Advertisement

ವಸತಿ ಯೋಜನೆ ಸಿಕ್ಕಿಲ್ಲ: ಕರಿಪತಾಕೆ ಪ್ರದರ್ಶಿಸಿ ಪ್ರತಿಭಟನೆ

07:45 AM Aug 18, 2017 | Team Udayavani |

ಹೆಬ್ರಿ: ಈಗಾಗಲೇ ಹೆಬ್ರಿಯಿಂದ ಬೇರ್ಪಡೆಗೊಂಡ ಕಾರ್ಕಳ ತಾಲೂಕಿನ ಚಾರ ಗ್ರಾಮ ಪಂಚಾಯತ್‌ ಸ್ವಂತ ಪಂಚಾಯತ್‌ ಕಟ್ಟಡವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು ಇದೀಗ 40 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ ಕಟ್ಟಡದ ಶಿಲನ್ಯಾಸ ಕಾರ್ಯಕ್ರಮವನ್ನು ಕಾರ್ಕಳ ಶಾಸಕ ವಿ. ಸುನಿಲ್‌ಕುಮಾರ್‌ ನೆರವೇರಿಸಬೇಕಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಪಂಚಾಯತ್‌ ಅಧ್ಯಕ್ಷ ಸಂದೀಪ ಹಾಗೂ ಪಿ.ಡಿ.ಒ. ಶೇಖರ ಪೂಜಾರಿ ಅವರು ಶಿಲಾನ್ಯಾಸ ನೆರವೆರಿಸಿದ ಘಟನೆ ಆ. 16ರಂದು ನಡೆದಿದೆ.

Advertisement

ಚಾರ ಗ್ರಾಮ ಪಂಚಾಯತ್‌ಗೆ ಗ್ರಾಮ ವಿಕಾಸ ಯೋಜನೆಯಡಿ ಸಿಗಬೇಕಾದ ವಸತಿ ಯೋಜನೆ ಸಿಕ್ಕಿಲ್ಲ ಎಂದು ಗ್ರಾಮ ಪಂಚಾಯತ್‌ ಸದಸ್ಯ ದಿನೇಶ್‌ ಶೆಟ್ಟಿ ನೇತೃತ್ವದಲ್ಲಿ ಶಿಲಾನ್ಯಾಸ ನಡೆಯುತ್ತಿರುವ ಪ್ರದೇಶದಲ್ಲಿ ಕರಿಪತಾಕೆ ಹಿಡಿದು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದು ಶಾಸಕರು ಸ್ಥಳಕ್ಕೆ ಆಗಮಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

ಕರಿಪತಾಕೆ ಹಿಡಿದು ಪ್ರತಿಭಟನೆ
ಸತತ 2 ವರ್ಷಗಳಿಂದ ಚಾರ ಗ್ರಾ.ಪಂ. ಕಾಂಗ್ರೆಸ್‌ ಬೆಂಬಲಿತ ಪಂಚಾಯತ್‌ ಆದ್ದರಿಂದ ಶಾಸಕರು ನಿರ್ಲಕ್ಷ್ಯ ತೋರಿಸಿದ್ದು, ಇವರಿಂದ ಚಾರ ಗ್ರಾಮದ ಜನತೆಗೆ ಅನ್ಯಾಯವಾಗಿದ್ದು ಸುಮಾರು 1 ಕೋಟಿ ರೂ. ಮೊತ್ತದ ಗ್ರಾಮ ವಿಕಾಸ ಯೋಜನೆ ಮತ್ತು ಬಸವ ವಸತಿ ಯೋಜನೆಯಡಿ ಕೇವಲ 2 ಮನೆ ಮಾತ್ರ ನೀಡಿರುವುದರಿಂದ ಬೇಸರ ತಂದಿದೆ. ಪ್ರತಿಭಟನೆಯ ವಿಚಾರ ತಿಳಿದ ಶಾಸಕರು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬರದೆ ನಿರ್ಲಕ್ಷ್ಯ ತೋರಿದ್ದಾರೆ. ಗ್ರಾಮ ವಿಕಾಸ ಯೋಜನೆ ಆಯ್ಕೆ ಮತ್ತು ಬಸವ ವಸತಿ ಯೋಜನೆಯಲ್ಲಿ ಚಾರ ಗ್ರಾ.ಪಂ. ಗೆ ಅನ್ಯಾಯವಾಗಿದೆ ಎಂದು  ಗ್ರಾ.ಪಂ. ವ್ಯವಸ್ಥೆ ದಿನೇಶ್‌ ಕುಮಾರ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಗ್ರಾ.ಪಂ. ಸದಸ್ಯೆ ಸಾವಿತ್ರಿ ನಾಯ್ಕ, ಸಂಜೀವ ನಾಯ್ಕ, ಕೃಷ್ಣಮೂರ್ತಿ ಭಂಡಾರಿ, ಶಂಕರ, ಪ್ರದೀಪ್‌, ಸುಂದರ್‌ ಮೊದಲಾದವರು ಕಪ್ಪು ಬಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.

ಮುಂದಿನ ದಿನಗಳಲ್ಲಿ ಪ್ರತಿಭಟನೆ
ಶಾಸಕರು ಕೂಡಲೇ ಚಾರ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಗೆ ಸೇರ್ಪಡೆಗೊಳಿಸಬೇಕು. ಮತ್ತು ಬಸವ ಯೋಜನೆಯಲ್ಲಿ ಚಾರಕ್ಕೆ ಅತೀ ಹೆಚ್ಚು ಮನೆಗಳನ್ನು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಚಾರದ ಎಲ್ಲಾ ಗ್ರಾಮಸ್ಥರನ್ನು ಸೇರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾ.ಪಂ.ಸದಸ್ಯ ದಿನೇಶ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅಧಿಕೃತ ಮಾಹಿತಿ ಇಲ್ಲ
ಚಾರ ಗ್ರಾಮ ಪಂಚಾಯತ್‌ ಹೊಸ ಕಟ್ಟಡ ಶಂಕುಸ್ಥಾಪನೆಗೆ ಶಾಸಕ ವಿ. ಸುನಿಲ್‌ ಕುಮಾರ್‌ರವರನ್ನು  ಅಧಿಕೃತ ಆಹ್ವಾನ ನೀಡಿರುವುದಿಲ್ಲ. ಗ್ರಾಮ ಪಂಚಾಯತ್‌ ಅಧ್ಯಕ್ಷರು ಮೌಖೀಕವಾಗಿ ಬರುವಂತೆ ಪೋನ್‌ ಮೂಲಕ ತಿಳಿಸಿರುತ್ತಾರೆ. ಅಧ್ಯಕ್ಷರ ಮಾತಿಗೆ ಬೆಲೆ ಕೊಟ್ಟು ಶಾಸಕರು ಬರುವಾಗ ಅಧ್ಯಕ್ಷರು ಕರೆಮಾಡಿ ಪಂಚಾಯತ್‌ ಸದಸ್ಯರ ಆಂತರಿಕ ಕಲಹದಿಂದಾಗಿ ಕಾರ್ಯಕ್ರಮ ರದ್ದುಪಡಿಸಿದ್ದೇವೆ ಎಂದು ತಿಳಿಸಿರುತ್ತಾರೆ. ಆದುದರಿಂದ ಶಾಸಕರು ಮತ್ತು ಜಿಲ್ಲಾ ಪಂಚಾಯತ್‌ ಸದಸ್ಯರು ಮಾರ್ಗ ಮಧ್ಯದಿಂದ ವಾಪಸ್ಸು ತೆರಳಿರುತ್ತಾರೆ ಎಂದು ತಾ.ಪಂ. ಸದಸ್ಯ ಅಮೃತಕುಮಾರ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ದಿನಾಂಕ  ನಿಗದಿ ಪಡಿಸಿದ್ದು ಶಾಸಕರು 
ಶಿಲಾನ್ಯಾಸ ನಡೆಸುವ ಬಗ್ಗೆ ಶಾಸಕ ವಿ. ಸುನಿಲ್‌ಕುಮಾರ್‌ ಅವರಲ್ಲಿ ವಿನಂತಿಸಿದಾಗ ದಿನಾಂಕವನ್ನು ಅವರೇ ನಿಗದಿ ಪಡಿಸಿದ ಪ್ರಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲದೆ ನಾನು ಸ್ವತ: ಖುದ್ದಾಗಿ ಶಾಸಕರ ಮನೆಗೆ ಬೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಲ್ಲದೆ ದೂರವಾಣಿ ಮೂಲಕವೂ ತಿಳಿಸಿದ್ದೇನೆ ಎಂದು ಗ್ರಾ.ಪಂ. ಅಧ್ಯಕ್ಷ ಸಂದೀಪ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next