ಚಿಕ್ಕಬಳ್ಳಾಪುರ: ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಸುವುದರ ಬದಲು ಹಗಲು 4 ಗಂಟೆ ಹಾಗೂ ರಾತ್ರಿ 3 ಗಂಟೆ ಕಾಲ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ತಾಲೂಕಿನ ಪ್ರಗತಿಪರ ರೈತರು ಬುಧವಾರ ಗ್ರಾಮೀಣ ಬೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನೀರಿನ ಲಭ್ಯತೆ ಕಡಿಮೆ: ಚಿಕ್ಕಬಳ್ಳಾಪುರ ವಿಭಾಗದ 66/11 ಕೆ.ವಿ.ಉಪ ವಿದ್ಯುತ್ ಕೇಂದ್ರದಿಂದ ತಾಲೂಕಿನ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ಕಾಲ ನಿತರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಜಿಲ್ಲೆಯ ಅಂತರ್ಜಲ ಮಟ್ಟ 1,200, 1,500 ಅಡಿಗಳ ಆಳ ಹೋಗಿದ್ದು, ನೀರಿನ ಲಭ್ಯತೆ ಕೂಡ ಕಡಿಮೆ ಇದೆ.
ಇಂತಹ ಸಂದರ್ಭದಲ್ಲಿ 7 ಗಂಟೆ ಕಾಲ ನಿರಂತರವಾಗಿ ಪಂಪ್‌ಸೆಟ್‌ಗಳು ಕಾರ್ಯನಿರ್ವಹಿಸಿದರೆ, ಕೊಳವೆ ಬಾವಿಗಳಿಗೆ ಅಳವಡಿಸಿರುವ ಪಂಪ್‌ಸೆಟ್‌ಗಳ ಮೋಟಾರುಗಳು ಸುಟ್ಟು ರಿಪೇರಿಗೆ ಸಾವಿರಾರು ರೂ. ವ್ಯಯಿಸಬೇಕಿದೆ. ಆದ್ದರಿಂದ ನಿರಂತರವಾಗಿ ವಿದ್ಯುತ್ ಕೊಡುವುದರ ಬದಲು ಹಗಲು, ರಾತ್ರಿ ಪಾಳೆಯದಲ್ಲಿ ಕೊಟ್ಟರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪ್ರತಿಭಟನಾ ನಿರತ ರೈತರು ಬೆಸ್ಕಾಂ ಅಧಿಕಾರಿಗಳನ್ನು ಆಗ್ರಹಿಸಿದರು.
ರೈತರಿಗೆ ಆರ್ಥಿಕ ನಷ್ಟ: ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸಂಚಾಲಕ ಯಲುವಹಳ್ಳಿ ಸೋಣ್ಣೇಗೌಡ, ಈ ಹಿಂದೆ ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ವಿದ್ಯುತ್ ಪೂರೈಕೆ ಮಾಡುವ ವೇಳೆ ಪಂಪ್ ಮೋಟಾರುಗಳು ಸುಸ್ಥಿತಿಯಲ್ಲಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ 7 ಗಂಟೆ ಕಾಲ ವಿದ್ಯುತ್ ಕೊಡುವುದರಿಂದ ಕೊಳವೆ ಬಾವಿಗಳು ಕಾರ್ಯನಿರ್ವಹಿಸುವುದರಿಂದ ಲಕ್ಷಾಂತರ ರೂ. ಬೆಲೆ ಬಾಳುವ ಪಂಪ್ ಮೋಟಾರ್‌ಗಳು ಪದೇ ಪದೆ ಸುಟ್ಟು ಹೋಗುತ್ತಿವೆ.
ಇದರಿಂದ ರೈತರು ತೀವ್ರ ಆರ್ಥಿಕ ನಷ್ಟ ಸಂಭವಿಸುತ್ತಿದೆ. ಜೊತೆಗೆ ಏಕಾಏಕಿ ಮೋಟಾರುಗಳು ಕೈ ಕೊಡುವುದರಿಂದ ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದ ಬೆಳೆಗಳಿಗೆ ನೀರಿಲ್ಲದೇ ಒಣಗುವ ಸ್ಥಿತಿ ನಿರ್ಮಾಣವಾಗಿದ್ದು, ರೈತರ ಹಿತದೃಷ್ಟಿಯಿಂದ ಪಾಳಿಯಂತೆ ಹಗಲಲ್ಲಿ 4 ಗಂಟೆ ಹಾಗೂ ರಾತ್ರಿ ವೇಳೆ 3 ಗಂಟೆ ವಿದ್ಯುತ್ ಪೂರೈಸಿದರೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಂಗರೇಖನಹಳ್ಳಿ ಯುವ ಮುಖಂಡರಾದ ರವಿಕುಮಾರ್, ಮಧು, ಪುರದಗಡ್ಡೆ ರವಿಕುಮಾರ್, ಚಂದ್ರಪ್ಪ, ಈರ ಚಿನ್ನಪ್ಪ, ನಾರಾಯಣಸ್ವಾಮಿ, ಮಂಜುನಾಥ, ಮುನಿರಾಜು, ಅಶೋಕ, ನರಸಿಂಹಮೂರ್ತಿ, ಶಿವಕುಮಾರ್, ನಾಗರಾಜ್ ಗೋಪಾಲಪ್ಪ, ಭಾನು, ಶ್ರೀನಿವಾಸಪ್ಪ, ಮಾರಪ್ಪ, ಆದಿ, ಮುನೇಗೌಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.