Advertisement

ಮಂಡ್ಯದ ಕೋವಿಡ್ ಸೋಂಕಿತ ಚಾಮರಾಜನಗರದ ಮದುವೆಗೆ ಬಂದಿರಲಿಲ್ಲ, ಆತಂಕ ಬೇಡ: ಡಿಸಿ

06:54 PM May 22, 2020 | keerthan |

ಚಾಮರಾಜನಗರ: ಕೋವಿಡ್-19 ಪಾಸಿಟಿವ್ ಆಗಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ (ಸಿಡಿಪಿಓ) ಹೆಳವರ ಹುಂಡಿಯ ಮದುವೆಯಲ್ಲಿ ಭಾಗಿಯಾಗಿರಲಿಲ್ಲ. ಹಾಗಾಗಿ ನಗರದ ಸೋಮವಾರಪೇಟೆಯ ವಧುವಿನ ಮನೆಯವರು ಸೋಂಕಿತನ ಸಂಪರ್ಕಕ್ಕೆ ಬರುವ ಸಾಧ್ಯತೆಯೇ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸ್ಪಷ್ಟಪಡಿಸಿದ್ದಾರೆ.

Advertisement

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಬ್ಬ ಅಧಿಕಾರಿಗೆ ಕೋವಿಡ್-19 ಪಾಸಿಟಿವ್ ಆಗಿದ್ದು, ಆ ಅಧಿಕಾರಿ ನಂಜನಗೂಡು ತಾಲೂಕಿನ ಹೆಳವರಹುಂಡಿ ಗ್ರಾಮದ ಮದುವೆಯಲ್ಲಿ  ಭಾಗಿಯಾಗಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮದುವೆಯ ವಧು ಚಾಮರಾಜನಗರ ಪಟ್ಟಣದ ಸೋಮವಾರಪೇಟೆಯ ಹೆಳವರ ಕಾಲೋನಿ ನಿವಾಸಿಯಾಗಿದ್ದರು. ಹೀಗಾಗಿ ಮದುವೆಯಲ್ಲಿ ಭಾಗವಹಿಸಿದ್ದ ವಧುವಿನ ಮನೆಯವರಿಗೆ ಸೋಂಕು ತಗುಲಿರಬಹುದು. ಅವರನ್ನು ಕ್ವಾರಂಟೈನ್ ಮಾಡಲಾಗುವುದು ಎಂಬ ಸುದ್ದಿಗಳು ಪ್ರಕಟವಾಗಿದ್ದವು. ಈ ಬಗ್ಗೆ ಆರೋಗ್ಯಾಧಿಕಾರಿಗಳು, ಪೊಲೀಸರು ತನಿಖೆ ನಡೆಸಿದಾಗ, ಸದರಿ ಅಧಿಕಾರಿಗಾಗಲೀ, ವಧೂ ವರರ ಮನೆಯವರಿಗಾಗಲೀ ಯಾವುದೇ ಪರಿಚಯ ಇಲ್ಲ ಎಂಬುದು ಖಚಿತವಾಯಿತು.

ಆ ಅಧಿಕಾರಿ ಹೆಳವರ ಹುಂಡಿಗೆ ಬಂದಿದ್ದು ನಿಜ. ಆದರೆ ಆತ ಅಸ್ವಸ್ಥರಾಗಿದ್ದ ತಮ್ಮ ಅಜ್ಜಿಯನ್ನು ನೋಡಲು ಬಂದು ಮಂಡ್ಯಕ್ಕೆ ವಾಪಸಾಗಿದ್ದಾರೆ. ಈ ಮದುವೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಅವರೆಲ್ಲ ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ರವಿ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದರು.

ಇದಲ್ಲದೇ ಸದರಿ ಪಾಸಿಟಿವ್ ದೃಢ ಅಧಿಕಾರಿ ಚಾಮರಾಜನಗರ ತಾಲೂಕಿನ ಕೆರೆಹಳ್ಳಿಯಲ್ಲಿ ಮೀನನ್ನು ಖರೀದಿಸಲು ಹೋಗಿದ್ದರು ಎಂಬ ವದಂತಿಗಳೂ ಹರಡಿದ್ದವು. ಆದರೆಆ ಅಧಿಕಾರಿ ಹೋಗಿರಲಿಲ್ಲ.  ಅವರ ಹೆಸರಿನವರೇ ಆದ ಅವರ ಭಾವಮೈದ ಮೀನು ಕೊಳ್ಳಲು ಬಂದಿದ್ದರು ಎಂದು ಡಿಸಿ ಸ್ಪಷ್ಟನೆ ನೀಡಿದರು.

ನಮ್ಮ ಜಿಲ್ಲೆ ಎವರ್ ಗ್ರೀನ್. ನಮ್ಮ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿಯಿಂದ ಆತಂಕಗೊಂಡಿದ್ದ ಜನತೆ ನಿರಾಳವಾಗಿರಬಹುದು. ನಮ್ಮ ಜಿಲ್ಲೆ ಇವತ್ತೂ ಗ್ರೀನ್ ಮುಂದೆಯೂ ಗ್ರೀನ್ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next