Advertisement

3ನೇ ಅಲೆಯಲ್ಲಿ ಡೆಲ್ಟಾ ಆತಂಕವಿಲ್ಲ

11:53 PM Jun 24, 2021 | Team Udayavani |

ಹೊಸದಿಲ್ಲಿ: ದೇಶಕ್ಕೆ ಶೀಘ್ರದಲ್ಲಿಯೇ ಅಪ್ಪಳಿಸಲಿದೆ  ಎಂದು ನಿರೀಕ್ಷಿಸಲಾಗಿರುವ ಮೂರನೇ ಅಲೆಗೆ ಸದ್ಯ ಕಂಡುಬಂದಿರುವ ಡೆಲ್ಟಾ ಪ್ಲಸ್‌ ರೂಪಾಂತರಿ ಸೋಂಕು ಕಾರಣವಾಗಲಾರದು. ಹೀಗೆಂದು ಇನ್‌ಸ್ಟಿಟ್ಯೂಟ್‌ ಆಫ್ ಜೆನಾಮಿಕ್ಸ್‌ ಆ್ಯಂಡ್‌ ಇಂಟೆಗ್ರೇಟಿವ್‌ ಬಯಾಲಜಿ (ಐಜಿಐಬಿ)ಯ ನಿರ್ದೇಶಕ ಡಾ| ಅನುರಾಗ್‌ ಅಗರ್ವಾಲ್‌ ಹೇಳಿದ್ದಾರೆ.

Advertisement

“ಎನ್‌ಡಿಟಿವಿ’ ಆಂಗ್ಲ ಸುದ್ದಿವಾಹಿನಿ ಜತೆಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸದ್ಯ ಸೋಂಕಿನ ಸಂಖ್ಯೆಗಳು ಕಡಿಮೆಯಾಗಿವೆ ಎಂದು ಪ್ರತಿಬಂಧಕ ಕ್ರಮಗಳನ್ನು ತಗ್ಗಿಸುವಂತೆ ಇಲ್ಲ. ಸಾಮಾಜಿಕ ಅಂತರ ಸೇರಿದಂತೆ ಹಲವು ಮುಂಜಾಗರೂಕತ ಕ್ರಮಗಳನ್ನು ಮುಂದು ವರಿಸಬೇಕಾಗಿದೆ ಎಂದು ಹೇಳಿದ್ದಾರೆ. ಇದರ ಹೊರ ತಾಗಿಯೂ ಅದೊಂದು ಅಪಾಯಕಾರಿ ಎಂದು ಹೇಳಲು ಮರೆಯಲಿಲ್ಲ.

ಹಾಲಿ ತಿಂಗಳಲ್ಲಿಯೇ ಮಹಾರಾಷ್ಟ್ರದಲ್ಲಿ 3,500 ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಲಾ­ಗಿತ್ತು. ಎಪ್ರಿಲ್‌, ಮೇ ತಿಂಗಳ ಮಾದರಿಗಳೂ ಅದರಲ್ಲಿ ಸೇರಿಕೊಂಡಂತೆ ನಡೆಸಲಾಗಿರುವ ವಂಶ ವಾಹಿ ಅಧ್ಯಯನದಲ್ಲಿ ಕಂಡುಬಂದಿರುವ ಪ್ರಕಾರ ಡೆಲ್ಟಾ ಪ್ಲಸ್‌ ರೂಪಾಂತರಿ ಸೋಂಕು ಇತ್ತು. ಶೇಕಡಾ ವಾರು ಪ್ರಮಾಣದಲ್ಲಿ ಹೇಳುವುದಿದ್ದರೆ ಅದು ಒಂದಕ್ಕಿಂತ ಕಡಿಮೆ. ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿನ ಮಾದರಿಗಳ ಅಧ್ಯಯನದಿಂದ ಕೂಡ ಕಂಡುಬಂದಿ­ರು­ವುದೇನೆಂದರೆ ಶೇಕಡಾವಾರು ಪ್ರಮಾಣ ಕಮ್ಮಿಯೇ ಎಂದು ಹೇಳಿದ್ದಾರೆ.

30.72 ಕೋಟಿ ಡೋಸ್‌: ಗುರುವಾರ ರಾತ್ರಿ 7  ಗಂಟೆಯ ವರೆಗೆ ದೇಶದಲ್ಲಿ 30.72 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಜೂ.21ರಂದು 18 ವರ್ಷಕ್ಕಿಂತ ಮೇಲ್ಟಟ್ಟ­ವರಿಗೆ ಲಸಿಕೆ ನೀಡಲು ಆರಂಭಿಸಲಾಗಿತ್ತು. ಗುರು­ವಾರ ಒಂದೇ ದಿನ 54.07 ಲಕ್ಷ ಡೋಸ್‌ ಲಸಿಕೆ ನೀಡಲಾಗಿದ್ದು, ಇದು ಪ್ರಾಥಮಿಕ ಮಾಹಿತಿಯಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. 35,44,209 ಮೊದಲ ಡೋಸ್‌ ಮತ್ತು 67,627 ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಸರಕಾರ ತಿಳಿಸಿದೆ.

ಮತ್ತೆ ಲಾಕ್‌ಡೌನ್‌?: ಮಹಾರಾಷ್ಟ್ರದ ಏಳು ಜಿಲ್ಲೆಗಳಲ್ಲಿ 21 ಡೆಲ್ಟಾ ಪ್ಲಸ್‌ ರೂಪಾಂತರಿ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಠಿನ ಏಕೀಕೃತ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

Advertisement

ಐದು ಕೇಸು ಪತ್ತೆ: ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್‌ ರೂಪಾಂತರದ 5 ಕೇಸುಗಳು ಪತ್ತೆಯಾಗಿವೆ. ಒಬ್ಬ ಸೋಂಕಿತರು ಅಸುನೀಗಿದ್ದಾರೆ.

ಐಸಿಎಂಆರ್‌ ಅಧ್ಯಯನ: ದೇಶದಲ್ಲಿ ಮಾರಕವಾಗಿ­ರುವ ಡೆಲ್ಟಾ ಪ್ಲಸ್‌ ಅನ್ನು ಲಸಿಕೆಯಿಂದ ಸಾಧ್ಯವಿದೆಯೇ ಎಂಬ ಬಗ್ಗೆ ಐಸಿಎಂಆರ್‌ ಮತ್ತು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ ಜತೆಗೂಡಿ ಸಂಶೋಧನೆ ನಡೆಸುತ್ತಿವೆ.

ಏರಿಕೆ: ದೇಶದಲ್ಲಿ ಸೋಂಕಿನಿಂದ ಚೇತರಿಸಿ ಕೊಳ್ಳುವವರ ಪ್ರಮಾಣ ಶೇ.96.61ಕ್ಕೆ ಏರಿಕೆಯಾ­ಗಿದೆ. ಬುಧವಾರದಿಂದ ಗುರುವಾರದ ಅವಧಿಯಲ್ಲಿ 54,069 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದೇ ಅವಧಿಯಲ್ಲಿ 1,321 ಮಂದಿ ಕೊರೊನಾದಿಂದಾಗಿ ಅಸುನೀಗಿದ್ದಾರೆ. ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 6,27,057ಕ್ಕೆ ಇಳಿಕೆಯಾಗಿದೆ.

ಶೇ.60 ಪ್ರಭಾವಯುತ: 65 ವರ್ಷ ಮೇಲ್ಪಟ್ಟವರಲ್ಲಿ ಫೈಜರ್‌ ಅಥವಾ ಆಸ್ಟ್ರಾಜೆನೆಕಾ ಲಸಿಕೆಯ ಒಂದು ಡೋಸ್‌ ನೀಡಿದರೆ ಅವರಿಗೆ ಶೇ.60ರಷ್ಟು ಸೋಂಕಿ ನಿಂದ ರಕ್ಷಣೆ ಸಿಗುತ್ತದೆ. ಈ ಬಗ್ಗೆ ಲ್ಯಾನ್ಸೆಟ್‌ ಅಧ್ಯಯನದಲ್ಲಿ ಉಲ್ಲೇಖೀಸಲಾಗಿದೆ.

ತ್ರಿಪುರಾ ಶೇ.100 ಸಾಧನೆ : 45 ವರ್ಷ ಮೇಲ್ಪಟ್ಟವರಿಗೆ ಮೊದಲ ಹಂತದ ಕೊರೊನಾ ಲಸಿಕೆ ನೀಡುವುದರಲ್ಲಿ ದೇಶದಲ್ಲಿ ತ್ರಿಪುರಾ ಶೇ.100ರಷ್ಟು ಸಾಧನೆ ಮಾಡಿದೆ. ಈ ಬಗ್ಗೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ತಿಳಿಸಿದ್ದಾರೆ. ಜೂ.21, 22ರಂದು ರಾಜ್ಯದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ 18-44 ವರ್ಷ ವಯೋಮಿತಿ­ಯ­ವರಿಗೆ ಲಸಿಕೆ ಹಾಕಲು ವಿಶೇಷ ಆದ್ಯತೆ ನೀಡಲಾಗಿತ್ತು. ಜೂ.21ರಂದು 1,54,209 ಡೋಸ್‌ ಲಸಿಕೆ ನೀಡಲಾಗಿದೆ. ಜೂ.22 ರಂದು 1,85,559 ಡೋಸ್‌ ಲಸಿಕೆ ನೀಡಲಾಗಿದೆ. ಈ ಮೂಲಕ ಒಟ್ಟು 3,39,768 ಡೋಸ್‌ ಲಸಿಕೆಗಳನ್ನು 2 ದಿನಗಳಲ್ಲಿ ನೀಡಲಾಗಿದೆ. ಇದುವರೆಗೆ ರಾಜ್ಯದಲ್ಲಿ 14 ಲಕ್ಷ ಡೋಸ್‌ ಲಸಿಕೆಯನ್ನು ಜನರಿಗೆ ನೀಡಲಾಗಿದೆ.  ಕೊವಿನ್‌ ವೆಬ್‌ಸೈಟ್‌ ಮಾಹಿತಿ ಪ್ರಕಾರ ರಾಜ್ಯದಲ್ಲಿ ಶೇ.102ರಷ್ಟು ಅರ್ಹ ಮಂದಿಗೆ ಲಸಿಕೆ ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next