ಹೊಸದಿಲ್ಲಿ : ”ಆಧಾರ್ ನಂಬರನ್ನು ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ಮತ್ತು ಮೊಬೈಲ್ ಸಿಮ್ ಕಾರ್ಡ್‌ಗೆ ಬಯೋಮೆಟ್ರಿಕ್ ಐಡಿ ಮೂಲಕ ಜೋಡಿಸುವುದಕ್ಕೆ ಈಗಾಗಲೇ ನಿಗದಿಯಾಗಿರುವ ಅಂತಿಮ ಗಡುವು ಕಾನೂನು ಬದ್ಧವೂ ಸಿಂಧುವೂ ಆಗಿದ್ದು ಅದರಲ್ಲೇನೂ ಬದಲಾವಣೆ ಇಲ್ಲ”ಎಂದು ಭಾರತದ ವಿಶಿಷ್ಟ ಗುರುತು ಪತ್ರ ಪ್ರಾಧಿಕಾರಿ (UIDAI) ಸ್ಪಷ್ಟಪಡಿಸಿದೆ.
ಬ್ಯಾಂಕ್ ಖಾತೆ ಮತ್ತು ಪ್ಯಾನ್ ಕಾರ್ಡ್ ಗೆ ಆಧಾರ್ ಜೋಡಿಸುವ ಅಂತಿಮ ದಿನಾಂಕ ಡಿ.31 ಆಗಿದ್ದು ಸಿಮ್ ಕಾರ್ಡ್ ಜತೆಗಿನ ಆಧಾರ್ ಜೋಡಣೆಗೆ ಫೆ.6 ಅಂತಿಮ ದಿನವಾಗಿರುತ್ತದೆ ಎಂದು ಯುಐಡಿಎಐ ಹೇಳಿದೆ.
ಸರಕಾರದ ವಿವಿಧ ಯೋಜನೆಗಳು ಮತ್ತು ಸೇವೆಗಳಿಗೆ ಆಧಾರ್ ನಂಬರ್ ಜೋಡಿಸುವುದಕ್ಕೆ ಸುಪ್ರೀಂ ಕೋರ್ಟಿನಿಂದ ಈ ದಿನದ ವರೆಗೂ ಯಾವುದೇ ತಡೆ ಇಲ್ಲ ಎಂದು ಯುಐಡಿಎಐ, ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಬೇಕಾಬಿಟ್ಟಿ ದಾರಿ ತಪ್ಪಿಸುವ ಸಂದೇಶಗಳನ್ನು ಖಂಡಿಸಿ ಸ್ಪಷ್ಟನೆ ನೀಡಿದೆ.
“ಆಧಾರ್ ಕಾಯಿದೆ ಜಾರಿಯಲ್ಲಿದೆ. ಸರಕಾರದ ಎಲ್ಲ ಜನಕಲ್ಯಾಣ ಕಾರ್ಯಕ್ರಮಗಳಿಗೆ, ಬ್ಯಾಂಕ್ ಖಾತೆ ಪರಾಮರ್ಶೆಗೆ, ಪ್ಯಾನ್ ಕಾರ್ಡ್ ಹಾಗೂ ಸಿಮ್ ಕಾರ್ಡ್ ಜತೆಗೆ ಆಧಾರ್ ಜೋಡಿಸುವುದಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಎಲ್ಲ ಅಧಿಸೂಚನೆಗಳು ಕಾನೂನು ಬದ್ಧವೂ ಸಿಂಧುವೂ ಆಗಿರುತ್ತದೆ’ ಎಂದು ಯುಐಡಿಎಐ ಪ್ರಕಟನೆ ತಿಳಿಸಿದೆ.
“ಇಂದು ಡಿ.7, 2017ರ ದಿನದ ಕಾನೂನು ಬದ್ಧ ಸ್ಥಿತಿಗತಿ ಪ್ರಕಾರ ಸರಕಾರದ ವಿವಿಧ ಸೇವೆಗಳು ಮತ್ತು ಜನಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಜೋಡಿಸುವ ಕ್ರಮಕ್ಕೆ ಸುಪ್ರೀಂ ಕೋರ್ಟಿನಿಂದ ಯಾವುದೇ ತಡೆ ಇಲ್ಲ’ ಎಂದು UIDAI ಸ್ಪಷ್ಟಪಡಿಸಿದೆ.