ಹೊಸದಿಲ್ಲಿ: ಇನ್ನು ಮುಂದೆ ದೇಶದ ಚುನಾವಣ ಆಯೋಗ (ಇಸಿಐ)ದ ಮುಖ್ಯ ಚುನಾವಣ ಆಯುಕ್ತರು ಮತ್ತು ಇನ್ನಿಬ್ಬರು ಆಯುಕ್ತರ ನೇಮಕಕ್ಕೆ ಇರುವ ಸಮಿತಿಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇರುವುದಿಲ್ಲ. ಅವರ ಬದಲಾಗಿ ಕೇಂದ್ರದ ಸಚಿವರು ಸಮಿತಿಯಲ್ಲಿ ಇರಲಿದ್ದಾರೆ.
ಅದಕ್ಕೆ ಸಂಬಂಧಿಸಿದ ಮುಖ್ಯ ಚುನಾವಣ ಆಯುಕ್ತರು ಮತ್ತು ಇತರ ಚುನಾವಣ ಆಯುಕ್ತರ (ನೇಮಕ, ಸೇವಾ ನಿಯಮಗಳು ಮತ್ತು ಅಧಿಕಾರದ ಇತರ ನೀತಿಗಳು) ಮಸೂದೆ-2023ನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ.
ವಿಪಕ್ಷ ಸಂಸದರ ಅನುಪಸ್ಥಿತಿಯ ನಡುವೆ ಮಸೂದೆಯ ಬಗ್ಗೆ ನಡೆದ ಚರ್ಚೆಗೆ ಉತ್ತರ ನೀಡಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಸೂದೆಯ ಅಂಶಗಳನ್ನು ವಿವರಿಸಿದರು.
ಈಗಿನ ಕಾಯ್ದೆ ಅಪೂರ್ಣವಾಗಿ ಇರುವುದರಿಂದ ಹೊಸ ಮಸೂದೆ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು. ಸುಪ್ರೀಂ ಕೋರ್ಟ್ ಮಾರ್ಚ್‌ನಲ್ಲಿ ನೀಡಿದ್ದ ಆದೇಶವನ್ನು ಧಿಕ್ಕರಿಸುವ ಅಂಶಗಳು ಮಸೂದೆಯಲ್ಲಿ ಇವೆ ಎಂಬ ವಿಪಕ್ಷಗಳ ಆರೋಪವನ್ನೂ ಅವರು ಒಪ್ಪಲಿಲ್ಲ. ಹೊಸ ಕಾಯ್ದೆ ಜಾರಿಗೊಂಡ ಬಳಿಕ ಕಾನೂನು ಸಚಿವರು ಮತ್ತು ಕೇಂದ್ರ ಸರಕಾರದ ಇಬ್ಬರು ಕಾರ್ಯದರ್ಶಿಗಳ ನೇತೃತ್ವದ ಸಮಿತಿಯು ಐವರು ಐಎಎಸ್ ಅಧಿಕಾರಿಗಳನ್ನು ಮುಖ್ಯ ಚುನಾವಣ ಆಯುಕ್ತ, ಚುನಾವಣ ಆಯುಕ್ತರ ಸ್ಥಾನಕ್ಕೆ ನೇಮಿಸಲು ಗುರುತು ಮಾಡಿಕೊಡಲಿದೆ.
ಪ್ರಧಾನಿ, ಲೋಕಸಭೆಯಲ್ಲಿ ವಿಪಕ್ಷ ನಾಯಕ, ಕೇಂದ್ರ ಸಚಿವರು ಇರುವ ಸಮಿತಿ ಈ ಐವರ ಪೈಕಿ ಆಯ್ಕೆ ನಡೆಸಲಿದೆ. ಹೊಸ ಮಸೂದೆಯಂತೆ, ಶೋಧ ಸಮಿತಿಯಲ್ಲಿ ಸು. ಕೋ. ಮುಖ್ಯ ನ್ಯಾಯ ಮೂರ್ತಿಗಳ ಸ್ಥಾನದಲ್ಲಿ ಕೇಂದ್ರ ಸಚಿವರು ಇರುತ್ತಾರೆ. ಇದರಿಂದ ಸರಕಾರದ ನಿಯಂ ತ್ರಣದಲ್ಲಿರುವವರೇ ಚುನಾವಣ ಆಯೋಗಕ್ಕೆ ನೇಮಕಗೊಳ್ಳುತ್ತಾರೆ ಎಂಬುದು ವಿಪಕ್ಷಗಳು ಆರೋಪ. ರಾಜ್ಯಸಭೆಯಲ್ಲಿ ಈ ಮಸೂದೆಗೆ ಡಿ. 12ರಂದೇ ಅನುಮೋದನೆ ಪ್ರಾಪ್ತಿಯಾಗಿತ್ತು. ವಿಪಕ್ಷಗಳ ಆಕ್ಷೇಪದ ಹಿನ್ನೆಲೆಯಲ್ಲಿ ಮೂಲ ಮಸೂದೆಗೆ ತಿದ್ದುಪಡಿಗಳನ್ನು ಮಾಡಲಾಗಿತ್ತು.
ಮಸೂದೆಯ ಅಂಶಗಳೇನು?
-ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಬದಲಾಗಿ ಕೇಂದ್ರ ಸಚಿವರಿಗೆ ಸಮಿತಿಯಲ್ಲಿ ಸ್ಥಾನ.
– ಹಠಾತ್ ಆಗಿ ಸಿಇಸಿ, ಇಸಿಗಳನ್ನು ಹುದ್ದೆಯಿಂದ ಬದಲಿಸಲು ಅವಕಾಶ ಇಲ್ಲ.
– ಸಿಇಸಿ, ಇಸಿಗಳ ನೇಮಕಕ್ಕೆ ಪ್ರಧಾನಿ ನೇತೃತ್ವದ ಸಮಿತಿ.
– ಲೋಕಸಭೆಯಲ್ಲಿ ವಿಪಕ್ಷ ನಾಯಕ, ಕೇಂದ್ರ ಸಚಿವರು ಅದರಲ್ಲಿ ಇರುತ್ತಾರೆ.