Advertisement

ನಾಮಕಾವಸ್ಥೆಗೆ ಸೀಮಿತವಾದ ಲಾಕ್‌ಡೌನ್‌

02:14 PM Jul 20, 2020 | Suhan S |

ಭದ್ರಾವತಿ: ಭಾನುವಾರದ ಲಾಕ್‌ಡೌನ್‌ ನಾಮಕಾವಸ್ಥೆಯದ್ದು ಎನಿಸಿದೆ. ಸರ್ಕಾರ ಕಟ್ಟುನಿಟ್ಟಿನ ಲಾಕ್‌ಡೌನ್‌ ಎಂದು ಹೇಳಿದೆ. ಆದರೆ ವಾಸ್ತವದಲ್ಲಿ ಲಾಕ್‌ಡೌನ್‌ಗೆ ತಾಲೂಕಿನಲ್ಲಿ ವ್ಯಾಪಾರಸ್ಥರು ಮಾತ್ರ ಮಾನ್ಯತೆ ನೀಡಿ, ಮೆಡಿಕಲ್‌ ಶಾಪ್‌, ಹಾಲು, ಮಾಂಸದ ಅಂಗಡಿಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ಲಾಕ್‌ಡೌನ್‌ಗೆ ಪೂರಕವಾಗಿ ಸ್ಪಂದಿಸಿದ್ದಾರೆ.

Advertisement

ಆದರೆ ಹಲವು ನಾಗರಿಕರು ಮಾತ್ರ ಇದಕ್ಕೆ ಅಪವಾದವೆನ್ನುವಂತೆ ನಗರದ ಪ್ರಮುಖ ಬೀದಿಗಳಲ್ಲಿ ವಾಹನಗಳಲ್ಲಿ ಎಲ್ಲೆಂದರಲ್ಲಿ ಸಂಚರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಪೊಲೀಸರು ರಸ್ತೆಗಳಲ್ಲಿದ್ದರೂ ಸಹ ಏನನ್ನೂ ಮಾಡಲಾಗದ ಸ್ಥಿತಿ ಅವರದ್ದಾಗಿದೆ. ಸರ್ಕಾರ ಒಂದೆಡೆ ಲಾಕ್‌ ಡೌನ್‌ ಯಶಸ್ವಿಯಾಗಬೇಕೆಂದು ಜನಸಂಚಾರ ರಸ್ತೆಗಳಲ್ಲಿ ಇಲ್ಲದಂತೆ ನೋಡಿಕೊಳ್ಳಬೇಕೆನ್ನುತ್ತದೆ. ಆದರೆ ಮತ್ತೂಂದೆಡೆ ಮಾಂಸದ ಅಂಗಡಿ, ಮೀನು, ತರಕಾರಿ ಇತ್ಯಾದಿ ವಸ್ತುಗಳ ಮಾರಾಟಕ್ಕೆ ಲಾಕ್‌ಡೌನ್‌ವೇಳೆ ಅವಕಾಶ ಕಲ್ಪಿಸಿದೆ. ಇದರ ಜೊತೆಗೆ ಪೊಲೀಸರು ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎನ್ನುತ್ತದೆ. ಆದರೆ ಲಾಠೀಚಾರ್ಜ್‌ ಮಾಡಬೇಡಿ ಎನ್ನುತ್ತದೆ. ಈ ರೀತಿ ಇಬ್ಬಗೆ ನೀತಿಯ ಪ್ರದರ್ಶನವನ್ನು ಸರ್ಕಾರ ಮಾಡುತ್ತಿರುವುದರಿಂದ ಜನರು ಇದರ ದುರುಪಯೋಗಪಡೆದು ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಇದನ್ನು ನೋಡಿದರೂ ಏನೂ ಮಾಡಲಾಗದ ರೀತಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸರು ಅಳಲು ವ್ಯಕ್ತಪಡಿಸಿದರು.

ಸೀಲ್‌ಡೌನ್‌ ಕಥೆಯೂ ಅಷ್ಟೇ: ನಗರಸಭೆ, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಕಾಲಿಗೆ ಚಕ್ರ ಕಟ್ಟಿ ಕೊಂಡವರಂತೆ ವಿಶ್ರಾಂತಿಯಿಲ್ಲದೆ ಕೋವಿಡ್‌ ನಿಯಂತ್ರಣಕ್ಕೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ಫಲವಾಗಿ ನಗರಸಭೆ ವ್ಯಾಪ್ತಿಯಲ್ಲಿ ಈವರೆಗೆ 17 ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಸೀಲ್‌ಡೌನ್‌ ಮಾಡಲಾಗಿದೆ. ಸೀಲ್‌ಡೌನ್‌ ಆದ ಪ್ರದೇಶಗಳ ನಿವಾಸಿಗಳು ಕನಿಷ್ಟ 14ದಿನಗಳ ಕಾಲ ತಮ್ಮ ಮನೆಯಿಂದ ಹೊರಗೆ ಹೋಗುವಂತಿಲ್ಲ ಎಂಬ ನಿಯಮವಿದೆ. ಆದರೆ ಕೆಲವು ಕಡೆಗಳಲ್ಲಿ ಸೀಲ್‌ಡೌನ್‌ ಆದ ಪ್ರದೇಶದ ಜನರು ಈ ನಿಯಮ ಉಲ್ಲಂಘಿಸಿ ಬೇರೆ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಬಸವೇಶ್ವರ ವೃತ್ತದ ಸಮೀಪದ ಮಾರುಕಟ್ಟೆಯ ಪ್ರದೇಶದ ಸುತ್ತಮುತ್ತಲಿನ ಪ್ರದೇಶ ಸೀಲ್‌ಡೌನ್‌ ಮಾಡ ಲಾಗಿದ್ದರೂ ಸಹ ಅಲ್ಲಿನ ಕೆಲವು ನಿವಾಸಿಗಳು ಹೂ, ತರಕಾರಿ ವ್ಯಾಪಾರವನ್ನು ನಗರದ ಮುಖ್ಯ ರಸ್ತೆ ಬದಿಯಲ್ಲಿ ಮಾಡುತ್ತಿರುವುದು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next