Advertisement

ಬಣವಿ ಒಟ್ಟುವಂತಿಲ್ಲ..ಭೆರಣಿ ತಟ್ಟುವಂತಿಲ್ಲ!ನಗರವೆಂಬ ಹಳ್ಳಿ ವಾರ್ಡುಗಳ ಅಭಿವೃದ್ಧಿ ವ್ಯಥೆ |

02:43 PM Aug 27, 2021 | Team Udayavani |

ವರದಿ: ಬಸವರಾಜ ಹೊಂಗಲ್

Advertisement

ಧಾರವಾಡ: ಈ ವಾರ್ಡುಗಳು ವಿದ್ಯಾನಗರಿ ಧಾರವಾಡದ ವ್ಯಾಪ್ತಿಯಲ್ಲಿದ್ದರೂ ಇಲ್ಲಿನ ಅನೇಕರು ಕೃಷಿಕರು. ಇವರ ಹೊಲಗಳು ಬಿನ್‌ ಶೇತ್ಕಿ ಮಾಡಿಸಲಾಗುತ್ತಿಲ್ಲ, ಕೃಷಿ ಚಟುವಟಿಕೆಗೆ ನಗರ ಜೀವನ ಒಗ್ಗುತ್ತಿಲ್ಲ. ಆರ್‌ಸಿಸಿ ಬಿಲ್ಡಿಂಗ್‌ಗಳ ಮುಂದೆ ಎಮ್ಮೆ ಕಟ್ಟಬೇಕು. ಟೆಂಡರ್‌ ಶ್ಯೂರ್‌ ರಸ್ತೆಯ ಫುಟ್‌ಪಾತ್‌ ಮೇಲೆಯೇ ತಿಪ್ಪೆ ಹಾಕಬೇಕು. ಒಟ್ಟಿನಲ್ಲಿ ಇವರದ್ದು ನಗರವೆಂಬ ಹಳ್ಳಿ ಮತ್ತು ಹಳ್ಳಿ ಸಂಸ್ಕೃತಿಯ ಹೈಟೆಕ್‌ ಸ್ವರೂಪ.

ಹೌದು. ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ 1 ರಿಂದ 9 ವಾರ್ಡುಗಳ ಸದ್ಯದ ಕಥೆ ಮತ್ತು ವ್ಯಥೆ ಇದು. ಬರೀ ಮಹಾನಗರ ಪಾಲಿಕೆಯಷ್ಟೇ ಅಲ್ಲ. ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ವಾರ್ಡುಗಳ ಅಭಿವೃದ್ಧಿಗೆ ಕೋಟಿ ಕೋಟಿಗಟ್ಟಲೇ ಹಣ ಸುರಿಯಲಾಗಿದೆ. ಆದರೆ ಅದೆಲ್ಲವೂ ಸಿರಿವಂತರು ಮತ್ತು ಸುಂದರ ಪ್ರದೇಶಗಳಲ್ಲಿಯೇ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡುವುದಕ್ಕೆಬಳಕೆಯಾದಂತಿದ್ದು,ಈವಾರ್ಡುಗಳಲ್ಲಿಯೇಕೆಲವಷ್ಟು ಪ್ರದೇಶಗಳು ಅಭಿವೃದ್ಧಿ ಕಂಡರೆ ಇನ್ನು ಕೆಲವಷ್ಟು ಪ್ರದೇಶಗಳು ತೀವ್ರ ನಿರ್ಲಕ್ಷéಕ್ಕೆ ಒಳಗಾಗಿವೆ. ಒಂದೆಡೆ ಸುಂದರ ರಸ್ತೆಗಳು, ಅಚ್ಚುಕಟ್ಟಾದ ಉದ್ಯಾನವನಗಳು, ಅಭಿವೃದ್ಧಿ ಕಂಡ ಒಳಚರಂಡಿ ವ್ಯವಸ್ಥೆ ಇದ್ದರೆ, ಅದೇ ವಾರ್ಡುಗಳಲ್ಲಿ ವಾಸ ಮಾಡುವ ಕಟ್ಟ ಕಡೆಯ ಪ್ರದೇಶಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಆದರೆ ಅತೀ ಹೆಚ್ಚು ಮತದಾರರು ವಾಸವಾಗಿದ್ದು ಈ ಕೊಳಚೆ ಪ್ರದೇಶಗಳಲ್ಲಿಯೇ.

ಬಣವಿ ಒಟ್ಟುವಂತಿಲ್ಲ, ಭೆರಣಿ ತಟ್ಟುವಂತಿಲ್ಲ: ಇನ್ನು ನಗರವೆಂಬ ಹಳ್ಳಿಯಲ್ಲಿರುವ ಕಮಲಾಪೂರ, ಮಾಳಾಪೂರ, ಚರಂತಿಮಠ ಗಾಡ್‌ ìನ್‌, ಕೋಳಿಕೇರಿ, ಸುಣಗಾರ ಓಣಿ, ಹೊಸ ಯಲ್ಲಾಪೂರ, ಕೆಲಗೇರಿ, ಕೃಷಿ ವಿವಿ, ಎತ್ತಿನಗುಡ್ಡ, ಮುರುಘಾಮಠ, ಮುರುಘರಾಜೇಂದ್ರ ನಗರ, ಹೆಬ್ಬಳ್ಳಿ ಅಗಸಿ ಒಳಗೊಳ್ಳುವ ವಾರ್ಡುಗಳಲ್ಲಿನ ಕೃಷಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚು ಕಡಿಮೆ 1.5 ಲಕ್ಷಕ್ಕೂ ಅಧಿಕ ಕುಟುಂಬಗಳು ಧಾರವಾಡ ನಗರದ ಹೊರ ವಲಯಗಳಿಗೆ ಅಂಟಿಕೊಂಡಿದ್ದು, ಈ ಪ್ರದೇಶಗಳಲ್ಲಿನ ಕೃಷಿಕರು ಇತ್ತ ನಗರ ಸೌಲಭ್ಯಗಳೂ ಇಲ್ಲದೇ, ಅತ್ತ ಕೃಷಿ ಚಟುವಟಿಕೆಗಳನ್ನು ವಿಸ್ತರಿಸದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ಮನೆಗಳಲ್ಲಿ ಈಗಲೂ ಜಾನುವಾರುಗಳಿವೆ. ಆದರೆ ಅವುಗಳಿಗೆ ನೀರು ಕುಡಿಸಲು ಕಾರ್ಪೋರೇಷನ್‌ ನಳ ಅವಲಂಬಿಸಿದ್ದಾರೆ. ಇದರ ಬಿಲ್ಲು ಭರಿಸುವುದು ಕಷ್ಟವಾಗುತ್ತಿದೆ. ದನಕರುಗಳಿಗೆ ಮೇವು ಅಗತ್ಯ ಆದರೆ ಬಣವಿ ಒಟ್ಟಲು ಜಾಗವಿಲ್ಲ. ಸಗಣಿ ಹಾಕಲು ತಿಪ್ಪೆಗಳಿಲ್ಲ. ಇನ್ನು ಕೆಲವು ರೈತ ಕುಟುಂಬಗಳು ನಗರ ಪ್ರದೇಶವನ್ನು ತೊರೆದು ಹೊಲಗಳಲ್ಲಿಯೇ ಮನೆ ಮಾಡಿಕೊಂಡಿದ್ದು, ಈ ನಗರದ ಸಹವಾಸವೇ ಸಾಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹಳ್ಳಿ ಮತ್ತು ನಗರ ಎರಡೂ ಸಂಸ್ಕೃತಿಗಳ ಮಿಶ್ರಣದಂತಿರುವ ಈ ವಾರ್ಡುಗಳಲ್ಲಿನ ಹೆಚ್ಚು ಕುಟುಂಬಗಳು ಸದ್ಯಕ್ಕೆ ಮತ್ತೂಮ್ಮೆ ಮತದಾನಕ್ಕಂತೂ ಸಜ್ಜಾಗಿವೆ.

ಕೋಳಿಕೇರಿ ಎಂಬ ಕೊಳಚೆ ಸಾಮ್ರಾಜ್ಯ: ಇನ್ನು ವಾರ್ಡ್‌ ನಂ.6ರ ವ್ಯಾಪ್ತಿಗೆ ಬರುವ ಕೋಳಿಕೇರಿ ಕಳೆದ 10 ವರ್ಷಗಳಿಂದ ಕೊಳಚೆ ಸಾಮ್ರಾಜ್ಯದ ಕೇಂದ್ರ ಬಿಂದುವಾಗಿ ಮಾರ್ಪಾಟಾಗುತ್ತಿದೆ. ಕೆರೆಯ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ 13 ಕೋಟಿ ರೂ.ಗಳನ್ನು ವ್ಯಯಿಸಿ ಅಭಿವೃದ್ಧಿ ಮಾಡುವುದಾಗಿ ಘೋಷಿಸಿತು. ಅಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೂಡ ಮಾಡಲಾಯಿತು. ಆದರೆ ನಂತರ ಬಂದ ಸರ್ಕಾರಗಳು ಈ ಬಗ್ಗೆ ಗಮನ ಹರಿಸಲಿಲ್ಲ. ಹೀಗಾಗಿ ಸದ್ಯಕ್ಕೆ ಕೋಳಿಕೇರಿ ಇನ್ನಷ್ಟು ತ್ಯಾಜ್ಯಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಗಬ್ಬು ವಾಸನೆ ಹೊರಸೂಸುತ್ತಿದೆ. ಪಕ್ಕದಲ್ಲಿಯೇ ಇರುವ ಸ್ಮಶಾನದಲ್ಲಿ ಸುಟ್ಟ ಹೆಣಗಳ ಬೂದಿ ಮಳೆಯಾಗುತ್ತಿದ್ದಂತೆಯೇ ಇದೇ ಕೆರೆಗೆ ಸೇರಿ ಬಿಡುತ್ತದೆ. ಅಷ್ಟೇಯಲ್ಲ, ಹೆಣ ಸುಡುವಾಗ ಅದರ ಬಾಯಲ್ಲಿ ಹಾಕುವ ಬಂಗಾರದ ತುಣಕುಗಳಿಗಾಗಿ ಸುಟ್ಟ ಬೂದಿಯನ್ನು ತಂದು ಈ ಕೆರೆಯಲ್ಲಿಯೇ ತೊಳೆಯಲಾಗುತ್ತಿದೆ. ಇನ್ನೊಂದೆಡೆ ಹಸಿರು ಪಾಚಿ ಕೆರೆಯನ್ನು ಆವರಿಸಿಕೊಂಡಿದ್ದು ಕೆರೆ ಅವ್ಯವಸ್ಥೆಗೆ ಸಾಕ್ಷಿಯಾಗಿ ನಿಂತಿದೆ.

Advertisement

ವಾಸನೆಯ ಕಿರಿ ಕಿರಿ: ಇನ್ನು ಕೆಲವು ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ಕಸದ ಗುಡ್ಡೆಗಳನ್ನು ಹಾಕುತ್ತಿದ್ದು, ಸುತ್ತಮುತ್ತಲಿನ ಜನರ ಗೋಳು ಹೇಳ ತೀರದಾಗಿದೆ. ಕೋಳಿಕೇರಿ ಪ್ರದೇಶದಲ್ಲಿ ಸದ್ಯಕ್ಕೆ ವಾಸನೆಯ ಕಿರಿ ಕಿರಿ ದೊಡ್ಡದಾಗಿದ್ದು, ಕೆರೆ-ಕೆರೆ ಪಕ್ಕದ ಗಟಾರಿನಿಂದ ಕೊಳಕು ದುರ್ವಾಸನೆ ಮನೆಗಳಿಗೆ ಹೊಡೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು, ಕೋಳಿಕೇರಿ ಪಕ್ಕದಲ್ಲಿ ನಿರ್ಮಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕ. ಈ ಘಟಕದಲ್ಲಿ ಕೆಲವಷ್ಟು ಘನ ಪದಾರ್ಥಗಳನ್ನು ಸುಟ್ಟಾಗ ಹೊರ ಸೂಸುವ ದುರ್ವಾಸನೆ ಕೋಳಿಕೇರಿ, ಹೊಸ ಯಲ್ಲಾಪೂರ, ದಾನೇಶ್ವರಿ ನಗರ, ಜನ್ನತ ನಗರ, ಶಿವಾನಂದ ನಗರ, ಚಪ್ಪರಬಂದ ಕಾಲೋನಿಗಳ ನಿವಾಸಿಗಳನ್ನು ಹೈರಾಣು ಮಾಡಿದೆ. ಡಿಪೋ ಗಟಾರದ ಅಕ್ಕಪಕ್ಕ ವಾಸಿಸುವ 300 ಕ್ಕೂ ಹೆಚ್ಚು ಕುಟುಂಬಗಳು ಗಟಾರು ವಾಸನೆಯಿಂದ ತಪ್ಪಿಸಿಕೊಳ್ಳಲಾಗದೇ ನಿತ್ಯ ರೋಧನ ಅನುವಿಸುತ್ತಿದ್ದಾರೆ. ಕದ ಹಾಕಿದ ಶೌಚಾಲಯಗಳು; ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಈ ಹಿಂದೆ ಬಯಲು ಶೌಚ ಹೆಚ್ಚಾಗಿತ್ತು. ಹೀಗಾಗಿ ಈ ಭಾಗದಲ್ಲಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಪಾಲಿಕೆಯಿಂದ ಶೌಚಾಲಯಗಳನ್ನು ಕಟ್ಟಲಾಗಿದೆ. ಆದರೆ ಅವುಗಳಿಗೆ ಬೀಗ ಹಾಕಲಾಗಿದ್ದು, ಅವುಗಳನ್ನು ಜನ ಬಳಸುತ್ತಿಲ್ಲ. ಜನ ಬಳಸುವಂತೆ ಅವುಗಳನ್ನು ಸುಸ್ಥಿತಿಯಲ್ಲಿ ಇಡಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ಶೌಚ ಸಮುಚ್ಚಯಗಳಿಗೆ ಬೀಗ ಜಡಿದರೆ, ಇನ್ನು ಕೆಲವಷ್ಟರಲ್ಲಿ ಅಕ್ರಮ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಕೆಲವು ಶೌಚಾಲಯ ಸಮುಚ್ಚಯಗಳಿದ್ದರೂ, ಅವುಗಳ ನಿರ್ವಹಣೆ ಸ್ಥಳೀಯರಿಗೆ ಮತ್ತು ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೋ ಕಡೆಗಳಲ್ಲಿ ಇವುಗಳನ್ನು ಕೂಡ ಅತಿಕ್ರಮಿಸಿಕೊಳ್ಳಲಾಗಿದೆ.

ಡಿಪೋ ಗಟಾರವೆಂಬ ಹೊಲಸು ಹಳ್ಳ: ದಿನದ 24 ಗಂಟೆಗಳ ಕಾಲ ನಗರದ ಶೇ.20ರಷ್ಟು ಪ್ರದೇಶದಿಂದ ಹೊರಬರುವ ಕೊಳಚೆ ನೀರು ಇದೇ ಹಳ್ಳದ ಮೂಲಕ ದಾಟಿ ಹೋಗಬೇಕು. 20 ಅಡಿಗಳಷ್ಟು ಆಳ ಮತ್ತು ಅಗಲ ಇರುವ ಇದೊಂದು ಕೊಳಚೆ ಗಟಾರ್‌ ಇನ್ನು ಅಲ್ಲಲ್ಲಿ ಅಭಿವೃದ್ಧಿ ಕಾಣದೇ ಉಳಿದಿದ್ದು, ದೊಡ್ಡ ಮಳೆ ಸುರಿದಾಗ ಸುತ್ತಲಿನ ಪ್ರದೇಶಗಳಿಗೆ ನೀರು ನುಗ್ಗುವಂತೆ ಅವ್ಯವಸ್ಥೆಗೆ ಸಾಕ್ಷಿಯಾಗಿ ನಿಂತಿದೆ. ಈ ಗಟಾರಕ್ಕೂ ಕೊಳಚೆ ನೀರು ಶುದ್ಧೀಕರಣ ಘಟಕ ಅಗತ್ಯವಿದ್ದು, ಹಲವಾರು ಬಾರಿ ಸ್ಥಳೀಯ ಮುಖಂಡರು, ಶಾಸಕರು ಬಹಿರಂಗವಾಗಿ ಈ ಬಗ್ಗೆ ಭಾಷಣ ಹೊಡೆದಿದ್ದಾರೆ. ಆದರೆ ಈವರೆಗೂ ಕೆಲಸ ಮಾತ್ರ ಅಚ್ಚುಕಟ್ಟಾಗಿ ಆಗುತ್ತಲೇ ಇಲ್ಲ .

Advertisement

Udayavani is now on Telegram. Click here to join our channel and stay updated with the latest news.

Next