Advertisement
ಲಾಕ್‌ಡೌನ್ ಆರಂಭವಾದ ದಿನದಿಂದ ಅಂಗನವಾಡಿ ಕಾರ್ಯಕರ್ತೆಯರು ಸುಡು ಬಿಸಿಲಿನಲ್ಲಿಯೂ ಆಯಾಯ ಪಂಚಾ ಯತ್ ವ್ಯಾಪ್ತಿಯಲ್ಲಿರುವ ಮನೆ – ಮನೆಗಳಿಗೆ ಭೇಟಿ ನೀಡಿ, “ದಯಮಾಡಿ ಮನೆಯಿಂದ ಹೊರ ಬರಬೇಡಿ. ನಿಮ್ಮ ಜೀವ ಉಳಿಸಿಕೊಳ್ಳಿ’ ಎಂದು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಬೈಂದೂರು ಮತ್ತು ಕುಂದಾಪುರ ತಾಲೂಕಿನಲ್ಲಿ 300 ಕ್ಕೂ ಅಧಿಕ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರ ಜಿಲ್ಲೆ ಗಳಿಂದ, ಹೊರ ರಾಜ್ಯದಿಂದ ಇಲ್ಲಿಗೆ ಬಂದಿರುವ ನೂರಾರು ಮಂದಿಯನ್ನು ಗುರುತಿಸಿ ಅವರನ್ನು ಹೋಮ್ ಕ್ವಾರಂಟೈನ್‌ನಲ್ಲಿರಿಸಿ, ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ.
ಕೋವಿಡ್ 19 ಸೋಂಕಿನ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತರನ್ನು ಹಾಗೂ ಅವರ ಪರಿಶ್ರಮವನ್ನು ಗುರುತಿಸ ದಿರುವುದು ಅಂಗನವಾಡಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ವಿವಿಧೆಡೆ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು “ಕೋವಿಡ್ 19 ವಾರಿಯರ್’ಗಳಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ನಮಗೆ ಯಾವುದೇ ಸೌಲಭ್ಯಗಳಾಗಲೀ ಬೇಕಿಲ್ಲ. ನಮ್ಮ ಸೇವೆ ಮತ್ತು ಪರಿಶ್ರಮವನ್ನು ಗುರುತಿಸಿ, ಅದರೊಂದಿಗೆ ನಮ್ಮ ಬಗ್ಗೆ ಗೌರವವಿರಲಿ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ ರೇಖಾ ಖಾರ್ವಿ.
Related Articles
ಕೋವಿಡ್ 19 ಸೋಂಕಿನ ವಿರುದ್ಧ ಸೆಣಸುತ್ತಿರುವ ವೈದ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರಿಗೆ ಸರಕಾರ ಆರೋಗ್ಯ ವಿಮೆ ಜಾರಿಗೊಳಿಸಿದೆ. ಆದರೆ ಅಂಗನವಾಡಿ ಕಾರ್ಯಕರ್ತರನ್ನು ಮಾತ್ರ ನಿರ್ಲಕ್ಷಿಸಲಾಗಿದೆ. ಕೋವಿಡ್ 19 ತಡೆ ಕಾರ್ಯಾಚರಣೆ ಸಂದರ್ಭದಲ್ಲಿ ಕಾರ್ಯಕರ್ತೆಯರು ಸೋಂಕಿತರಾದರೆ ಅಥವಾ ಅನಾಹುತ ಉಂಟಾದರೆ ಯಾವುದೇ ರಕ್ಷಣೆ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೂ ಕೂಡ ಸರಕಾರ ವಿಮಾ ಸೌಲಭ್ಯ ಜಾರಿಗೊಳಿಸಬೇಕು ಮತ್ತು ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯಾಗಿದೆ.
Advertisement
ಎಲ್ಲರೂ ಸಹಕರಿಸಿಆರೋಗ್ಯ ಇಲಾಖೆ, ಸರಕಾರದ ನಿರ್ದೇಶನವನ್ನು ಪ್ರತಿಯೊಬ್ಬ ನಾಗರಿಕರು ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವೈಯಕ್ತಿಕ ಸ್ವಚ್ಚತೆ ಅತಿ ಅಗತ್ಯ. ಪ್ರತಿ ಮನೆಗೂ ತೆರಳಿ ಜನರಿಗೆ ಇದರ ಅರಿವು ಮೂಡಿಸುತ್ತಿದ್ದೇವೆ. ಕಳೆದ ಒಂದು ತಿಂಗಳಿನಿಂದ ಈ ಮಹತ್ಕಾರ್ಯದಲ್ಲಿ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಹೆಗಲು ನೀಡಿ ಇದು ನಮ್ಮ ಕರ್ತವ್ಯ ಎಂದು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸುವ ಕಾರ್ಯ ನಡೆಸಬೇಕು. ತನ್ಮೂಲಕ ಅವರಲ್ಲಿ ಸ್ಫೂರ್ತಿ ತುಂಬಬೇಕು.
-ಫಿಲೋಮಿನಾ ಫೆರ್ನಾಂಡಿಸ್, ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆಯರ ಸಂಘ ಕುಂದಾಪುರ ಮೇಲಾಧಿಕಾರಿಗಳ ಗಮನಕ್ಕೆ
ಅಂಗನವಾಡಿ ಕಾರ್ಯಕರ್ತೆಯರು ಕೂಡ ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದು, ಆದರೆ ಅವರಿಗೆ ಯಾವುದೇ ರೀತಿಯ ಆರೋಗ್ಯ ವಿಮೆ ಘೋಷಿಸಿಲ್ಲ. ಇದಲ್ಲದೆ ಹೆಚ್ಚುವರಿ ಪ್ರೋತ್ಸಾಹಧನ ಕೂಡ ಇಲ್ಲ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೂ ಆರೋಗ್ಯ ವಿಮೆ ನೀಡುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.
-ಶ್ವೇತಾ, ತಾ| ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕುಂದಾಪುರ