಿದೆ. ರಾಮನಗರ ಜಿಲ್ಲೆ ವಶಕ್ಕೆ ಪಡೆಯುತ್ತೇವೆಂದು ಹೊರಟಿದ್ದಾರೆ. ಜಿಲ್ಲೆಯಲ್ಲಿ ನನ್ನ ಕಾರ್ಯಕರ್ತರು ಶಕ್ತಿಯುತವಾಗಿದ್ದಾರೆ. ಅವರು ಸುಮ್ಮನೆ ಕುಳಿತಿಲ್ಲ. ಡಬಲ್ ಗೇಮ್ ರಾಜಕೀಯ ಬಿಡಬೇಕೆಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದಟಛಿ ಹರಿಹಾಯ್ದರು.
ನಾನು ಯಾರ ಋಣದಲ್ಲೂ ಇಲ್ಲ: ನನ್ನನ್ನು ಸಿಎಂ ಮಾಡಿ ಎಂದು ಯಾರ ಬಳಿಗೂ ಹೋಗ ಲಿಲ್ಲ. ನಾಲ್ಕು ವರ್ಷ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಬಜೆಪಿಯವರು ಹೇಳಿದಾಗಲೂ ನಾನು ಹೋಗಿಲ್ಲ. ನಾನು ರೈತರ ಋಣದಲ್ಲಿದ್ದೇನೆ. 14 ತಿಂಗಳಲ್ಲಿ 24 ಸಾವಿರ ಕೋಟಿ ರೂ. ಒದಗಿಸಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಎಂದೆಂದಿಗೂ ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜೆಡಿಎಸ್ ಯುವ ಘಟಕದ ರಾಜಾಧ್ಯಕ್ಷ ನಿಖೀಲ್‌ಕುಮಾರಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಜಯಮುತ್ತು, ನಗರ ಘಟಕದ ಅಧ್ಯಕ್ಷ ರಾಜಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಎಂ.ಸಿ. ಕರಿಯಪ್ಪ, ಹಾಪ್‌ಕಾಮ್ಸ್ ದೇವರಾಜು, ವಡ್ಡರಹಳ್ಳಿ ರಾಜಣ್ಣ, ಹನುಮಂತು, ಬೋರ್ ವೆಲ್ ರಾಮಚಂದ್ರು ಸೇರಿದಂತೆ ತಾಲೂಕು ಜೆಡಿಎಸ್ ಮುಖಂಡರು ಹಾಜರಿದ್ದರು.