ನವದೆಹಲಿ: ದೇಶಾದ್ಯಂತ ಮೇ 1ರಂದು ಮೂರನೇ ಹಂತದ ಲಸಿಕೆ ಅಭಿಯಾನ ನಡೆಯಲು ದಿನಗಣನೆ ಆರಂಭವಾದ ಬೆನ್ನಲ್ಲೇ ಕರ್ನಾಟಕ, ದೆಹಲಿ, ಪಂಜಾಬ್, ರಾಜಸ್ಥಾನ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಕೊರತೆಯಿಂದಾಗಿ ಮೇ 1ರಂದು 18ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಅನುಮಾನ ಎಂದು ತಿಳಿಸಿವೆ.
ಇದನ್ನೂ ಓದಿ:ಕೋವಿಡ್ ನಿಯಮ ಉಲ್ಲಂಘನೆ : ಖ್ಯಾತ ನಟ ಸೇರಿ 34 ಜನರ ವಿರುದ್ಧ ಪ್ರಕರಣ
ಕರ್ನಾಟಕಕ್ಕೆ 94,47,900 ಡೋಸ್ ನೀಡಲಾಗಿದೆ. ಈ ಪೈಕಿ, 91,01,215 ಡೋಸ್ ಫಲಾನುಭವಿಗಳಿಗೆ ನೀಡಿದ್ದು, ಇದೀಗ ರಾಜ್ಯದಲ್ಲಿ 3,46,685 ಡೋಸ್ ಲಭ್ಯವಿದೆ. ಇದಲ್ಲದೆ ರಾಜ್ಯಕ್ಕೆ 4 ಲಕ್ಷ ಡೋಸ್ ಹೆಚ್ಚುವರಿಯಾಗಿ ಲಸಿಕೆ ನೀಡುವುದಾಗಿ ಸಚಿವಾಲಯ ಹೇಳಿದೆ.
ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್, ಒಂದು ಕೋಟಿ ಲಸಿಕೆಗೆ ಆದೇಶಿಸಿದ್ದು, ಕಂಪೆನಿಗಳು ಪೂರೈಸಬೇಕು. ಆ ಬಳಿಕ ಲಸಿಕೆ ನೀಡಲು ನಿರ್ಧರಿಸಬಹುದು ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್ ಮತ್ತು ಛತ್ತೀಸ್ ಗಢ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ 3ನೇ ಹಂತದ ಲಸಿಕೆ ಅಭಿಯಾನದಲ್ಲಿ 18ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು ಸಾಧ್ಯವಾಗುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಮೇ 15ರ ಮೊದಲು ಕೋವಿಡ್ 19 ಲಸಿಕೆಯ ಡೋಸ್ ಗಳನ್ನು ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ(ಎಸ್ ಐಐ) ತಿಳಿಸಿರುವುದಾಗಿ ರಾಜಸ್ಥಾನ್ ಸರಕಾರ ತಿಳಿಸಿದೆ. ನಮಗೆ ಕೋವಿಡ್ ಲಸಿಕೆ ವಿತರಿಸಲು ಮೇ 15ರವರೆಗೆ ಸಮಯಾವಕಾಶ ಬೇಕು ಎಂದು ಸೀರಂ ಸಂಸ್ಥೆ ತಿಳಿಸಿರುವುದಾಗಿ ರಾಜಸ್ಥಾನ್ ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ.