Advertisement

ಮಂಗಳೂರಿನಲ್ಲಿ ಬಂದ್‌ ಕರೆಗೆ ಶೂನ್ಯ ಪ್ರತಿಕ್ರಿಯೆ

04:55 AM May 29, 2018 | Team Udayavani |

ಮಹಾನಗರ: ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಕರೆ ನೀಡಿದ ಬಂದ್‌ ಗೆ ಮಂಗಳೂರಿನಲ್ಲಿ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರಾದ್ಯಂತ ಬಂದ್‌ ಆಚರಣೆ ನಡೆದಿಲ್ಲ. ನಗರದಲ್ಲಿ ಸಾಮಾನ್ಯ ಜನ ಜೀವನ ಎಂದಿನಂತಿತ್ತು. ಸರಕಾರಿ ಮತ್ತು ಖಾಸಗಿ ಬಸ್‌ಗಳು, ಆಟೋ ರಿಕ್ಷಾಗಳು ಎಂದಿನಂತೆ ಸಂಚರಿಸಿದವು. ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಯಥಾ ಪ್ರಕಾರ ಕಾರ್ಯನಿರ್ವಹಿಸಿದವು. ಶಾಲಾ ತರಗತಿಗಳ ಪುನರಾರಂಭದ ಮೊದಲ ದಿನವೇ ಬಂದ್‌ ಗೆ ಕರೆ ನೀಡಲಾಗಿದ್ದರೂ ಶಾಲಾರಂಭ ಯಾವುದೇ ಅಡೆ ತಡೆಗಳಿಲ್ಲದೆ ನಡೆಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಗಳಿಗೆ ಹಾಜರಾಗಿದ್ದರು.

Advertisement


ಹಳೆಯಂಗಡಿ: ಬಂದ್‌ ಗೆ ಬೆಂಬಲವಿಲ್ಲ

ಹಳೆಯಂಗಡಿ ವ್ಯಾಪ್ತಿಯಲ್ಲಿ ಬಂದ್‌ ಗೆ ಯಾವುದೇ ರೀತಿಯಲ್ಲೂ ಬೆಂಬಲ ವ್ಯಕ್ತವಾಗಿಲ್ಲ. ಇಲ್ಲಿನ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ಬೆಳಗ್ಗೆ ಬಂದ್‌ ಬಗ್ಗೆ ಗೊಂದಲ ಇದ್ದರೂ ಅನಂತರ ಬಸ್‌, ರಿಕ್ಷಾಗಳು ರಸ್ತೆಗಿಳಿದಿದ್ದರಿಂದ ಪ್ರಯಾಣಿಕರು ಹಾಗೂ ವರ್ತಕರು ಸಹ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಂಡರು. ಅಂಗಡಿ ಮುಂಗಟ್ಟು, ಹೊಟೇಲ್‌ಗ‌ಳು ಸಹ ಯಾವುದೇ ರೀತಿಯಲ್ಲೂ ಗೊಂದಲವಿಲ್ಲದೇ ವ್ಯಾಪಾರ ನಡೆಸಿದವು.


ಮುಖ್ಯ ಪೇಟೆಯ ಸಹಿತ ಒಳ ರಸ್ತೆಯಲ್ಲಿಯೂ ಸಹ ಅಂಗಡಿಗಳು ವ್ಯವಹಾರ ನಡೆಸಿದೆ. ಗ್ರಾಮ ಪಂಚಾಯತ್‌ ಸಹಿತ ಬ್ಯಾಂಕ್‌, ಸರಕಾರಿ ಕಚೇರಿಗಳು ಎಂದಿನಂತೆ ಗ್ರಾಹಕರಿಗೆ ತಮ್ಮ ಸೇವೆ ನೀಡಿದವು. ಸರಕಾರಿ ಮತ್ತು ಖಾಸಗಿ ಶಾಲೆಗಳು ಮಂಗಳವಾರದಿಂದ ಅಧಿ ಕೃತವಾಗಿ ತೆರೆಯಲ್ಪಡುವುದರಿಂದ ಸೋಮವಾರ ಶಾಲಾ ವಠಾರದಲ್ಲಿ ಮಕ್ಕಳ ಪೋಷಕರು ಹಾಗೂ ಶಿಕ್ಷಕ ವೃಂದದವರು ತಮ್ಮ ತಮ್ಮ ಚಟುವಟಿಕೆಯನ್ನು ಪೂರ್ವಭಾವಿಯಾಗಿ ನಡೆಸಿದರು. ಪಡುಪಣಂಬೂರು, ಸಸಿಹಿತ್ಲು, ತೋಕೂರು, ಪಾವಂಜೆ, ಕದಿಕೆ ಇನ್ನಿತರ ಗ್ರಾಮೀಣ ಭಾಗದಲ್ಲೂ ಸಹ ಬಂದ್‌ ನ ಘೋಷಣೆಯಿಂದ ಯಾವುದೇ ತೊಂದರೆಯಾಗಿಲ್ಲ. ಪೊಲೀಸರು ಆಯಾ ಕಟ್ಟಿನಲ್ಲಿ ಬಂದೋ ಬಸ್ತನ್ನು ನೀಡಿದ್ದರು. ಯಾವುದೇ ಅಹಿತಕರ ಘಟನೆಗಳು ಸಹ ನಡೆದಿಲ್ಲ ಎಂದು ಪೊಲೀಸರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಮೂಲ್ಕಿ: ಎಂದಿನಂತೆ ಕಾರ್ಯ
ಮೂಲ್ಕಿ:
ಇಲ್ಲಿನ ನಗರ ಪಂಚಾಯತ್‌, ಕಿಲ್ಪಾಡಿ ಮತ್ತು ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಯಾವುದೇ ಪ್ರತಿಕ್ರಿಯೇ ನಡೆಯದೆ ಎಲ್ಲ ಕಾರ್ಖಾನೆ, ಅಂಗಡಿ, ಮುಗ್ಗಟ್ಟುಗಳು ಹಾಗೂ ಸರಕಾರಿ, ಅರೆ ಸರಕಾರಿ ಹಾಗೂ ಕೇಂದ್ರ ಸರಕಾರಿ ಸೌಮ್ಯದ ಕಚೇರಿಗಳು ಹಾಗೂ ಬ್ಯಾಂಕ್‌ ಎಲ್ಲೆ„ಸಿ, ಅಂಚೆ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದೆ. ದೂರದ ಊರಿನ ಬೆರಳೆಣಿಕೆಯ ಕೆಲವು ಅಂಗಡಿ ಮತ್ತು ವ್ಯವಹಾರ ಕೇಂದ್ರಗಳ ಮಾಲಕರು ನಿನ್ನೆ ರವಿವಾರ ಆದ ಕಾರಣ ಊರಿಗೆ ಹೋಗಿದ್ದವರು ಮತ್ತೆ ಸಮಸ್ಯೆ ಬೇಡವೆಂದು ತಮ್ಮ ಇಚ್ಚೆಯಲ್ಲಿ ಇಂದು ಬಾರದೆ ತಮ್ಮ ರಜೆಯನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಿದ್ದಾರೆ.

ಬಸ್ಸುಗಳು ಎಂದಿನಂತೆ ಮಂಗಳೂರು ಮತ್ತು ಉಡುಪಿ ಹಾಗೂ ಕಾರ್ಕಳದತ್ತಾ ಓಡಾಟ ನಡೆಸಿದೆ. ಕೆಲವು ಶಾಲೆಗಳು ಇಂದು ಪ್ರಾರಂಭ ಉತ್ಸವವನ್ನು ನಡೆಸಿದರೆ ಮುಂಜಾಗ್ರತ ಕ್ರಮವಾಗಿ ಕೆಲವೊಂದು ಶಾಲೆಗಳು ನಾಳೆ ಶಾಲೆಯನ್ನು ತೆರೆಯುವುದಾಗಿ ಪ್ರಕಟಿಸಿವೆ. ಬಂದ್‌ ಪ್ರಯುಕ್ತ ಪೊಲೀಸರಿಂದ ಬಿಗು ಬಂದೋಬಸ್ತು ಕಾರ್ಯವೂ ನಡೆದಿತ್ತು. ಉಳ್ಳಾಲ, ಕಿನ್ನಿಗೋಳಿ, ಮೂಡಬಿದಿರೆ, ಬಜಪೆಯಲ್ಲೂ ವ್ಯಾಪಾರ ವಹಿವಾಟುಗಳು ಎಂದಿನಂತೆಯೇ ನಡೆದವು.

Advertisement

ಸುರತ್ಕಲ್‌: ನೀರಸ ಪ್ರತಿಕ್ರಿಯೆ
ಸುರತ್ಕಲ್‌:
ರಾಜ್ಯ ರೈತ ಸಂಘ ಕರೆ ನೀಡಿದ್ದ ಬಂದ್‌ ಗೆ ಸುರತ್ಕಲ್‌ನಲ್ಲಿ ಯಾವುದೇ ಪ್ರಭಾವ ಬೀರಲಿಲ್ಲ. ಎಂದಿನಂತೆ ಜನ ಜೀವನ ಸಾಮಾನ್ಯವಾಗಿತ್ತು. ಬಂದ್‌ ಕರೆ ನೀಡಿದ್ದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೂ ಇರಲಿಲ್ಲ.

ಮೂಡಬಿದಿರೆ: ಬಂದ್‌ ಇಲ್ಲ
ಮೂಡಬಿದಿರೆ:
ಕರ್ನಾಟಕ ಬಂದ್‌ ಗೆ ಮೂಡಬಿದಿರೆಯಲ್ಲಿ ಬೆಂಬಲ ಕಂಡುಬರಲಿಲ್ಲ. ಬೆಳಗ್ಗೆ ಕೆಲವು ಬಸ್‌ಗಳು ಓಡಾಡದಿದ್ದರೂ ಮತ್ತೆ ರಸ್ತೆಗಿಳಿದವು. 10 ಗಂಟೆಯವರೆಗೆ  ಎರಡು ಮೂರು ಹೊಟೇಲ್‌ಗ‌ಳು ತೆರೆಯಲಿಲ್ಲ. ಬಳಿಕ ಎಲ್ಲವೂ ತೆರೆದುಕೊಂಡಿದ್ದು ಜನಜೀವನ ಯಥಾಪ್ರಕಾರ ನಡೆದಿದೆ. ಯಾವ ರೀತಿಯಲ್ಲೂ ಯಾರಿಗೂ ಬಂದ್‌ ನಡೆಸುವಂತೆ ಪಕ್ಷದ ವತಿಯಿಂದ ಕರೆ ನೀಡಿರಲಿಲ್ಲ ಎಂದು ಮೂಡಬಿದಿರೆ ನಗರ ಬಿಜೆಪಿ ಅಧ್ಯಕ್ಷ ರಾಜೇಶ್‌ ಮಲ್ಯಾ ತಿಳಿಸಿದ್ದಾರೆ.

ಬಂದ್‌ ಆಚರಿಸಿದರೆ ಕ್ರಮ: ಕಮಿಷನರ್‌ ಎಚ್ಚರಿಕೆ
ಬಂದ್‌ ಗೆ ಕರೆ ನೀಡುವುದು ಕಾನೂನು ಬಾಹಿರ; ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನೀಡಿರುವ ಕೆಲವು ತೀರ್ಪುಗಳ ಪ್ರಕಾರ ಯಾವುದೇ ಕಾರಣಕ್ಕೂ ಬಂದ್‌ ನಡೆಸುವಂತಿಲ್ಲ ; ಬಂದ್‌ ಆಚರಿಸಲು ಮುಂದಾದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ವಿಪುಲ್‌ ಕುಮಾರ್‌ ರವಿವಾರ ಎಚ್ಚರಿಕೆ ನೀಡಿದ್ದರು. ಬಂದ್‌ ಆಚರಣೆಯ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರು ಸೂಕ್ತ ಬಂದೋಬಸ್ತು ವ್ಯವಸ್ಥೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ನಿಯೋಜನೆಗೊಂಡು ಕಾವಲು ನಿಂತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next