Advertisement

ಡಬಲ್‌ ಡೆಕ್ಕರ್‌ ಬಸ್‌ ತಯಾರಿಕೆಗೆಯಾವ ಕಂಪನಿಗಳಿಗೂ ಇಲ್ಲ ಆಸಕ್ತಿ

11:24 AM Aug 02, 2017 | |

ಬೆಂಗಳೂರು: ನಗರದಲ್ಲಿ 90ರ ದಶಕದಲ್ಲಿದ್ದ “ಡಬಲ್‌ ಡೆಕ್ಕರ್‌’ ಬಸ್‌ಗಳನ್ನು ಮತ್ತೆ ರಸ್ತೆಗಿಳಿಸಲು ಬಿಎಂಟಿಸಿ ನಿರ್ಧರಿಸಿರುವುದೇನೋ ಸರಿ, ಆದರೆ ಈ ಮಾದರಿಯ ಬಸ್‌ಗಳ ತಯಾರಿಕೆಗೆ ಕಂಪೆನಿಗಳು ಆಸಕ್ತಿ ತೋರಿಸುತ್ತಿಲ್ಲ. ಇದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

Advertisement

ಪ್ರಯಾಣಿಕರನ್ನು ಆಕರ್ಷಿಸಲು ಹಾಗೂ ಬಸ್‌ಗಳ ಮೇಲಿನ ಪ್ರಯಾಣಿಕರ ಒತ್ತಡ ತಗ್ಗಿಸಲು “ಹೆರಿಟೇಜ್‌’ ರೂಪದಲ್ಲಿ ನಗರದಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಮರುಪರಿಚಯಿಸಲು ಬಿಎಂಟಿಸಿ ತೀರ್ಮಾನ ಕೈಗೊಂಡಿದೆ. ಡಿಸೆಂಬರ್‌ ಅಂತ್ಯದೊಳಗೆ ಈ ಮಾದರಿಯ ನಾಲ್ಕು  ಬಸ್‌ಗಳನ್ನು ನಗರದ ಪ್ರವಾಸಿ ತಾಣಗಳ ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭಿಸಲು ಬಿಎಂಟಿಸಿ ಅಧ್ಯಕ್ಷರು ಉದ್ದೇಶಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಬಿಎಂಟಿಸಿಗೆ ಅತಿ ಹೆಚ್ಚು ಬಸ್‌ಗಳನ್ನು ಪೂರೈಸುವ ಟಾಟಾ, ಅಶೋಕ ಲೈಲ್ಯಾಂಡ್‌ ಮತ್ತು ವೋಲ್ವೊ ಸೇರಿದಂತೆ ಪ್ರಮುಖ ಕಂಪೆನಿಗಳಿಗೆ 20 ದಿನಗಳ ಹಿಂದೆಯೇ ನಿಗಮದ ಅಧಿಕಾರಿಗಳು, “ಡಬ್ಬಲ್‌ ಡೆಕ್ಕರ್‌ ಬಸ್‌ಗಳನ್ನು ಮರುಪರಿಚಯಿಸಲು ಬಿಎಂಟಿಸಿ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಈ ಮಾದರಿಯ ಬಸ್‌ಗಳನ್ನು ತಯಾರಿಸಿ, ಪೂರೈಸಲು ಸಾಧ್ಯವೇ?’ ಎಂದು ಪತ್ರವನ್ನೂ ಬರೆದಿದ್ದಾರೆ. 

ಆದರೆ, ಇದುವರೆಗೆ ಲಿಖೀತ ಉತ್ತರ ಬಂದಿಲ್ಲ.  ಮೌಖೀಕವಾಗಿಯೂ ಕಂಪೆನಿಗಳ ಮುಖ್ಯಸ್ಥರಿಂದ ಪೂರಕ ಸ್ಪಂದನೆ ಸಿಕ್ಕಿಲ್ಲ. ಈ ಮಾದರಿಯ ಬಸ್‌ಗಳ ತಯಾರಿಕೆ ಸ್ಥಗಿತಗೊಂಡಿದೆ. ಮಾರುಕಟ್ಟೆಯಲ್ಲೂ ಬೇಡಿಕೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಸದ್ಯಕ್ಕಂತೂ ದೇಶದಲ್ಲಿ ಎಲ್ಲಿಯೂ ಹೊಸದಾಗಿ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಪರಿಚಯಿಸಿಲ್ಲ. ತಯಾರಿಕೆಯೂ ಆಗುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಹಿಂದೇಟಿಗೆ ಕಾರಣ
ಕಂಪೆನಿಗಳು ಮುಂದೆಬಂದರೂ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಹಾಗೊಂದು ವೇಳೆ ಡಬಲ್‌ ಡೆಕ್ಕರ್‌ ಬಸ್‌ ರಸ್ತೆಗಿಳಿಸಲೇಬೇಕಾದರೆ, ಕಂಪೆನಿಗಳ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವು ಹೊಸದಾಗಿ ಈ ಬಸ್‌ಗಳ ವಿನ್ಯಾಸ ಸಿದ್ಧಪಡಿಸಿ, ನಿರ್ಮಿಸಬೇಕಾಗಿದೆ. ಆದರೆ, ಇದಕ್ಕೆ ಹೆಚ್ಚು ವೆಚ್ಚ ತಗಲುತ್ತದೆ. ಆದಾಗ್ಯೂ ಬಿಎಂಟಿಸಿ ಕೇವಲ ನಾಲ್ಕು ಬಸ್‌ಗಳನ್ನು ಖರೀದಿಸುತ್ತಿದೆ. ಹೀಗಾಗಿ, ಕಂಪೆನಿಗಳು ಹಿಂದೇಟು ಹಾಕುತ್ತಿವೆ. ಈ ನಿಟ್ಟಿನಲ್ಲಿ ಸಾಧ್ಯವಾದರೆ ಮತ್ತೂಮ್ಮೆ ಕಂಪೆನಿಗಳನ್ನು ಸಂಪರ್ಕಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. 

Advertisement

“ರೆಡಿಮೇಡ್‌ ಇಲ್ಲ; ರೆಡಿ ಮಾಡಿ ಕೊಡಲಿ’
ಸದ್ಯಕ್ಕೆ ಡಬಲ್‌ ಡೆಕ್ಕರ್‌ ಬಸ್‌ಗಳು ಲಭ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ನನ್ನ ಪ್ರಕಾರ ಇದು ಸಮಸ್ಯೆಯೇ ಅಲ್ಲ. ಕಂಪೆನಿಗಳಲ್ಲಿ ರೆಡಿಮೇಡ್‌ ಇಲ್ಲ; ರೆಡಿ ಮಾಡಿಕೊಡಬಹುದು ಅಲ್ಲವೇ? ಅಷ್ಟಕ್ಕೂ ಮುಂಬೈ, ಕೊಲ್ಕತ್ತ, ತಿರುವನಂತಪುರಂ ಸೇರಿದಂತೆ ದೇಶದ ಇತರೆ ನಗರಗಳಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಅದೇ ರೀತಿ, ನಗರದಲ್ಲಿ ಈ ಹಿಂದಿದ್ದ ಈ “ಡಬಲ್‌ ಡೆಕ್ಕರ್‌’ಗಳನ್ನು ಮರುಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಅಧ್ಯಕ್ಷ ನಾಗರಾಜ (ಯಾದವ್‌) ತಿಳಿಸುತ್ತಾರೆ.

ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಕೂಡ ನಗರಗಳಲ್ಲಿ ಡಬಲ್‌ ಡೆಕ್ಕರ್‌ಗಳನ್ನು ಮರುಪರಿಚಯಿಸಬೇಕು ಎಂದು ಈಚೆಗೆ ನಡೆದ ಸಮ್ಮೇಳನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಎಲ್ಲ ರೀತಿಯಿಂದಲೂ ಈ ಮಾದರಿಯ ಬಸ್‌ಗಳ ಕಾರ್ಯಾಚರಣೆ ಬಗ್ಗೆ ಪೂರಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾಗಿ, ನಗರದ ರಸ್ತೆಗಳಲ್ಲಿ ಮತ್ತೆ ಈ ಬಸ್‌ಗಳು ರಸ್ತೆಗಿಳಿಯಲಿವೆ ಎಂದೂ ಹೇಳಿದರು. 

ಆದರೆ, ಮುಂಬೈ ಮತ್ತಿತರ ನಗರಗಳಲ್ಲಿ ಸಂಚರಿಸುತ್ತಿವೆ ಎನ್ನಲಾದ ಡಬಲ್‌ ಡೆಕ್ಕರ್‌ ಬಸ್‌ಗಳು ಹೊಸದಾಗಿ ಪರಿಚಯಿಸಿದ್ದಲ್ಲ; ಈ ಹಿಂದೆಯೇ ಇದ್ದವು. ಅವುಗಳು ಈಗಲೂ ಕಾರ್ಯಾಚರಣೆ ಮಾಡುತ್ತಿವೆ. ಹಾಗಾಗಿ, ಬಿಎಂಟಿಸಿಯಲ್ಲಿ ಮರುಪರಿಚಯಿಸಿದರೆ, ಇದು ಹೊಸ ಪ್ರಯೋಗವೇ ಆಗಲಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. 

ಡಬಲ್‌-ಸಿಂಗಲ್‌ಗ‌ಳ ನಡುವಿನ ವ್ಯತ್ಯಾಸ ಏನು? 
ಡಬಲ್‌ ಡೆಕ್ಕರ್‌ ಬಸ್‌ನ್ನು ಹೆಚ್ಚು-ಕಡಿಮೆ ಈಗಿರುವ ಚಾರ್ಸಿಯಲ್ಲೇ ನಿರ್ಮಿಸಬಹುದು. ಆದರೆ, ದುಪ್ಪಟ್ಟು ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಇರುವುದರಿಂದ ಎಂಜಿನ್‌ ಸಾಮರ್ಥ್ಯ, ನಿರ್ವಹಣೆ ಸೇರಿದಂತೆ ಎಲ್ಲವೂ ವ್ಯತ್ಯಾಸ ಇರುತ್ತದೆ. ಅದೇ ರೀತಿ, ಕೆಎಂಪಿಎಲ್‌ (ಕಿಲೋಮೀಟರ್‌ ಪರ್‌ ಲೀಟರ್‌) ಕಡಿಮೆ ಇದೆ. ಇನ್ನು ಸಾಮಾನ್ಯ ಬಸ್‌ (ಸಿಂಗಲ್‌ ಡೆಕ್ಕರ್‌)ಗಳ ಕಾರ್ಯಾಚರಣೆ ವೆಚ್ಚ (ಆಪರೇಷನಲ್‌ ಕಾಸ್ಟ್‌) ಪ್ರತಿ ಕಿ.ಮೀ.ಗೆ 40ರಿಂದ 45 ರೂ.ಗಳಾದರೆ, ಡಬಲ್‌ ಡೆಕ್ಕರ್‌ ಬಸ್‌ಗಳಲ್ಲಿ ಇದು 70ರಿಂದ 75 ರೂ. ಆಗಿದೆ ಎಂದು ಬಿಎಂಟಿಸಿಯ ಮೆಕಾನಿಕಲ್‌ ವಿಭಾಗದ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.   

ರಸ್ತೆಯಿಂದ ಮರೆಯಾಗಿದ್ದೇಗೆ ಡಬಲ್‌ ಡೆಕ್ಕರ್‌? 
ಈ ಹಿಂದೆ ನಗರದಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳಿದ್ದವು. ಆದರೆ, ಎಲ್ಲ ಮಾದರಿಯ ರಸ್ತೆಗಳಲ್ಲಿ ಇವುಗಳ ಸಂಚಾರ ಕಷ್ಟವಾಗಿದ್ದರಿಂದ, ಈ ಬಸ್‌ಗಳನ್ನು ಕೈಬಿಡಲಾಯಿತು. ದುಪ್ಪಟ್ಟು ಪ್ರಯಾಣಿಕರನ್ನು ಕೊಂಡೊಯ್ದರೂ, ಫ್ಲೈಓವರ್‌, ಅಂಡರ್‌ಪಾಸ್‌ಗಳಲ್ಲಿ ಈ ಬಸ್‌ಗಳ ಸಂಚಾರ ಅಸಾಧ್ಯ. ಬೆಳೆಯುತ್ತಿರುವ ಬೆಂಗಳೂರಿಗೆ ಇದು ಭವಿಷ್ಯದಲ್ಲಿ ಕಷ್ಟ ಎಂದು ನಿರ್ಧರಿಸಿ ಹಿಂಪಡೆಯಲಾಗಿತ್ತು ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ತುಂಬಾ ಪ್ರಯಾಣಿಕರದಟ್ಟಣೆ ಇರುವ ಪ್ರದೇಶಗಳಲ್ಲಿ ಡಬಲ್‌ ಡೆಕ್ಕರ್‌ ಬಸ್‌ ಹಾಕಬಹುದು. ಆದರೆ, ಇವುಗಳನ್ನು ಮರುಪರಿಚಯಿಸುವ ಮುನ್ನ ಪ್ರಯಾಣಿಕರಿಂದ ಅಭಿಪ್ರಾಯ ಸಂಗ್ರಹಿಸಿ, ಅಧ್ಯಯನ ನಡೆಸುವುದು ಸೂಕ್ತ. ಯಾಕೆಂದರೆ, ಈಗಿರುವ ಸಂಚಾರದಟ್ಟಣೆ, ರಸ್ತೆಗಳ ವಿನ್ಯಾಸಗಳಿಗೆ ಈ ಬಸ್‌ಗಳು ಹೊಂದುತ್ತವೆಯೇ ಎಂಬುದನ್ನು ನೋಡಬೇಕು. ಹಾಗಾಗಿ, ಪ್ರಾಯೋಗಿಕವಾಗಿ ಒಂದೆರಡು ಬಸ್‌ಗಳನ್ನು ರಸ್ತೆಗಿಳಿಸಬೇಕು. 
-ವಿನಯ್‌ ಶ್ರೀನಿವಾಸ್‌, ಬಿಎಂಟಿಸಿ ಬಸ್‌ ಪ್ರಯಾಣಿಕರ ವೇದಿಕೆ

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next