Advertisement

ಮಿಸ್ಟರ್‌ ಪ್ರಧಾನಮಂತ್ರಿ…ಇದೇನಾ ದೇಶ ಮುನ್ನಡೆಸುವ ಪರಿ? 

06:00 AM Jul 21, 2018 | Team Udayavani |

ನವದೆಹಲಿ: ಅವಿಶ್ವಾಸ ಗೊತ್ತುವಳಿ ಮಂಡಿಸಿದ ತೆಲಗು ದೇಶಂ ಪಕ್ಷ (ಟಿಡಿಪಿ) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೀರಾವೇಶದಿಂದ ಹರಿಹಾಯ್ದು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲಾ ಪ್ರಯತ್ನ ನಡೆಸಿತು. 52 ವರ್ಷ ವಯಸ್ಸಿನ ಕೋಟ್ಯಧಿಪತಿ, ಉದ್ಯಮಿ ಜಯದೇವ್‌ ಗಲ್ಲಾ ಅವರೇ ಅವಿಶ್ವಾಸ ಗೊತ್ತುವಳಿಗೆ ಚಾಲನೆ ನೀಡಿ, ಏರಿದ ಧ್ವನಿಯಲ್ಲಿ ಸರ್ಕಾರದ ಲೋಪಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ತರಾಟೆಗೆ ತೆಗೆದುಕೊಂಡರು.

Advertisement

ವಿದೇಶದಲ್ಲಿ ಶಿಕ್ಷಣ ಪಡೆದು, ಮೊದಲ ಬಾರಿಗೆ ಆಂಧ್ರದ ಗುಂಟೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಜಯದೇವ್‌, ಅಮರ ರಾಜಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರು. ದೇಶದ ಉತ್ತಮ ಸಿಇಒ ಎಂಬ ಹೆಗ್ಗಳಿಕೆಯೂ ಅವರಿಗಿದೆ. ಇವರು 680 ಕೋಟಿ ರೂ. ಆಸ್ತಿಯ ಒಡೆಯ. ಅಮರಾನ್‌ ಬ್ಯಾಟರೀಸ್‌ ಮಾಲೀಕರೂ ಹೌದು. ತೆಲಗು ಸಿನಿಮಾವೊಂದರ ಕಥೆಯನ್ನು ಆಧಾರವಾಗಿಟ್ಟುಕೊಂಡು ಮಾತು ಆರಂಭಿಸಿದ ಜಯದೇವ್‌, ಬಳಿಕ ಪ್ರಧಾನಿ ಮೋದಿ ಅವರನ್ನೇ ಗುರಿಯಾಗಿಸಿ ಕೊಂಡು ವಾಗ್ಧಾಳಿ ನಡೆಸಿದರು. “”ಮಿಸ್ಟರ್‌ ಪ್ರಧಾನಮಂತ್ರಿ, ನೀವು ನೀಡಿರುವ ಭರವಸೆಯಂತೆ, ನೀವು ನಿಮ್ಮ ಬದ್ಧತೆಯನ್ನಾದರೂ ಗೌರವಿಸುತ್ತೀರೋ ಹೇಗೆ? ದೇಶವನ್ನು ಹೇಗೆ ಮುನ್ನಡೆಸುತ್ತಿದ್ದೀರಾ ಎನ್ನುವುದರ ಬಗ್ಗೆ ಅರಿವಾದರೂ ಇದೆಯೋ ಇಲ್ಲವೋ? ನಮ್ಮಿಂದ ಊಹಿಸಲಿಕ್ಕೂ ಆಗದು. ಆಂಧ್ರ ಪ್ರದೇಶ ಸ್ಥಿತಿಯನ್ನೇ ಉದಾಹರಿಸಿ ಹೇಳುವುದಾದರೆ, ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ಭರವಸೆಗಳಲ್ಲಿ ಕಿಂಚಿತ್ತೂ ಈಡೇರಿಲ್ಲ” ಎಂದು ಕಿಡಿಕಾರಿದರು. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಗಳೆಲ್ಲವೂ ಹುಸಿಯಾಗಿದೆ ಎಂದು ಕೆಂಡಾಮಂಡಲರಾದರು.

ಬಹುಮತ, ನೈತಿಕತೆಯ ಯುದ್ಧ: ಮಾತಿನ ಉದ್ದಕ್ಕೂ ಪ್ರಧಾನಿ ಮೋದಿ ಅವರ ಮೇಲೆ ಕಿಡಿಕಾರಿದ ಜಯದೇವ್‌, “”ಇದು ಕೇವಲ ಟಿಡಿಪಿ ಮತ್ತು ಬಿಜೆಪಿ ನಡುವಿನ ಯುದ್ಧವಲ್ಲ. ಬಹುಮತ ಮತ್ತು ನೈತಿಕತೆಯ ನಡುವಿನ ಸಮರ. ಇದು ಸರ್ವಾಧಿಕಾರ ಧೋರಣೆಯ ವಿರುದ್ಧದ ಹೋರಾಟ” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next