Advertisement
ಪ್ಯಾರಿಸ್ ಒಲಿಂಪಿಕ್ಸ್ ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ಟೊ ಜೋಡಿ ಸ್ಪರ್ಧಿಸಿತ್ತು. ಆದರೆ ಗ್ರೂಪ್ ಹಂತದಲ್ಲೇ ಸೋತು ಕೂಟದಿಂದ ಹೊರಬಿದ್ದಿತ್ತು. ಇದರ ಬೆನ್ನಲ್ಲೇ, ಟಿಒಪಿಎಸ್ ಮೂಲಕ ಅಶ್ವಿನಿ ಮತ್ತು ತನಿಷಾ ತಲಾ 1.5 ಕೋಟಿ ರೂ. ನೆರವು ಪಡೆದ ಹೊರತಾಗಿಯೂ ಒಲಿಂಪಿಕ್ಸ್‌ನಲ್ಲಿ ಅವರು ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಇವರ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ ಅಶ್ವಿನಿ, ಅವೆಲ್ಲ ಸುಳ್ಳು ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಶ್ವಿನಿ, ಸತ್ಯಾಸತ್ಯತೆ ಪರಿಶೀಲಿಸದೆ ಹೇಗೆ ವರದಿಯೊಂದನ್ನು ಬರೆಯಲು ಸಾಧ್ಯ? ಇಂತಹ ಸುಳ್ಳುಗಳನ್ನು ಯಾಕಾದರೂ ಬರೆಯುತ್ತಾರೆ? ನಾವು ತಲಾ 1.5 ಕೋಟಿ ರೂ. ಪಡೆದಿದ್ದೇವೆಯೇ? ಯಾರು ಕೊಟ್ಟಿದ್ದು? ಯಾಕಾಗಿ? ನಾನಂತೂ ಈ ಹಣವನ್ನು ಪಡೆದಿಲ್ಲ. ನಾನು ಟಿಒಪಿಎಸ್ ಯೋಜನೆಯ ಭಾಗವಾಗಿರಲೂ ಇಲ್ಲ ಎಂದು ಬರೆದುಕೊಂಡಿದ್ದಾರೆ. 2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಎಚ್.ಎಸ್. ಪ್ರಣಯ್ 1.8 ಕೋಟಿ, ಅಶ್ವಿನಿ-ತನಿಷಾ ತಲಾ 1.5 ಕೋಟಿ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿಗೆ 5.62 ಕೋಟಿ ರೂ., ಜರ್ಮನಿಯಲ್ಲಿ ತರಬೇತಿಗಾಗಿ ಲಕ್ಷ್ಯ ಸೇನ್‌ಗೆ 26.60 ಲಕ್ಷ, ಫ್ರಾನ್ಸ್‌ನಲ್ಲಿ ಸಿಂಧು ತರಬೇತಿಗೆ ಸರಕಾರ 9.33 ಲಕ್ಷ ರೂ. ನೀಡಿತ್ತು ಎಂದು ವರದಿಯೊಂದು ಹೇಳಿತ್ತು. ಇಷ್ಟಾಗಿಯೂ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ವಿಭಾಗ ನೀರಸ ಪ್ರದರ್ಶನ ನೀಡಿದೆ ಎಂದು ಟೀಕೆ ವ್ಯಕ್ತವಾಗಿತ್ತು.