Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ವಾಡಿಕೆಯಂತೆ ಮಳೆ ಸುರಿದಿಲ್ಲ. ಇದೇ ಕಾರಣಕ್ಕೆ ನದಿಗಳಲ್ಲಿ ನೀರಿನ ಮಟ್ಟವೂ ಗಣನೀಯ ಏರಿಕೆ ಕಂಡಿಲ್ಲ. ಇದರಿಂದಾಗಿ ಹಲವು ಕಡೆಗಳಲ್ಲಿ ನೀರಿನ ತತ್ವಾರ ಉಂಟಾಗಿದ್ದು, ನಗರದಲ್ಲಿ ತಿಂಗಳಿನಿಂದೀಚೆಗೆ ರೇಷನಿಂಗ್ ಆರಂಭಗೊಂಡಿದೆ. ಸದ್ಯದ ಪರಿಸ್ಥಿತಿಯಂತೆ ಡ್ಯಾಂನಲ್ಲಿ ಇನ್ನು ಕೆಲವು ದಿನಗಳಿಗೆ ಮಾತ್ರ ನಗರಕ್ಕೆ ಸರಬರಾಜು ಆಗುವಷ್ಟು ನೀರಿದೆ. ಸದ್ಯ ಮಂಗಳೂರು ನಗರ ದಕ್ಷಿಣ ಮತ್ತು ಮಂಗಳೂರು ನಗರ ಉತ್ತರಕ್ಕೆ ದಿನ ಬಿಟ್ಟು ದಿನ ನೀರು ಬರುತ್ತಿದೆ. ನೀರಿನ ಬೇಡಿಕೆ ಹೆಚ್ಚಾದರೆ ಮತ್ತು ನೀರಿನ ಲಭ್ಯತೆ ಕಡಿಮೆಯಾದರೆ ಈ ನಿಯಮವನ್ನು ಬದಲಾವಣೆ ಮಾಡಲು ಪಾಲಿಕೆ ಉದ್ದೇಶಿಸಿತ್ತು. ಆದರೆ ಸದ್ಯಕ್ಕೆ ರೇಷನಿಂಗ್ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ. ಅಂದಾಜಿ ನಂತೆ ಜೂನ್ ಮೊದಲ ವಾರ ಮುಂಗಾರು ಪ್ರವೇಶಿಸಲಿದ್ದು, ಇನ್ನೇನು ಎರಡರಿಂದ ಮೂರು ವಾರಗಳಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ ಮಾಡಲಾಗಿದೆ.
ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮಂಗಳವಾರ 3.06 ಮೀ.ತುಂಬೆ ಡ್ಯಾಂನಲ್ಲಿ ಮತ್ತು 16.70 ಮೀ. ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ಇತ್ತು. ಸೋಮವಾರ ತುಂಬೆಯಲ್ಲಿ 3.14 ಮತ್ತು ಎಎಂಆರ್‌ನಲ್ಲಿ 16.70 ಮೀ. ನೀರಿನ ಮಟ್ಟ ಇತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಮೇ ತಿಂಗಳಲ್ಲಿ ಇದೇ ಅತೀ ಕನಿಷ್ಠವಾಗಿದೆ. 2022 ಮೇ 23ಕ್ಕೆ 5 ಮೀ., 2021ರಲ್ಲಿ 6 ಮೀ., 2020ರಲ್ಲಿ 5.60 ಮೀ., 2019ರಲ್ಲಿ 3.41 ಮೀ., 2018ರಲ್ಲಿ 6 ಮೀ. ಮತ್ತು 2107ರಲ್ಲಿ 5 ಮೀ. ನೀರಿನ ಮಟ್ಟ ದಾಖಲಾಗಿತ್ತು. ನಿರೀಕ್ಷಿತ ಮಳೆ ಸುರಿದಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ನಿರೀಕ್ಷಿತ ಮಳೆಯಾಗಲಿಲ್ಲ. ತುಂಬೆ ಡ್ಯಾಂನಲ್ಲಿ ಸದ್ಯ 3.06 ಮೀ. ನೀರಿನ ಮಟ್ಟ ಇದೆ. ಸದ್ಯಕ್ಕೆ ಇದೇ ರೀತಿಯ ರೇಷನಿಂಗ್ ವ್ಯವಸ್ಥೆ ಮುಂದುವರಿಸಲಾಗುತ್ತದೆ. ಸದ್ಯದಲ್ಲೇ ಮಳೆಯ ನಿರೀಕ್ಷೆ ಇದೆ.
– ಚನ್ನಬಸಪ್ಪ, ಪಾಲಿಕೆ ಆಯುಕ್ತರು