ಗುಳೇದಗುಡ್ಡ: ಗುಳೇದಗುಡ್ಡ ತಾಲೂಕು ಕೇಂದ್ರದ ತಹಶೀಲ್ದಾರ್ ಕಚೇರಿಯಲ್ಲಿ ಸೌಲಭ್ಯಗಳಿಲ್ಲದೇ ಜನರು ಪರದಾಡುವಂತಾಗಿದೆ. ಗುಳೇದಗುಡ್ಡ ಪಟ್ಟಣ ತಾಲೂಕು ಕೇಂದ್ರವಾಗಿ ರಚನೆಯಾಗಿದ್ದರೂ ತಾಲೂಕು ಕಚೇರಿ ಆರಂಭವಾಗಿಲ್ಲ. ಸದ್ಯದ ತಹಶೀಲ್ದಾರ್ ಕಚೇರಿಯಲ್ಲಿ ಯಾವುದೇ ಸೌಲಭ್ಯಗಳು ಸಮರ್ಪಕವಾಗಿಲ್ಲ.
ಒಂದಿದ್ದರೇ ಇನ್ನೊಂದಿಲ್ಲ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಒಂದಿದ್ದರೇ ಇನ್ನೊಂದಿಲ್ಲ ಎನ್ನುವಂತಾಗಿದೆ. ಸದ್ಯ ಮೂರ್‍ನಾಲ್ಕು ಕಿಬೋರ್ಡ್‌ಗಳು ಕೆಟ್ಟು ಹೋಗಿದ್ದು, ಜಾತಿ ಆದಾಯ ಪ್ರಮಾಣ ಪತ್ರ ಅರ್ಜಿ ಸ್ವೀಕರಿಸುವ ಆಪರೇಟರ್ ಹತ್ತಿರ ಇರುವ ಕಿಬೋರ್ಡ್‌ನ್ನೆ ಕಚೇರಿಯಲ್ಲಿ ಮೂರ್‍ನಾಲ್ಕು ಸಿಬ್ಬಂದಿ ಉಪಯೋಗಿಸುತ್ತಾರೆ. ಒಬ್ಬರ ಕೆಲಸ ಮುಗಿಯುವವರೆಗೂ ಕೀಬೋರ್ಡ್‌ಗಾಗಿ ಕಾಯಬೇಕು.
ಕಂದಾಯ ನಿರೀಕ್ಷಕರಿಗಿಲ್ಲ ಕಿಬೋರ್ಡ್: ಸಾರ್ವಜನಿಕರು ಸಲ್ಲಿಸಿದ ಅರ್ಜಿ ಪರಿಶೀಲಿಸಿ, ತಂಬ್ ನೀಡಲು ಕಂದಾಯ ನಿರೀಕ್ಷಕರಿಗೆ ಕೀಬೋರ್ಡ್ ಇಲ್ಲ. ಆಪರೇಟರ್ ಹತ್ತಿರ ಇರುವ ಒಂದೇ ಕೀಬೋರ್ಡ್ ತರಿಸಿಕೊಂಡು ಅವರು ಕೆಲಸ ಮಾಡುತ್ತಾರೆ. ಕೇಳಿದರೆ ಇಲಾಖೆಯವರು ಕಳಿಸಿಲ್ಲ ಎಂದು ಸಿಬ್ಬಂದಿ ಉತ್ತರಿಸುತ್ತಾರೆ.
ವಿಶೇಷ ತಹಶೀಲ್ದಾರ್ ಕಚೇರಿಯಿದ್ದಾಗಲೂ ಸಮರ್ಪಕ ಸೌಲಭ್ಯಗಳಿರಲಿಲ್ಲ. ಆಗಲೂ ಕೂಡಾ ಕೀಬೋರ್ಡ್, ಪ್ರಿಂಟರ್ ಒಂದೇ ಇರುತ್ತಿತ್ತು. ಇದರಿಂದ ಸಿಬ್ಬಂದಿ ಇರುವುದರಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಪ್ರಿಂಟರ್ ಅಷ್ಟೇ ಅಲ್ಲ ಕೆಲವು ಸಲ ಪ್ರಿಂಟ್ ಕೊಡುವ ಪೇಪರ್ ಗಳೇ ಇರುತ್ತಿರಲಿಲ್ಲ. ಸಾರ್ವಜನಿಕರೇ ಹೊರಗಿನಿಂದ ತಂದು ಪ್ರಮಾಣ ಪತ್ರ ಪಡೆದ ಉದಾಹರಣೆಗಳಿವೆ. ಜಿಲ್ಲಾಧಿಕಾರಿಗಳ ಕಚೇರಿಯವರು ಸ್ಟೇಶನರಿ ಸಾಮಗ್ರಿ ಒದಗಿಸಲು ಹಿಂದೇಟು ಹಾಕುತ್ತಾರೆಯೇ ಎಂಬ ಅನುಮಾನ ಮೂಡಿದೆ. ದುರಸ್ತಿಯಾಗದ ಜನರೇಟರ್: ತಹಶೀಲ್ದಾರ್ ಕಚೇರಿಗೆ ವಿದ್ಯುತ್ ಕೈ ಕೊಟ್ಟಾಗ ತೊಂದರೆಯಾಗಬಾರದೆಂದು ಜನರೇಟರ್ ಅಳವಡಿಸಲಾಗಿದೆ. ಅದು ಕೆಟ್ಟು ನಿಂತಿದ್ದರೂ ಅದರ ದುರಸ್ತಿಗೆ ಮುಂದಾಗಿಲ್ಲ.
ಶೌಚಾಲಯದ ವ್ಯವಸ್ಥೆ ಇಲ್ಲ: ಪಟ್ಟಣದ ತಹಶೀಲ್ದಾರ್ ಕಚೇರಿಯ ಪಕ್ಕದಲ್ಲಿ ಸಿಬ್ಬಂದಿಗೆ ಶೌಚಾಲಯವಿದೆ. ಆದರೆ ಅದು ಸ್ವಚ್ಛಗೊಳಿಸದ್ದಕ್ಕೆ ಗಬ್ಬೆದ್ದು ನಾರುತ್ತಿದೆ. ಪ್ಲಾಸ್ಟಿಕ್ ಹಾಳೆ ಸೇರಿದಂತೆ ಕಸಬಿದ್ದು ಬಿದ್ದು ಹಾಳಾಗಿ ಹೋಗಿದೆ. ಅದರ ಸ್ವತ್ಛತೆಗೆ ಗಮನವೇ ಹರಿಸಿಲ್ಲ. ಇದರಿಂದ ಶೌಚಾಲಯ ಇದ್ದು ಇಲ್ಲದಂತಾಗಿದೆ.ತಹಶೀಲ್ದಾರ್ ಕಚೇರಿಗೆ ಇದುವರೆಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿಲ್ಲ.
ತಹಶೀಲ್ದಾರ್ ಕಚೇರಿಗೆ ಮೂಲಸೌಕರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಚೇರಿಯ ಸ್ಟೇಶನರಿ ಸಾಮಗ್ರಿಗಳಿಗೆ ಟೆಂಡರ್ ಕರೆಯಲಾಗಿದೆ. ವಾರದಲ್ಲಿ ಪೂರೈಸಲಾಗುವುದು.
∙
ಎಸ್.ಎಸ್. ಇಂಗಳೆ,
ಬಾದಾಮಿ-ಗುಳೇದಗುಡ್ಡ
ತಹಶೀಲ್ದಾರ್‌ರು