Advertisement

ಮೂಲ ಸೌಲಭ್ಯ ಇಲ್ಲದೆ ಹದಗೆಟ್ಟ ಗದ್ದೇ ರಹಟಿ ಗ್ರಾಮ

05:02 PM Aug 27, 2018 | Team Udayavani |

ತಾವರಗೇರಾ: ಸ್ಥಳೀಯ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಗದ್ದೇರಹಟ್ಟಿ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, 40 ವರ್ಷಗಳಿಂದ ಈ ಗ್ರಾಮದ ರಸ್ತೆ ಡಾಂಬರ್‌ನ್ನೇ ಕಂಡಿಲ್ಲ. ರಸ್ತೆ, ಶೌಚಾಲಯ, ಶಾಲಾ ಅಭಿವೃದ್ಧಿ ಮತ್ತು ವಸತಿ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಗ್ರಾಮದ ಜನತೆ ವಂಚಿತರಾಗಿದ್ದಾರೆ.

Advertisement

ಅರಣ್ಯ ಇಲಾಖೆಯ ವ್ಯಾಪ್ತಿಯ ಜಾಗೆಯಲ್ಲಿ 40 ವರ್ಷಗಳಿಂದ 20ರಿಂದ 25 ಕುಟುಂಬಗಳು ವಾಸವಿದ್ದರೂ ಕಂದಾಯ ಗ್ರಾಮವಾಗಿ ಮಾರ್ಪಟ್ಟಿಲ್ಲ. ಈ ಕುರಿತಂತೆ ಹಲವಾರು ಬಾರಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಕುಷ್ಟಗಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಮೂಲ ಸೌಲಭ್ಯಗಳ ಪೂರೈಕೆ, ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಯಾರೂ ಮುಂದಾಗಿಲ್ಲ.

ಹಿಂದಿನ ಶಾಸಕ ದೊಡ್ಡನಗೌಡ ಪಾಟೀಲ ಅವರು, ಗದ್ದೇರಹಟ್ಟಿಯ ಸಮಸ್ಯೆಗಳ ಕುರಿತಂತೆ ವಿಧಾನಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಈ ವಿಷಯವಾಗಿ ಜಿಲ್ಲಾಧಿಕಾರಿಗೆ ಸರ್ಕಾರ ಸೂಚನೆ ನೀಡಿತ್ತು. ಆದರೆ ಇದುವರೆಗೆ ಗದ್ದೇರಹಟ್ಟಿಯನ್ನು ಕಂದಾಯ ಗ್ರಾಮವನ್ನಾಗಿ ಮಾರ್ಪಡುವ ಕುರಿತಂತೆ ಈವರೆಗೂ ಯಾವುದೇ ಜಿಲ್ಲಾಡಳಿತ ಯಾವುದೇ ಪ್ರಕ್ರಿಯೆ ಮುಂದಾಗಿಲ್ಲ.

ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ ಅಸಮರ್ಪಕವಾಗಿದೆ,. ಶಾಲೆಯ ಸುತ್ತಲೂ ಕಾಂಪೌಂಡ್‌ ನಿರ್ಮಿಸಿಲ್ಲ. ಬೇರೆ ಶಾಲೆಗಳಿಗೆ ಹೋಲಿಸಿದರೆ ಅತೀ ಹಿಂದುಳಿದ ಶಾಲೆಯಂತಿದೆ. ಕಂದಾಯ ಗ್ರಾಮಕ್ಕಾಗಿ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಇದರಿಂದ ರಸ್ತೆ ಸುಧಾರಣೆ, ವೈಯಕ್ತಿಕ ಶೌಚಾಲಯ, ರಸ್ತೆ ಮತ್ತು ವಿವಿಧ ವಸತಿ ಯೋಜನೆಗಳು ಪಡೆಯದೇ ಹಲವು ಕುಟುಂಬಗಳು ಗುಡಿಸಲಲ್ಲೇ ವಾಸವಾಗಿವೆ ಎನ್ನುತ್ತಾರೆ ಸ್ಥಳೀಯರಾದ ದುರಗನಗೌಡ ಗದ್ದಿ, ಯಂಕಪ್ಪ ಗದ್ದಿ ಹಾಗೂ ಹನುಮಂತ ಕುಶೆಕಾಳ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗದ್ದೇರಹಟ್ಟಿಯ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. 

ಗದ್ದೇರಹಟ್ಟಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಸ್ಥಳೀಯ ಆಡಳಿತವು ಸಹ ಮುಂದಾಗುತ್ತಿಲ್ಲ.
 ನರಿಯಪ್ಪ ಕುಶೆಕಾಳ, ಸ್ಥಳೀಯರು.

Advertisement

ಕುಷ್ಟಗಿ ತಾಲೂಕಿನ ತಾಂಡ ಹಾಗೂ ಹಟ್ಟಿಗಳು ಸೇರಿದಂತೆ ಒಟ್ಟು ಆರು ಜನ ವಸತಿಗಳನ್ನು ಕಂದಾಯ ಗ್ರಾಮಕ್ಕೆ ಸೇರ್ಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ಗದ್ದೇರಹಟ್ಟಿ ಕೂಡ ಸೇರಿದ್ದು, ಶೀಘ್ರದಲ್ಲಿ ಈ ಬಗ್ಗೆ ಆದೇಶ ಸಿಗಬಹುದು.
 ಎಂ. ಗಂಗಪ್ಪ, ತಹಶೀಲ್ದಾರ್‌, ಕುಷ್ಟಗಿ

ಎನ್‌. ಶಾಮೀದ್‌

Advertisement

Udayavani is now on Telegram. Click here to join our channel and stay updated with the latest news.

Next