Advertisement
ಕೋವಿಡ್ 19 ಲಸಿಕೆಗಳು ಎಷ್ಟು ಸುರಕ್ಷಿತ?ಅಮೆರಿಕವೊಂದರಲ್ಲೇ ಇದುವರೆಗೂ 1.3 ಕೋಟಿ ಜನರಿಗೆ ಲಸಿಕೆ ನೀಡಲಾಗಿದ್ದರೆ ಭಾರತದಲ್ಲಿ ಈ ಸಂಖ್ಯೆ 4 ಲಕ್ಷ ಸಮೀಪಿಸುತ್ತಿದೆ. ಜಾಗತಿಕವಾಗಿ ಇದುವರೆಗೂ 4 ಕೋಟಿ ಜನರು ಲಸಿಕೆಯನ್ನು ಪಡೆದಿದ್ದಾರೆ. ಬಹುತೇಕ ದೇಶಗಳಲ್ಲೂ ಲಸಿಕೆ ಪಡೆದವರಲ್ಲಿ ಕೆಲವರಿಗೆ ತಲೆನೋವು, ಮಂದ ಜ್ವರ, ಇಂಜೆಕ್ಷನ್ ನೀಡಿದ ಜಾಗದಲ್ಲಿ ಚರ್ಮ ಕೆಂಪಾದಂಥ ಲಕ್ಷಣಗಳು ಕಾಣಿಸಿಕೊಂಡಿರುವುದನ್ನು ಬಿಟ್ಟರೆ ಗಂಭೀರ ಪರಿಣಾಮಗಳೇನೂ ಆಗಿಲ್ಲ. ಭಾರತದ ವಿಚಾರಕ್ಕೇ ಬರುವುದಾದರೆ ಮಂಗಳವಾರದ ವೇಳೆಗೆ ಲಸಿಕೆ ಪಡೆದ 3.8 ಲಕ್ಷ ಮಂದಿಯಲ್ಲಿ ಕೇವಲ 580 ಮಂದಿಯಲ್ಲಿ ಮಾತ್ರ ಪ್ರತಿಕೂಲ ಪರಿಣಾಮಗಳು ಕಾಣಿಸಿಕೊಂಡಿವೆ ಎಂದು ಕೇಂದ್ರ ಸರಕಾರ ಹೇಳಿದೆ. ಅವೂ ಸಹ, ಜ್ವರ, ತಲೆ ನೋವಿನಂಥ ಸಮಸ್ಯೆಗಳೇ ಹೊರತು, ಗಂಭೀರ ಪರಿಣಾಮಗಳಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಂದು ವಿವಿಧ ರೋಗಗಳಿಗೆ ಬಳಕೆಯಾಗುತ್ತಿರುವ ಲಸಿಕೆಗಳೆಲ್ಲವೂ ಚಿಕ್ಕಪುಟ್ಟ ಪ್ರಮಾಣದ ಅಡ್ಡಪರಿಣಾಮ ಉಂಟುಮಾಡುತ್ತವೆ. ದಡಾರ, ಮಂಪ್ಸ್ (ಗದ್ದಬಾವು), ರುಬೆಲ್ಲ (ಮೈಮೇಲೆ ಕೆಂಪು ದದ್ದುಗಳೇಳುವ ಸೋಂಕು ರೋಗ)ಗಾಗಿ ನೀಡುವ ಎಂಎಂಆರ್ ಲಸಿಕೆ ಪ್ರಕ್ರಿಯೆಯ ವೇಳೆಯಲ್ಲೂ 10 ಪ್ರತಿಶತ ಜನರಿಗೆ ನೋವು, ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ಊತ ಕಾಣಿಸಿಕೊಳ್ಳಬಹುದು, ಇನ್ನು 5-15 ಪ್ರತಿ ಶತ ಜನರಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಪೊಲೀಯೋ ಲಸಿಕೆಯ ವಿಚಾರಕ್ಕೆ ಬಂದರೆ, ಕೇವಲ 1 ಪ್ರತಿಶತ ಮಕ್ಕಳಿಗೆ ಮಾತ್ರ ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೋವಿಡ್-19 ಲಸಿಕೆ ಪಡೆದಾಗಲೂ ಇಂಥ ಲಕ್ಷಣಗಳು ಕಾಣಿಸಿಕೊಂಡರೆ ಆತಂಕ ಪಡುವ ಅಗತ್ಯವಿಲ್ಲ ಎಂದೇ ಪರಿಣತರು ಹೇಳುತ್ತಾರೆ. ಜಗತ್ತಿನಾದ್ಯಂತ ಸಾಮಾನ್ಯವಾಗಿ ನೀಡಲಾಗುವ ಲಸಿಕೆಗಳಲ್ಲಿ, ಕೆಲವರಲ್ಲಿ ಗಂಭೀರ ಪರಿಣಾಮಗಳು ಕಾಣಿಸಿಕೊಳ್ಳುತ್ತವಾದರೂ ಅವು ಅಪರೂಪದಲ್ಲಿ ಅಪರೂಪ.