ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವೃಂದಾವನ ಮತ್ತು ಬಾರ್‌ಸಾನಾ ವನ್ನು ಪವಿತ್ರ ತೀರ್ಥ ಕ್ಷೇತ್ರಗಳೆಂದು ಘೋಷಿಸಿದ್ದಾರೆ. ಇದರೆ ಇದರೊಂದಿಗೆ ಒಂದು ಕಟ್ಟಪ್ಪಣೆಯನ್ನೂ ಮಾಡಿದ್ದಾರೆ. ಅದೆಂದರೆ ಈ ಎರಡೂ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಮೊಟ್ಟೆ, ಮಾಂಸಾಹಾರ ಮತ್ತು ಮದ್ಯ ಸೇವನೆಯನ್ನು ನಿಷೇಧಿಸಲಾಗಿದೆ !
ನವೆಂಬರ್ 22ರಿಂದ ಮೂರು ಹಂತಗಳಲ್ಲಿ ನಡೆಯಲಿರುವ ಪೌರಾಡಳಿತ ಸಂಸ್ಥೆಗಳ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನಿರ್ಧಾರ ತಳೆದಿರುವುದು ಅಚ್ಚರಿ ಉಂಟುಮಾಡಿದೆ.
ಉತ್ತರ ಪ್ರದೇಶ ಸರಕಾರ ಈ ಸಂಬಂಧ ಹೊರಡಿಸಿರುವ ಅಧಿಕೃತ ಪ್ರಕಟನೆ ಹೀಗೆ ಹೇಳುತ್ತದೆ :
ಮಥುರಾದಲ್ಲಿನ ವೃಂದಾವನ ಶ್ರೀಕೃಷ್ಣನ ಹಾಗೂ ಆತನ ಅಣ್ಣ ಬಲರಾಮನ ಜನ್ಮ ಸ್ಥಳ. ಅಂತೆಯೇ ಇದು ವಿಶ್ವ ಪ್ರಸಿದ್ಧ ಪ್ರವಾಸೀ ತಾಣ. ಬಾರಸಾನಾ ರಾಧೆಯ ಜನ್ಮಸ್ಥಳ. ಲಕ್ಷಾಂತರ ಪ್ರವಾಸಿಗರು ಈ ಕ್ಷೇತ್ರವನ್ನು ಸಂದರ್ಶಿಸುತ್ತಾರೆ. ಈ ಎರಡು ಪುಣ್ಯ ಕ್ಷೇತ್ರಗಳ ಮಹತ್ವವನ್ನು ಹಾಗೂ ಪ್ರವಾಸಿಗರನ್ನು ದೃಷ್ಟಿಯಲ್ಲಿರಿಸಿಕೊಂಡು ಇವುಗಳನ್ನು ಪವಿತ್ರ ತೀರ್ಥ ಕ್ಷೇತ್ರಗಳೆಂದು ಘೋಷಿಸಲಾಗಿದೆ.
ವೃಂದಾವನ ಮತ್ತು ಬಾರಸಾನ ಪುಣ್ಯ ಕ್ಷೇತ್ರಗಳಲ್ಲಿ ಒಳ ಚರಂಡಿ ನಿರ್ಮಾಣ ಮತ್ತು ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಾಣಕ್ಕೆಂದು ಕೇಂದ್ರ ಸರಕಾರ ಈಚೆಗೆ 350 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ಮಥುರಾದಿಂದ 11 ಕಿ.ಮೀ. ದೂರ ಇರುವ ವೃಂದಾವನದಲ್ಲಿ ಸುಮಾರು 5,000 ದೇವಸ್ಥಾನಗಳಿವೆ.