Advertisement
ಸುಮಾರು 35 ವರ್ಷಗಳ ಹಿಂದೆ ಸ್ಥಳೀಯರೇ ನಿರ್ಮಾಣ ಮಾಡಿದ್ದ ಈ ರಸ್ತೆಗೆ 20 ವರ್ಷಗಳ ಹಿಂದೆ ಜಯರಾಮ ಶೆಟ್ಟಿ ಶಾಸಕರಾಗಿದ್ದಾಗ ಡಾಮರು ಹಾಕಲಾಗಿತ್ತು. 10 ವರ್ಷಗಳಿಂದ ಈ ರಸ್ತೆಯ ಡಾಮರು ಕಿತ್ತು ಹೋಗಲು ಆರಂಭಿಸಿದ್ದು, ಐದು ವರ್ಷಗಳಿಂದ ರಸ್ತೆಯಲ್ಲಿ ನಡೆದಾಡುವುದೇ ದುಸ್ತರವಾಗಿದೆ. ಹಿಂದೆ ಡಾಮರು ಹಾಕುವಾಗ ಬಳಸಿದ್ದ ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿವೆ. ಈ ರಸ್ತೆಯಲ್ಲಿ ದ್ವಿಚಕ್ರ, ರಿಕ್ಷಾ ಚಾಲಕರು ಸಂಚಾರಕ್ಕೆ ಹಿಂದೇಟು ಹಾಕುವಂತಾಗಿದೆ.
ಐದು ವರುಷಗಳಿಂದ ಈ ಪ್ರದೇಶದ ಜನರು ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಬೇಡಿಕೆ ಇಡುತ್ತಾ ಬಂದಿದ್ದಾರೆ. ಮುಂದಿನ ತಿಂಗಳು ರಸ್ತೆ ನಿರ್ಮ ಮಾಡುತ್ತೇವೆ ಎಂದು ಹೋದವರು ಐದು ವರುಷಗಳು ಕಳೆದರೂ ರಸ್ತೆ ನಿರ್ಮಾಣ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು. ಶಾಸಕ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಹಿಂದಿನ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಭರವಸೆ ಮಾತ್ರ ಸಿಕ್ಕಿದೆ. ಆದರೆ ಕಾಮಗಾರಿಗೆ ಇನ್ನೂ ದಿನ ಕೂಡಿ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಹಾರ ಸಾಮಗ್ರಿ ಹೊತ್ತುಕೊಂಡೇ ಸಾಗಬೇಕು
ರಸ್ತೆ ನಾದುರಸ್ತಿಯಿಂದ ರಿಕ್ಷಾ ಚಾಲಕರು ಈ ಕಡೆ ಬರಲು ಹಿಂಜರಿಯುತ್ತಿದ್ದು, ಪಡಿತರ ಸಾಮಗ್ರಿ ಮತ್ತು ಗ್ಯಾಸ್ ಮನೆಗೆ ಹೊತ್ತುಕೊಂಡೇ ಸಾಗುವ ಸ್ಥಿತಿ ನಮ್ಮದು ಎನ್ನುತ್ತಾರೆ ಸುಧಾಚಂದ್ರಹಾಸ್. ಅನಾರೋಗ್ಯ ದಿಂದಿರುವವರನ್ನು ಮತ್ತು ಹಿರಿಯರನ್ನು ಈ ಪ್ರದೇಶದಿಂದ ಕರೆದುಕೊಂಡು ಹೋಗುವುದೇ ಕಷ್ಟದ ಕೆಲಸ ಎನ್ನುತ್ತಾರೆ ದೇವಕಿ ಅವರು. ಔಷಧ ತರಲು ಹೋಗಿ ರಿಕ್ಷಾದಲ್ಲಿ ವಾಪಸು ಬರುತ್ತಿದ್ದಾಗ ರಸ್ತೆ ಗುಂಡಿಗೆ ರಿಕ್ಷಾದ ಚಕ್ರ ಇಳಿದು ನನ್ನ ಸೊಂಟ ಉಳುಕಿದ್ದು, ಈಗಲೂ ನೋವಿನ ಯಾತನೆಯನ್ನು ಅನುಭವಿಸುತ್ತಿದ್ದೇನೆ ಎನ್ನುತ್ತಾರೆ ಸುಮಾರು 90 ವರುಷ ಹಿರಿಯರಾದ ಮೊಮ್ಮಕ್ಕ ಅವರು. ಈ ರಸ್ತೆ ಸಂಪರ್ಕಿಸುವ ಮಿಷನ್ ಕಾಂಪೌಂಡ್ ಬಳಿ ಶ್ಮಶಾನ ಭೂಮಿಯಿದ್ದು, ನಮ್ಮವರು ಈ ಪ್ರದೇಶಕ್ಕೆ ಬರಲು ಹಿಂಜರಿಯುವಂತಾಗಿದೆ. ಇಲ್ಲಿ ವಾಹನ ಸಂಚರಿಸುವುದು ಬಿಡಿ ಜನರು ನಡೆದು ಹೋಗುವುದೇ ಕಷ್ಟಕರವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಜಾಕೋಬ್ ಅಂಚನ್ ಅವರು.
ಗ್ರಾ.ಪಂ. ಚುನಾವಣೆ ಸಂದರ್ಭ ಒಂದು ತಿಂಗಳೊಳಗೆ ಕಾಮಗಾರಿ ಆರಂಭಿಸುವ ಭರವಸೆ ಈಗ ಹುಸಿಯಾಗಿದ್ದು, ಈ ಬಾರಿ ವಿಧಾನಸಭೆ ಕ್ಷೇತ್ರದ ಚುನಾವಣೆಯನ್ನೇ ಬಹಿಷ್ಕರಿಸುತ್ತೇವೆ ಎನ್ನುತ್ತಾರೆ ಈ ಪ್ರದೇಶದ ನಿವಾಸಿಗಳು.
Related Articles
ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ತಿಂಗಳೊಳಗೆ ಕಾಮಗಾರಿ ನಡೆಸುವ ಭರವಸೆ ಐದು ವರ್ಷಗಳಿಂದ ಸುಳ್ಳಾಗಿದೆ. ಸುಮಾರು 40 ಮನೆಗಳಲ್ಲಿ 150ಕ್ಕೂ ಹೆಚ್ಚು ಮತದಾರರಿದ್ದು, ಮುಂದಿನ ಚುನಾವಣೆಯೊಳಗೆ ರಸ್ತೆ ಕಾಮಗಾರಿ ನಡೆಸದಿದ್ದರೆ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು. ಗ್ರಾ.ಪಂ., ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ತತ್‌ಕ್ಷಣ ಸ್ಪಂದಿಸಬೇಕು
– ರವಿಚಂದ್ರ ಗಟ್ಟಿ, ಸ್ಥಳೀಯರು
Advertisement