Advertisement

ರೈತರಿಂದ ಬಲವಂತವಾಗಿ ಭೂಸ್ವಾಧೀನ ಮಾಡಲ್ಲ; ಸಚಿವ ನಿರಾಣಿ

04:42 PM Jul 08, 2022 | Team Udayavani |

ದೇವನಹಳ್ಳಿ: ಯಾವುದೇ ಕಾರಣಕ್ಕೂ ಕೈಗಾರಿಕಾ ಉದ್ದೇಶಗಳಿಗಾಗಿ ರೈತರಿಂದ ಬಲವಂತವಾಗಿ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಬಾರದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ರೈತರ ನಿಯೋಗ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಸ್ಥಾಪನೆಗಳಿಗೆ ರೈತರಿಂದ ಒತ್ತಾಯಪೂರ್ವಕವಾಗಿ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಬಾರದು. ಇದು ನಮ್ಮ ಸರ್ಕಾರದ ಸ್ಪಷ್ಟ ನಿಲುವು ಎಂದು ಸ್ಪಷ್ಟಪಡಿಸಿದರು.

ಯಾರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಜಮೀನು ನೀಡುತ್ತಾರೋ ಅದನ್ನು ಮಾತ್ರ ಭೂಸ್ವಾಧೀನ ಮಾಡಿಕೊಳ್ಳಬೇಕು. ಬಲವಂತವಾಗಿ ಇಲ್ಲವೇ ಬೆದರಿಕೆ ಹಾಕಿ ಭೂಮಿಯನ್ನು ವಶಪಡಿಸಿಕೊಳ್ಳಬಾರದು. ಹಾಗೊಂದು ವೇಳೆ ರೈತರಿಂದ ದೂರು ಬಂದರೆ ಅಂತಹ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಮೊದಲು ಧರಣಿ ಕೈಬಿಡಿ: ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಇದರಿಂದ ರಾಜ್ಯದ ಆರ್ಥಿಕಾಭಿವೃದ್ಧಿ ಸ್ಥಾಪನೆಯಾಗುತ್ತದೆ. ಜೊತೆಗೆ ಉದ್ಯೋಗವೂ ಸೃಷ್ಟಿಯಾಗಲಿದೆ. ಒಂದನ್ನು ಪಡೆಯಬೇಕಾದರೆ ಮತ್ತೂಂದನ್ನು ತ್ಯಾಗ ಮಾಡಬೇಕಾಗುತ್ತದೆ. ನಮ್ಮ ರಾಜ್ಯದಲ್ಲೂ ಕೈಗಾರಿಕೆಗಳ ಬೆಳೆವಣಿಗೆಗೆ ಭೂಸ್ವಾಧೀನ ಮಾಡಿಕೊಳ್ಳುವುದು ಅನಿವಾರ್ಯ. ಆದರೆ, ನಾವು ಅದಕ್ಕಾಗಿ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಪುನರುಚ್ಚರಿಸಿದರು. ನೀವು ಸಂತೋಷವಾಗಿ ನಿಮ್ಮ ನಿಮ್ಮ ಗ್ರಾಮಗಳಿಗೆ ತೆರಳಿ, ಮೊದಲು ಧರಣಿಯನ್ನು ಕೈ ಬಿಡಿ ಎಂದು ಮನವಿ ಮಾಡಿಕೊಂಡರು.

ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಚನ್ನರಾಯಪಟ್ಟಣದಲ್ಲಿ 1777 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ಗುರುತು ಮಾಡಲಾಗಿದೆ. ಇದಕ್ಕೆ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಸ್ವಾಧೀನ ಮಾಡಿಕೊಳ್ಳುತ್ತೇವೆ, ಇದಕ್ಕೆ ನಿಮ್ಮ ಒಪ್ಪಿಗೆ ಇಲ್ಲದೆ ಏನು ಮಾಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಇನ್ನೊಂದು ಬಾರಿ ರೈತ ನಿಯೋಗ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ರೈತರು ಗಾಬರಿ ಪಡುವ ಅಗತ್ಯವಿಲ್ಲ, ಅಥವಾ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ನಿಮ್ಮ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Advertisement

ಪೌರಾಡಳಿತ ಸಚಿವ ಎಂಟಿಬಿ ನಾಗರಾಜು ಮಾತನಾಡಿ, ರೈತರಿಂದ ಬಲವಂತವಾಗಿ ಭೂಮಿ ಯನ್ನು ಪಡೆಯೊಲ್ಲ. ರೈತರಿಗೆ ಅನ್ಯಾಯ ಮಾಡುವುದಿಲ್ಲ. ಕೈಗಾರಿಕೆಗಳ ಆರಂಭದಿಂದ ಉದ್ಯೊಧೀಗ ವಕಾಶ ಗಳು ದೊರೆತು ಆರ್ಥಿಕಾಭಿವೃದ್ಧಿಗೆ ನೆರವಾಗಲಿದೆ ಎಂದರು.

ರೈತರು ನೆಮ್ಮದಿಯಿಂದ ಇರಬೇಕು: ಶಾಸಕ ಎಲ್‌.ಎನ್‌ .ನಾರಾಯಣಸ್ವಾಮಿ ಮಾತನಾಡಿ, ರೈತರು 95ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ವಿಧಾನಸೌಧದಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಚನ್ನರಾಯ ಪಟ್ಟಣ ಭೂಸ್ವಾಧೀನ ಪ್ರತಿಭಟನೆ ರೈತರು ಹಗಲು-ರಾತ್ರಿ ಪ್ರತಿಭಟನೆ ಮಾಡುತ್ತಿರುವುದು ನೋಡಲು ಆಗುತ್ತಿಲ್ಲ.

ಸರ್ಕಾರ ಮತ್ತು ಸಚಿವರು ಇದರ ಬಗ್ಗೆ ಇತ್ಯರ್ಥ ಪಡಿಸಬೇಕು. ತಾಲೂಕಿನ 2.50 ಲಕ್ಷ ರೈತರು ಸುಖ,ಶಾಂತಿ, ನೆಮ್ಮದಿಯಿಂದ ಇರಬೇಕು. ರೈತರಿಗೆ ಅನ್ಯಾಯ ಮಾಡುವ ಕೆಲಸ ನನ್ನ ದೇಹದಲ್ಲಿ ಉಸಿರಿರುವ ತನಕ ಮಾಡುವುದಿಲ್ಲ. ಈಗಾಗಲೇ ಸಚಿವರಿಗೆ ಮನವರಿಕೆ ಮಾಡಿದ್ದೇನೆ ಎಂದು ಹೇಳಿದರು. ಸಂಸದ ಬಿ.ಎನ್‌. ಬಚ್ಚೇಗೌಡ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಉಪವಿಭಾಗಾಧಿಕಾರಿ ತೇಜಸ್‌ಕುಮಾರ್‌, ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಕೆಐಎಡಿಬಿ ಸಿಇಒ ಶಿವಶಂಕರ್‌, ತಹಶೀಲ್ದಾರ್‌ ಶಿವರಾಜ್‌, ರೈತ ಮುಖಂಡರು ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next