ಬೆಂಗಳೂರು: ”ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ಹೋಲಿಕೆ ಸರಿ ಅಲ್ಲ, ಇಬ್ಬರಿಗೆ ಆಕಾಶ ಭೂಮಿಗಿರುವ ಅಂತರವಿದೆ”ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ದಿವಂಗತ ಜವಾಹರ್ ಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಇವತ್ತಿನ ಪ್ರಧಾನಿಗೆ ನೆಹರು ಹೋಲಿಕೆ ಸರಿಯಲ್ಲ.ನೆಹರು ಎಲ್ಲಿ,ಮೋದಿ ಎಲ್ಲಿ. ಆಕಾಶ ಭೂಮಿಗಿರುವ ಅಂತರವಿದೆ. ನೆಹರು ಸಾಧನೆ ಅಳಿಸುವ ಕೆಲಸ ಮಾಡುತ್ತಿದ್ದಾರೆ. ಪಂಚವಾರ್ಷಿಕ ಯೋಜನೆಗಳನ್ನ ತೆಗೆದಿದ್ದಾರೆ. ಅದರ ಜಾಗದಲ್ಲಿ ನೀತಿ ಆಯೋಗ ತಂದಿದ್ದಾರೆ. ನೀತಿ ಆಯೋಗ ಸರ್ಕಾರದ ಕೈಗೊಂಬೆಯಾಗಿದೆ ಎಂದರು.
ಇದನ್ನೂ ಓದಿ : ದೇಶಕ್ಕೆ ಅಪಾಯವಿರುವುದು ಕುಟುಂಬವಾದಿ ಪಕ್ಷದಿಂದಲ್ಲ,ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ:ಎಚ್ಡಿಕೆ
ಕಳೆದ ಮೂರು ವರ್ಷಗಳಿಂದ ಸರ್ವೇ ಆಗುತ್ತಿಲ್ಲ. ಅಂಕಿ ಅಂಶ ಇಲಾಖೆ ಸರ್ವೇ ಯನ್ನೇ ಮಾಡುತ್ತಿಲ್ಲ. ಆರ್ ಬಿಐ ನಿಷ್ಕ್ರಿಯ ಮಾಡಿದ್ದಾರೆ. ಸರ್ಕಾರದ ಹೇಳಿದಂತೆ ಆರ್ ಬಿಐ ಕೇಳುತ್ತದೆ. ಸಿಎಜಿ ಕೂಡ ಸರ್ಕಾರ ಹೇಳಿದಂತೆ ಕೇಳಬೇಕಿದೆ. ಯಾವ ಮಾಹಿತಿಗಳೂ ಇವತ್ತು ಸಿಗುತ್ತಿಲ್ಲ.ನಮ್ಮ ಆರ್ಥಿಕ ಸೂಚ್ಯಂಕವನ್ನ ತೋರಿಸುತ್ತಿಲ್ಲ. ಎಲ್ಲವನ್ನೂ ಸಂಪೂರ್ಣ ಮುಚ್ಚಿಹಾಕಿದ್ದಾರೆ. ಸ್ವಾಯತ್ತ ಸಂಸ್ಥೆಗಳನ್ನ ಕತ್ತು ಹಿಸುಕಿ ಕೊಲ್ಲುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡಿದರು.
ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ರಾಜ್ಯಸಭೆ ಸದಸ್ಯ ಚಂದ್ರಶೇಖರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕರಾದ ವಿ.ಮುನಿಯಪ್ಪ, ಯು.ಬಿ. ವೆಂಕಟೇಶ್, ಪ್ರೊ.ರಾಧಾಕೃಷ್ಣ ಹಾಜರಿದ್ದರು.