ಹೊಸದಿಲ್ಲಿ: ನನ್ನ ಮತ್ತು ರಿಷಭ್ ಪಂತ್ ನಡುವೆ ಯಾವುದೇ ಸ್ಪರ್ಧೆ ಇಲ್ಲ, ಒಂದೇ ತಂಡದಲ್ಲಿ ನಾವಿ ಬ್ಬರು ಒಟ್ಟಿಗೇ ಆಡಬೇಕೆಂಬುದು ನನ್ನ ಆಸೆ ಎಂಬುದಾಗಿ ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಹೇಳಿದ್ದಾರೆ.
“ಯಾರನ್ನು ಆಡಿಸಬೇಕೆಂಬುದು ತಂಡದ ಆಯ್ಕೆ ಮಂಡಳಿಗೆ ಬಿಟ್ಟ ಸಂಗತಿ. ಹಾಗೆಯೇ ಇಲ್ಲಿ ತಂಡದ ಕಾಂಬಿನೇಶನ್ ಕೂಡ ಮುಖ್ಯ ವಾಗುತ್ತದೆ. ಕ್ರಿಕೆಟಿಗನಾದವನೊಬ್ಬ ಯಾವತ್ತೂ ಬೇರೆಯವರ ಸ್ಥಾನದ ಮೇಲೆ ಕಣ್ಣಿಡಬಾರದು, ಸ್ಪರ್ಧೆಗೂ ಇಳಿಯಕೂಡದು. ಅವಕಾಶ ಬಂದಾಗ ಬಾಚಿಕೊಳ್ಳಬೇಕು. ಹೀಗಾಗಿ ಪಂತ್ ಮತ್ತು ನನ್ನ ನಡುವೆ ಯಾವುದೇ ಸ್ಪರ್ಧೆ ಇದೆ ಭಾವಿಸಿದರೆ ಅದು ತಪ್ಪು’ ಎಂದು ಸಂದರ್ಶನವೊಂದರಲ್ಲಿ ಸಂಜು ಸ್ಯಾಮ್ಸನ್ ಹೇಳಿದರು.
“ಒಂದೇ ತಂಡದಲ್ಲಿ ನಾವಿಬ್ಬರು ಒಟ್ಟಿಗೇ ಆಡುವುದನ್ನು ನಾನು ಬಯಸುತ್ತೇನೆ. ಬೌಲರ್‌ಗಳ ಮೇಲೆ ಹೇಗೆ ಪ್ರಭುತ್ವ ಸಾಧಿಸಬೇಕು ಎಂಬುದು ತಿಳಿದಿದೆ. ಹೀಗಾಗಿ ನಾನು ಪಂತ್ ಜತೆ ಆಡುವುದನ್ನು ಕಾಯುತ್ತಿದ್ದೇನೆ’ ಎಂದರು.
ಪಂತ್ ಮತ್ತು ಸ್ಯಾಮ್ಸನ್ 2016 ಮತ್ತು 2017ರ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಒಟ್ಟಿಗೇ ಆಡಿ ದ್ದರು. ಗುಜರಾತ್ ಲಯನ್ಸ್ ವಿರುದ್ಧ ಕೇವಲ 63 ಎಸೆತಗಳಿಂದ 143 ರನ್ ಪೇರಿಸಿ ಮಿಂಚು ಹರಿಸಿದ್ದರು.