Advertisement

ಕೋವಿಡ್ ನಿಂದ ಚೌತಿ ಕಳಾಹೀನ: ಹಬ್ಬಕ್ಕೆಂದು ಬೆಳೆದ ಕಬ್ಬಿಗಿಲ್ಲ ಬೇಡಿಕೆ

07:45 PM Aug 20, 2020 | mahesh |

ಕುಂದಾಪುರ: ಚೌತಿ ಹಬ್ಬದಲ್ಲಿ ಕಬ್ಬಿಗೆ ವಿಶೇಷ ಪ್ರಾಶಸ್ತ್ಯ. ಹೆಮ್ಮಾಡಿ ಗ್ರಾಮದ ಸಂತೋಷ ನಗರ ಸಮೀಪದ ಬುಗುರಿಕಡು ಎನ್ನುವ ಊರಲ್ಲಿ ಗೌರಿ ಹಬ್ಬ, ಚೌತಿ, ನವರಾತ್ರಿ, ತುಳಸಿ ಹಬ್ಬಕ್ಕೆಂದೇ ಕಬ್ಬು ಬೆಳೆಯುತ್ತಾರೆ. ಆದರೆ ಕೊರೊನಾದಿಂದಾಗಿ ಚೌತಿ ಆಚರಣೆ ಈ ಬಾರಿ ಕಳೆಗುಂದಿರುವುದರಿಂದ ಕಬ್ಬಿಗೂ ಬೇಡಿಕೆ ಇಲ್ಲದಾಗಿದ್ದು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.

Advertisement

ಬುಗುರಿಕಡುವಿನಲ್ಲಿ ಹಿಂದೆ ಅನೇಕರು ಹಬ್ಬಕ್ಕೆಂದು ಗದ್ದೆಗಳಲ್ಲಿ ಕಬ್ಬು ಬೆಳೆಯುತ್ತಿದ್ದರು. ಆದರೆ ಈಗ ಅಷ್ಟೊಂದು ಲಾಭದಾಯಕ ಅಲ್ಲವಾಗಿರುವುದರಿಂದ, ನೀರಿನ ಸಮಸ್ಯೆಯೂ ಇರುವುದರಿಂದ ಬುಗುರಿ ಕಡುವಿನಲ್ಲಿ ಶೀನಪ್ಪ ಪೂಜಾರಿ ಹಾಗೂ ಗೋಪಾಲ ಮೊಗವೀರ ಮಾತ್ರ ಕಬ್ಬು ಬೆಳೆಯುತ್ತಿದ್ದಾರೆ. ಬೆಳೆದ ಕಬ್ಬನ್ನು ಕುಂದಾಪುರ, ಗಂಗೊಳ್ಳಿ, ಮರವಂತೆ ಮತ್ತಿತರ ಭಾಗಗಳ ಅನೇಕ ಕಡೆಗಳಲ್ಲಿ ನಡೆಯುವ ಗಣೇಶೋತ್ಸವಕ್ಕೆ ಕೊಂಡೊಯ್ಯುತ್ತಾರೆ.

ಬೇಡಿಕೆ ಕುಂಠಿತ
ಪ್ರತಿ ವರ್ಷ ಒಂದು ಎಕರೆ ಗದ್ದೆಯಲ್ಲಿ ಕಬ್ಬು ಬೆಳೆಯುತ್ತಿದ್ದು, ಚೌತಿಗೆ 1,500 ಕಬ್ಬಿನ ಜೊಲ್ಲೆ ಕೊಡುತ್ತಿದ್ದರು. ಆದರೆ ಈ ಬಾರಿ ಈವರೆಗೆ ಕೇವಲ 700 – 800ರ ವರೆಗೆ ಮಾತ್ರ ಬೇಡಿಕೆ ಬಂದಿದೆ. 1 ಕಬ್ಬಿನ ಜೊಲ್ಲೆಯನ್ನು ಕಳೆದ ವರ್ಷ 30 ರೂ.ನಲ್ಲಿ ನಾವು ಕೊಡುತ್ತಿದ್ದರೆ, ಈ ಬಾರಿ 25 ರೂ. ದರದಲ್ಲಿ ಕೊಡುತ್ತಿದ್ದೇವೆ. ಇನ್ನು ಕಬ್ಬು ಕಟಾವು ಮತ್ತಿತರ ಕೆಲಸಗಳಿಗಾಗಿ ಕಬ್ಬಿನ ಜೊಲ್ಲೆ ಕಟಾವಿಗೆ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಾಗಿ ಬರುತ್ತಿದ್ದರು. ಈ ಬಾರಿ ಕೊರೊನಾದಿಂದಾಗಿ ತಮ್ಮ ತಮ್ಮ ಊರಿಗೆ ತೆರಳಿದವರು ವಾಪಸು ಬರಲಿಲ್ಲ ಎನ್ನುತ್ತಾರೆ ಶೀನಪ್ಪ ಪೂಜಾರಿ.
ಸಾಮಾನ್ಯವಾಗಿ ಕಬ್ಬು ಬೆಳೆಯಲು ಆರಂಭಿಸುವುದು ಫೆಬ್ರವರಿಯಲ್ಲಿ. ಆಗಸ್ಟ್‌ನಿಂದ ಕಬ್ಬು ಕಟಾವು ಆರಂಭ. ಆದರೆ ಕೊರೊನಾ ತೊಂದರೆ ಕೊಡಬಹುದು ಎನ್ನುವ ಅರಿವಿಲ್ಲದೆ ಪ್ರತಿ ವರ್ಷದಷ್ಟೇ ಕಬ್ಬು ಬೆಳೆದಿದ್ದಾರೆ.

ಅರ್ಧಕ್ಕರ್ಧ ಕಡಿಮೆ
ಈ ಬಾರಿ ಕೊರೊನಾದಿಂದಾಗಿ ಕಬ್ಬಿಗೆ ಅರ್ಧಕ್ಕರ್ಧ ಬೇಡಿಕೆ ಕಡಿಮೆಯಾಗಿದೆ. ಬೆಲೆಯೂ ಕಡಿಮೆ. ನಾವೂ ಸ್ವಲ್ಪ ಮಟ್ಟಿಗೆ ಕಡಿಮೆ ಬೆಲೆಯಲ್ಲಿಯೇ ಕೊಡುತ್ತಿದ್ದೇವೆ. ಹೊರ ರಾಜ್ಯದ ಕಾರ್ಮಿಕರಿಲ್ಲ ದಿರುವುದರಿಂದ ಕೆಲಸಕ್ಕೂ ಜನ ಕೊರತೆಯಾಗಿದ್ದು, ನಮ್ಮ ಮನೆಯವರೇ ಸೇರಿ ಮಾಡುತ್ತಿದ್ದೇವೆ.
– ಶೀನಪ್ಪ ಪೂಜಾರಿ, ಕಬ್ಬು ಬೆಳೆಗಾರರು

ನೀರಿನ ಸಮಸ್ಯೆ
ಮೊದಲ 3-4 ತಿಂಗಳು ಕಬ್ಬು ಬೆಳೆಗೆ ಹೆಚ್ಚು ನೀರು ಬೇಕಾಗುತ್ತದೆ. ಆದರೆ ಇಲ್ಲಿ ಮಾರ್ಚ್‌, ಎಪ್ರಿಲ್‌, ಮೇ ಯಲ್ಲಿ ನೀರಿನ ಅಭಾವ ಹೆಚ್ಚಿರುವುದರಿಂದ ಕಷ್ಟವಾಗುತ್ತದೆ. ನಾವು ಬೇರೆ ಕಡೆಯಿಂದ ದುಡ್ಡು ಕೊಟ್ಟು ನೀರು ತಂದು ಹಾಕುತ್ತಿದ್ದೇವೆ. ನೀರಿನ ಅಭಾವ ಹಾಗೂ ಕೊರೊನಾ ಕಾರಣದಿಂದ ಈ ಬಾರಿ ಹೆಚ್ಚಿನ ಕಬ್ಬು ಬೆಳೆದಿಲ್ಲ.
– ಗೋಪಾಲ ಮೊಗವೀರ ಬುಗುರಿಕಡು, ಕಬ್ಬು ಬೆಳೆಗಾರರು

Advertisement
Advertisement

Udayavani is now on Telegram. Click here to join our channel and stay updated with the latest news.

Next