Advertisement

ಬೆಳೆದ ತರಕಾರಿಗೆ ಬೇಡಿಕೆಯೂ ಇಲ್ಲ, ಬೆಲೆಯೂ ಇಲ್ಲ

09:20 PM May 05, 2021 | Team Udayavani |

ಕುಂದಾಪುರ:  ಗದ್ದೆಯಲ್ಲಿ ಟನ್‌ಗಟ್ಟಲೆ ತರಕಾರಿ ಬೆಳೆದಿದ್ದೇವೆ. ನಗರದ  ಅಂಗಡಿಗಳಿಗೆ ಹೋಗಿ ಕೊಡಲು ಬಸ್‌ ವ್ಯವಸ್ಥೆಯಿಲ್ಲ. ಬಾಡಿಗೆ ಮಾಡಿಕೊಂಡು ಹೋದರೆ ಸಿಗುವ ಹಣ ಪೂರ್ತಿ ಅದಕ್ಕೆ  ಆಗುತ್ತದೆ. ವಾರದ ಸಂತೆಯೂ ನಡೆಯು ತ್ತಿಲ್ಲ. ಊರಲ್ಲಿ ವ್ಯಾಪಾರವಿಲ್ಲ. ನಾವು ಈ ಬಾರಿ ಎಪ್ರಿಲ್‌- ಮೇನಲ್ಲಿ ತುಂಬಾ ಶುಭ ಸಮಾರಂಭಗಳಿವೆ ಎಂದುಕೊಂಡು ಸಾಕಷ್ಟು ತರಕಾರಿ ಬೆಳೆಸಿದ್ದೇವೆ. ಆದರೆ ಬೆಳೆದ ತರಕಾರಿಗೆ ಈಗ ಬೇಡಿಕೆಯೂ ಇಲ್ಲ; ಬೆಲೆಯೂ ಇಲ್ಲದಂತಾಗಿದೆ..

Advertisement

ಇದು ಹಕ್ಲಾಡಿ ಕುಂದಬಾರಂದಾಡಿ ಗ್ರಾಮದಲ್ಲಿರುವ 10ಕ್ಕೂ ಹೆಚ್ಚು ಮಂದಿ ರೈತರು “ಉದಯವಾಣಿ’ ಜತೆ ತಮ್ಮ ಸಂಕಟವನ್ನು ತೋಡಿಕೊಂಡರು.

ಇಲ್ಲಿ ಅನೇಕ ಮಂದಿ ರೈತರು ಎಕರೆಗಟ್ಟಲೆ ಗದ್ದೆಗಳಲ್ಲಿ ಸೌತೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಅಲಸಂಡೆ, ಬದನೆ, ಸೇರಿದಂತೆ ಅನೇಕ ವಿಧದ ತರಕಾರಿಗಳನ್ನು ಬೆಳೆಸಿದ್ದರು. ಆದರೆ ಈಗ ಜನತಾ ಕರ್ಫ್ಯೂನಿಂದಾಗಿ ತರಕಾರಿಯನ್ನು ಮಾರುಕಟ್ಟೆಗೂ  ತರಲಾಗದೇ, ಅಂಗಡಿಗಳಿಗೂ ಮಾರಾಟ ಮಾಡಲಾಗದೇ ತೊಂದರೆ ಅನುಭವಿಸುವಂತಾಗಿದೆ.

ಸೀಸನ್‌ನಲ್ಲೇ ಸಮಸ್ಯೆ :  ಕಳೆದ ವರ್ಷ ಕೋವಿಡ್, ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ನಷ್ಟ ಅನುಭವಿಸಿದ್ದ ರೈತರು, ಈ ಬಾರಿಯಾದರೂ ಆ ನಷ್ಟವನ್ನು ತುಂಬಬಹುದು ಎಂದು ನಂಬಿ ಕೊಂಡು, ಸಾಕಷ್ಟು ತರಕಾರಿ ಬೆಳೆಸಿದ್ದರು. ಅದರಲ್ಲೂ ಫೆಬ್ರವರಿ, ಮಾರ್ಚ್‌ನಲ್ಲಿ ಮೌಡ್ಯವಿದ್ದುದ್ದರಿಂದ,  ಎಪ್ರಿಲ್‌- ಮೇ ಸೀಸನ್‌ನಲ್ಲಿ ತುಂಬಾ ಮದುವೆ, ಗೃಹ ಪ್ರವೇಶ ಸಹಿತ ಅನೇಕ ಸಮಾರಂಭಗಳು ನಿಗದಿಯಾಗಿದ್ದವು. ಇದರಿಂದ ಈ ಬಾರಿಯ ಸೀಸನ್‌ ಉತ್ತಮ ಲಾಭ ತರ ಬಹುದು ಎಂದು ಕಾಯುತ್ತಿದ್ದ ರೈತರಿಗೆ ಮತ್ತೆ ಕೊರೊನಾ ಎರಡನೇ ಅಲೆ ಬರಸಿಡಿಲಿನಂತೆ ಬಂದೆರಗಿದೆ.

ನಾವು ಸುಮಾರು ಒಂದು ಎಕರೆ ಗದ್ದೆಯಲ್ಲಿ ಸೌತೆಕಾಯಿ ಬೆಳೆಸಿದ್ದೇವೆ. ಇದಕ್ಕೆ ಸುಮಾರು 25 ಸಾವಿರ ರೂ. ಖರ್ಚಾಗಿದೆ. ಆದರೆ ಈಗ ಕೇಳಿದರೆ ಯಾರಿಗೂ ಬೇಡ. ಅಂಗಡಿಗಳಲ್ಲಿ ಕೆ.ಜಿ.ಗೆ 3 ರೂ. ಕೊಡುತ್ತಾರೆ. ಕನಿಷ್ಠ 7-8 ರೂ. ಆದರೂ ಸಿಗದಿದ್ದರೆ ಹೇಗೆ ? ಅದರಲ್ಲೂ ರೋಗದಿಂದಲೂ ಸಾಕಷ್ಟು ಹಾಳಾಗಿದೆ. ಕಳೆದೆರಡು ವರ್ಷಗಳಿಂದ ತರಕಾರಿ ಬೆಳೆದರೂ ಬೇಡಿಕೆ ಹಾಗೂ ಬೆಲೆಯಿಲ್ಲದೆ ಭಾರೀ ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಕುಂದಬಾರಂದಾಡಿಯ  ಕೃಷಿಕ ಶಿಶಿರ್‌.

Advertisement

ಜನತಾ ಕರ್ಫ್ಯೂನಿಂದಾಗಿ ತರಕಾರಿ ಬೆಳೆದ ರೈತರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಅರಿವಿದ್ದು, ಅದಕ್ಕಾಗಿ ತರಕಾರಿ ಮಾರಾಟದ ಸಮಯವನ್ನು ಬದಲಾಯಿಸಲಾಗಿದೆ.  ಇಲ್ಲಿಯ ರೈತರು ಬೆಳೆದ ತರಕಾರಿಗಳನ್ನು ತೋಟಗಾರಿಕೆ ಇಲಾಖೆಯ ಅಧೀನದ ಹಾಪ್‌ಕಾಮ್ಸ್‌ ಮೂಲಕ ಖರೀದಿಸುವ ಪ್ರಯತ್ನ ಮಾಡಲಾಗುವುದು.   –ಸಂಜೀವ ನಾಯ್ಕ,ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕುಂದಾಪುರ

ಈಗ ಲಾಕ್‌ಡೌನ್‌ ಆಗಿರುವುದರಿಂದ ನಾವು ಬೆಳೆದ ತರಕಾರಿ ಯಾರಿಗೂ ಬೇಡ. ವಾರಕ್ಕೆರಡು ಸಲ ತೊಂಡೆಕಾಯಿ ಕೊಯ್ಯಬೇಕು. ಆದರೆ ಕೊಂಡು ಹೋಗಲು ಬಸ್ಸಿಲ್ಲ. ರಿಕ್ಷಾ ಬಾಡಿಗೆ ಮಾಡಿಕೊಂಡು ಹೋದರೆ ಅದಕ್ಕೆ 300 ರೂ. ಕೊಡಬೇಕು. ನಾವು ತರಕಾರಿ ಮಾರಿದಾಗ ಸಿಗುವ ಹಣ ಬಾಡಿಗೆಗೆ ನೀಡಬೇಕಾಗುತ್ತದೆ.  ಬಾಬು ಗಾಣಿಗ ಕುಂದಬಾರಂದಾಡಿ, ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next