Advertisement
ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮ ಸುಮಾರು 7,377 ಜನಸಂಖ್ಯೆ ಹೊಂದಿದ್ದು, 3,749 ಪುರುಷರು ಮತ್ತು 3,628 ಮಹಿಳೆಯರಿದ್ದಾರೆ. ಅಂದಾಜು 725 ಮನೆಗಳಿವೆ. ಮಯ್ನಾಳ, ಬೆಳ್ಳಿಪ್ಪಾಡಿ, ಪಂಜಿಕಲ್ಲು, ಉಜಂಪಾಡಿ, ಮುಂಚಿಕಾನ ಹೀಗೆ ಹಲವು ಪ್ರದೇಶಗಳನ್ನು ಒಳಗೊಂಡ ದೇಲಂಪಾಡಿಯಲ್ಲಿ ಪಂಚಾಯತ್ ಕಚೇರಿ ಇಲ್ಲವೆನ್ನುವ ಕೊರಗು ನೀಗಿಲ್ಲ.
ದೇಲಂಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಗ್ರಾಮಗಳು ವಿಲೀನವಾಗಿವೆ. ಅಡೂರು ಮತ್ತು ದೇಲಂಪಾಡಿ ಗ್ರಾಮಗಳು ದೇಲಂಪಾಡಿ ಪಂಚಾಯತ್ ಅಧೀನದಲ್ಲಿ ಬರುತ್ತವೆ. ಎರಡು ಗ್ರಾಮಗಳ ಒಟ್ಟು ವಿಸ್ತೀರ್ಣ 7,950 ಚದರ ಕಿ.ಮೀ. ಆಗಿದೆ. ಗ್ರಾಮಗಳಲ್ಲಿ 22,773 ನಿವಾಸಿಗಳಿದ್ದಾರೆ. ದಕ್ಷಿಣದಲ್ಲಿ ಕರ್ನಾಟಕದ ಈಶ್ವರಮಂಗಲ ಹಾಗೂ ಕನಕಮಜಲು ಪ್ರದೇಶಗಳಿವೆ. ಉತ್ತರದಲ್ಲಿ ಕುತ್ತಿಕೋಲ್ ಗ್ರಾ.ಪಂ., ಪೂರ್ವದಲ್ಲಿ ಮಂಡೆಕೋಲು ಹಾಗೂ ಪಶ್ಚಿಮದಲ್ಲಿ ಕಾರಡ್ಕ ಗ್ರಾ.ಪಂ. ಇದ್ದು, ಒಟ್ಟು ಎರಡು ಗ್ರಾಮಗಳ ಸ್ಥೂಲ ಪರಿಚಯವಿದು. ದುಬಾರಿ ಸಂಚಾರ ವೆಚ್ಚ
ದೇಲಂಪಾಡಿ ಪಂಜಿಕಲ್ಲು ಮಾರ್ಗವಾಗಿ ಬಸ್ಸುಗಳ ಸಂಚಾರವಿಲ್ಲ. ಹೀಗಾಗಿ ಜನರು ಈಶ್ವರಮಂಗಲ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ. ಇದರಿಂದ ಪ್ರಯಾಣ ವೆಚ್ಚ ಜನರ ಕೈ ಸುಡುವಂತಿದೆ. ಎಲ್ಲ ಕಚೇರಿಗಳೂ ಒಂದೆ ಕಡೆ ಇಲ್ಲವಾದ್ದರಿಂದ ಆಡೂರಿಗೆ ಹೋಗಿ ಅಲ್ಲಿಂದ ಪರಪ್ಪಗೆ ತೆರಳಬೇಕಾಗುತ್ತದೆ. ದಿನನಿತ್ಯ ಒಂದಲ್ಲ ಒಂದು ಕೆಲಸ ಕಾರ್ಯಗಳಿಗೆ ಗ್ರಾಮಸ್ಥರು ಗ್ರಾ.ಪಂ., ವಿಲೇಜ್ ಆಫೀಸು, ಬ್ಯಾಂಕ್‌ಗಳ ವ್ಯವಹಾರಕ್ಕೆ ಪಕ್ಕದೂರನ್ನೇ ಸಂಪರ್ಕಿಸಬೇಕಾಗುತ್ತದೆ. ಹೀಗಾಗಿ ಸಮಸ್ಯೆ ತೀವ್ರತರವಾಗಿದೆ.
Related Articles
ದೇಲಂಪಾಡಿ ಗ್ರಾ.ಪಂ. ಒಂದು ಕಡೆಯಾದರೆ, ಗ್ರಾಮ ಕರಣಿಕರ ಕಚೇರಿ ಮತ್ತು ಗ್ರಾಮೀಣ ಬ್ಯಾಂಕ್ ಇನ್ನೊಂದೆಡೆ. ಕೊಟ್ಯಾಡಿ ಸಮೀಪದ ಪರಪ್ಪೆಯಲ್ಲಿ ಎರಡು ಕಚೇರಿಗಳನ್ನು ಆರಂಭಿಸಲಾಗಿದೆ. ದೇಲಂಪಾಡಿ ಗ್ರಾಮಕ್ಕೆ ಮಯ್ನಾಳ ಕಾಡು ಮಾರ್ಗವಾಗಿ ಹತ್ತಿರವಾದರೂ ಬಸ್ಸು, ಆಟೋಗಳು ಸಂಚರಿಸುವುದಿಲ್ಲ. ಕಾಡು ಮಾರ್ಗವಾಗಿದ್ದು, ಗ್ರಾಮಸ್ಥರು ಭಯದಿಂದಲೇ ಸಂಚರಿಸಬೇಕು. ಹೀಗಾಗಿ ಹೆಚ್ಚಿನ ಜನರು ಪರ್ಯಾಯವಾಗಿ ಗಾಳಿಮುಖ ರಸ್ತೆಯನ್ನು ಅವಲಂಬಿಸಿದ್ದಾರೆ.
Advertisement
ಅಡೂರಿನಲ್ಲಿದೆ ಗ್ರಾ.ಪಂ. ಕಚೇರಿಗ್ರಾಮಗಳ ವಿಲೀನದಿಂದ ದೇಲಂಪಾಡಿ ಗ್ರಾ.ಪಂ. ಅನ್ನು ಅಡೂರಿನಲ್ಲಿ ಸ್ಥಾಪಿಸಲಾಯಿತು. ಜನರು ತಮ್ಮ ಕಡತಗಳನ್ನು ಪರಿಶೀಲಿಸಲು, ಜನನ ಹಾಗೂ ಮರಣ ದಾಖಲಾತಿ, ಮನೆ ತೆರಿಗೆ ಹೀಗೆ ಎಲ್ಲ ಸೌಲಭ್ಯಗಳನ್ನು ಪಡೆಯಲು ದೇಲಂಪಾಡಿ ಗ್ರಾಮಸ್ಥರು ಅಡೂರಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ದೇಲಂಪಾಡಿಯಿಂದ ಆಡೂರಿಗೆ ಸುಮಾರು 20 ಕಿ.ಮೀ. ದೂರವಿದೆ. ಬಸ್ಸುಗಳ ವ್ಯವಸ್ಥೆಯಿಲ್ಲದೆ ಎರಡೆರಡು ವಾಹನಗಳನ್ನು ಬದಲಿಸಿ ಸಂಚರಿಸಬೇಕಾಗುತ್ತದೆ. ಸಮಯವೂ ವ್ಯರ್ಥ. ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಹೀಗಾಗಿದೆ ಎಂದು ಹೇಳುತ್ತಾರೆ ಗ್ರಾಮಸ್ಥರು. ಮುಗಿಯದ ಸಮಸ್ಯೆ
ಕಳೆದ 20 ವರ್ಷಗಳಿಂದ ಕಚೇರಿ ಕಾರ್ಯಗಳಿಗೆ ಅಲೆದಾಡುತ್ತಿದ್ದೇನೆ. ಪರಿಸ್ಥಿತಿ ಭಿನ್ನವಾಗಿಲ್ಲ. ಇದೊಂದು ಮುಗಿಯದ ಸಮಸ್ಯೆ. ದೇಲಂಪಾಡಿ ಗ್ರಾಮದಲ್ಲಿಯೇ ಗ್ರಾ.ಪಂ., ವಿಲೇಜ್ ಆಫೀಸು, ಬ್ಯಾಂಕ್ ಎಲ್ಲವೂ ಇರಬೇಕಾಗಿತ್ತು.
– ನಾರಾಯಣ ಮಣಿಯಾಣಿ,
ಗ್ರಾಮಸ್ಥರು ಶಿವಪ್ರಸಾದ್ ಮಣಿಯೂರು