ನವದೆಹಲಿ: ಕೊರೊನಾ ವೈರಸ್ ಸೋಂಕಿಗೆ ಜಗತ್ತೇ ಬೆಚ್ಚಿಬಿದ್ದಿದೆ. ಕೊರೊನಾ ವೈರಸ್ ಮಹಾಮಾರಿಗೆ ಲಸಿಕೆ ಕಂಡುಹಿಡಿಯುವ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಕೊರೊನಾ ವೈರಸ್ ವಿರುದ್ಧ ಡೆಟ್ಟಾಲ್ ಬಳಸಿ ಎಂಬುದಾಗಿ ಡೆಟ್ಟಾಲ್ ಪ್ರಾಡಕ್ಟ್ ಮೇಲೆ ನಮೂದಿಸಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಪು ಸೇರಿದಂತೆ ಹಲವು ವಸ್ತುಗಳನ್ನು ಡೆಟ್ಟಾಲ್ ಕಂಪನಿ ಉತ್ಪಾದಿಸುತ್ತಿದೆ. ಡೆಟ್ಟಾಲ್ ಬಾಟಲಿ ಹಿಂಬದಿಯಲ್ಲಿ ಕೀಟಾಣುಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂಬುದು ಈಗಾಗಲೇ ಸಾಬೀತಾಗಿದೆ ಎಂದಿದ್ದು, ಇದರಲ್ಲಿ ಕೊರೊನಾ ವೈರಸ್ ವಿರುದ್ಧವೂ ಡೆಟ್ಟಾಲ್ ಬಳಸಿ ಎಂದು ನಮೂದಿಸಿರುವುದಾಗಿ ನ್ಯೂಸ್ ಮಿನಿಟ್ ವರದಿ ವಿವರಿಸಿದೆ.
ಸಾಮಾಜಿಕ ಜಾಲತಾಣಿಗರೊಬ್ಬರು, ಆರು ತಿಂಗಳ ಮೊದಲೇ ಡೆಟ್ಟಾಲ್ ಕಂಪನಿಗೆ ಕೊರೊನಾ ಮಹಾಮಾರಿ ಲಗ್ಗೆ ಇಡಲಿದೆ ಎಂಬುದು ತಿಳಿಯಿತು ಎಂಬುದಾಗಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕೋವಿಡ್ 19 ಮಹಾಮಾರಿಗೆ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಿರುವಾಗ ರೆಕಿಟ್ ಬೆನ್‌ಕಿಸರ್ ಗ್ರೂಪ್( ಡೆಟ್ಟಾಲ್ ತಯಾರಿಕೆಯ ಕಂಪನಿ) ಪ್ರಕಟಣೆಯನ್ನು ನೀಡಿದ್ದು, ನಮ್ಮ ಉತ್ಪಾದನೆಯ ವಸ್ತು ಮಹಾಮಾರಿ Covid-19 ವೈರಸ್ ಬಗ್ಗೆ ಹೇಳಿಲ್ಲ ಎಂದು ತಿಳಿಸಿದೆ.
ಕೊರೊನಾ ವೈರಸ್ ನಲ್ಲಿ ಹಲವಾರು ವಿಧಗಳಿವೆ. ಸೋಂಕು ರೋಗವಾಗಿರುವ ಕೊರೊನಾ ಹಬ್ಬು ರೋಗವಾಗಿದೆ. ನಮ್ಮ ಸಂಸ್ಥೆಯ ಪ್ಯಾಕೇಜ್ ಅನ್ನು ಸಾರ್ಸ್ ((Severe Acute Respiratory Syndrome) ಮತ್ತು ಮೆರ್ಸ್ (Middle East Respiratory Syndrome) ಪ್ರಕಾರ ಅನಾರೋಗ್ಯಕ್ಕೆ ಕಾರಣವಾಗುವ ಕೊರೊನಾ ವೈರಸ್ ಬಗ್ಗೆ ನಮೂದಿಸಿರುವುದಾಗಿ ಸ್ಪಷ್ಟನೆ ನೀಡಿದೆ.
ಈಗ ಜಗತ್ತಿನಲ್ಲಿ ಹಬ್ಬಿರುವುದು ಕೋವಿಡ್ 19, ಡೆಟ್ಟಾಲ್ ಪ್ರೊಡಕ್ಟ್ ನಲ್ಲಿ Mers-CoV ಮತ್ತು SARSCoV) ಕೊರೊನಾವೈರಸ್ ಎಂದು ನಮೂದಿಸಲಾಗಿದೆ. ಹೊಸ ವೈರಸ್ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಡೆಟ್ಟಾಲ್ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು ಎಂಬ ಬಗ್ಗೆ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಆರ್ ಬಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದೆ.