ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಪದಚ್ಯುತಿ ಸಂಬಂಧ ಮಂಗಳವಾರ ಮಧ್ಯಾಹ್ನ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವಿಶ್ವಾಸ ನಿರ್ಣಯ ಮಂಡಿಸಿದರು.
ಭೋಜನ ವಿರಾಮದ ನಂತರ ಕಲಾಪ ಸೇರುತ್ತಿದ್ದಂತೆ ಪದಚ್ಯುತಿ ವಿಚಾರವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಪ್ರಸ್ತಾಪಿಸಿದರು. ಸದಸ್ಯ ಆಯನೂರು ಮಂಜುನಾಥ್ ಅವರಿಗೆ ನಿರ್ಣಯ ಮಂಡಿಸುವಂತೆ ಆಹ್ವಾನಿಸಿದರು.
ಬಿಜೆಪಿಯ ಸದಸ್ಯ ಆಯನೂರು ಮಂಜುನಾಥ್ ನಿರ್ಣಯ ಮಂಡಿಸುತ್ತಿದ್ದಂತೆಯೇ, ಇದರ ಪರವಾಗಿ ಇರುವ 10 ಸದಸ್ಯರು ಎದ್ದು ನಿಂತರೆ ನಿರ್ಣಯ ಚರ್ಚೆಗೆ ಅಂಗೀಕಾರವಾಗಲಿದೆ ಎಂದು ಸಭಾಪತಿಗಳು ತಿಳಿಸಿದರು. ಸದನದಲ್ಲಿದ್ದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಎದ್ದು ನಿಂತು ನಿರ್ಣಯವನ್ನು ಬೆಂಬಲಿಸಿದ ಹಿನ್ನೆಲೆ, ಸಭಾಪತಿಗಳು ಈ ನಿರ್ಣಯ ಚರ್ಚೆಗೆ ಅಂಗೀಕಾರವಾಗಿತ್ತು ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಿದರು. ಚರ್ಚೆಗೆ ಸೂಕ್ತ ಸಮಯ ನಿಗದಿಪಡಿಸಿ ತಿಳಿಸುವುದಾಗಿ ಸಭಾಪತಿಗಳು ಭರವಸೆ ಇತ್ತರು.
ಇದನ್ನೂ ಓದಿ: ಗದಗ: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಕಂಪ್ಯೂಟರ್ ಆಪರೇಟರ್
ಕಳೆದ ಜನವರಿ 18ರಂದು ಬಿಜೆಪಿ ಸದಸ್ಯರಾದ ಆಯನೂರು ಮಂಜುನಾಥ್ ಡಾ ತಳವಾರ ಸಾಬಣ್ಣ ಅರುಣ್ ಶಹಾಪುರ ಎಸ್ ವಿ ಸಂಕನೂರು ಮಹಾಂತೇಶ್ ಕವಟಗಿಮಠ, ನಿರಾಣಿ ಹನುಮಂತ ರುದ್ರಪ್ಪ, ಹಾಗೂ ಇತರೆ ಪರಿಷತ್ ಬಿಜೆಪಿ ಸದಸ್ಯರು ನಿಯಮ 165 ಹಾಗೂ ಭಾರತ ಸಂವಿಧಾನದ 183 ನೇ ಅನುಚ್ಛೇದ ಸಿ ಖಂಡದ ಡಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಬೇಕು ಎಂದು ನಿರ್ಣಯದಲ್ಲಿ ತಿಳಿಸಿದ್ದರು.
ಇಂದು ಈ ನಿರ್ಣಯ ಮಂಡನೆಯಾಗಿದ್ದು ಸಭಾಪತಿಗಳು ಸೂಕ್ತ ಸಮಯದಲ್ಲಿ ಚರ್ಚೆಗೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪರಿಷತ್ನಲ್ಲಿ ನಿರ್ಣಯ ಮಂಡನೆಯಾದ ಹಿನ್ನೆಲೆ ಮುಂದಿನ ಐದು ದಿನಗಳ ಒಳಗೆ ಯಾವುದೇ ದಿನ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಬಹುದಾಗಿದೆ. ಈಗ ನಡೆಯುತ್ತಿರುವ ಅಧಿವೇಶನ ಫೆಬ್ರುವರಿ 5 ರವರೆಗೆ ನಡೆಯಲಿದ್ದು ಈ ಅವಧಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಬಹುದು ಇಲ್ಲವೇ ಮುಂದಿನ ಅಧಿವೇಶನದವರೆಗೂ ಮುಂದೂಡಿ ಕೊಳ್ಳುವ ಅವಕಾಶ ಸಭಾಪತಿಗಳಿಗೆ ಇದೆ.
ಇದನ್ನೂ ಓದಿ: ಸಾರಿಗೆ ನೌಕರರ 3 ಬೇಡಿಕೆ ಈಡೇರಿಸಿದ್ದೇವೆ; ಇನ್ಮುಂದೆ ಸಂಬಳ ಕಡಿತ ಮಾಡುವುದಿಲ್ಲ:ಸವದಿ ಭರವಸೆ