Advertisement

ತಿಂಗಳಾದರೂ ಜಿಪಂಗಿಲ್ಲ ಸಿಇಒ ಭಾಗ್ಯ

02:25 PM Sep 03, 2017 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಆಡಳಿತರೂಢ ಕಾಂಗ್ರೆಸ್‌ ಸದಸ್ಯರ ಹಾಗೂ ಅಧ್ಯಕ್ಷರ ನಡುವಿನ ಭಿನ್ನಮತದಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತಿವೆ ಎಂಬ ಆರೋಪಗಳು ಜಿಲ್ಲೆಯ
ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಬೆನ್ನಲೇ ತಿಂಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಗೆ ಕಾರ್ಯನಿರ್ವಹಣಾಧಿಕಾರಿ ಇಲ್ಲದೇ ಜಿಪಂ ಆಡಳಿತಕ್ಕೆ ಮಂಕು ಕವಿದಂತಾಗಿದೆ.

Advertisement

ಜಿಪಂ ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೆ.ಮಂಜುನಾಥ ಅವರನ್ನು ಜಿಲ್ಲಾಧಿಕಾರಿಯಾಗಿ ಯಾದಗಿರಿಗೆ ಸರ್ಕಾರ ವಾರ್ಗವಣೆ ಗೊಳಿಸಿ ಬರೋಬ್ಬರಿ ತಿಂಗಳಾದರೂ ಇದುವರೆಗೂ ತೆರೆವಾದ
ಅವರ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ.

ಈಗಾಗಲೇ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಭುಗಿಲೆದ್ದಿದೆ. ಕೊಳವೆ ಬಾವಿಗಳು ಬತ್ತಿ ಹೋಗಿ ರೈತರ ಸರಣಿ ಆತ್ಮಹತ್ಯೆಗಳು
ಮುಂದುವರಿದಿವೆ. ಆದರೆ, ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಹೊಣೆ ಹೊತ್ತಿರುವ ಜಿಪಂ ಸಿಇಒ ಹುದ್ದೆ ತಿಂಗಳಾದರೂ ಭರ್ತಿಯಾಗದೇ ಇರುವುದು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ.

ಜನಪ್ರತಿನಿಧಿಗಳ ಮೌನ: ಜಿಪಂ ಸಿಇಒ ಹುದ್ದೆ ಖಾಲಿ ಇದ್ದರೂ ಅದನ್ನು ಭರ್ತಿಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಬೇಕಿದ್ದ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿಯದೇ ಮೌನಕ್ಕೆ ಶರಣಾಗಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದರಾದ ಎಂ.ವೀರಪ್ಪಮೊಯ್ಲಿ, ಕೆ.ಎಚ್‌.ಮುನಿಯಪ್ಪ ಮತ್ತಿತರು ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಬಗ್ಗೆ ಸರಣಿ ಸಭೆಗಳನ್ನು ನಡೆಸಿದರೂ ಜಿಪಂ ಸಿಇಒ ಭರ್ತಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಿಪರ್ಯಾಸದ ಸಂಗತಿಯೆಂದರೆ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿಗಳೇ ಜಿಲ್ಲೆಗೆ ಉಸ್ತುವಾರಿ ಕಾರ್ಯದರ್ಶಿ
ಗಳಾಗಿದ್ದರೂ ಸಹ ಜಿಪಂ ಸಿಇಒ ಹುದ್ದೆಗೆ ಯಾರನ್ನು ನೇಮಿಸದೇ ಖಾಲಿಯಾಗಿರುವುದು ಮಾತ್ರ ಸರ್ಕಾರದ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಸ್ವತ್ಛ ಭಾರತ, ಖಾತ್ರಿಗೆ ಹಿನ್ನಡೆ: ಸದಾ ಬರಗಾಲವನ್ನು ಬೆನ್ನಗೇರಿಸಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆ ಯಲ್ಲಿ ದುಡಿಯುವ ಕೈಗೆಗಳಿಗೆ ಉದ್ಯೋಗ ಖಾತ್ರಿ ಸಾಕಷ್ಟು ವರದಾನವಾಗಿದೆ. ಜತೆಗೆ
ಸ್ವತ್ಛ ಭಾರತದಂತಹ ಕಾರ್ಯಕ್ರಮಗಳು ಹೆಚ್ಚು ಜನರಿಗೆ ಅನು ಕೂಲವಾಗಿದೆ. ಆದರೆ, ಸಿಇಒ ಹುದ್ದೆ ಖಾಲಿ ಇರುವುದರಿಂದ ಜಜಿಲ್ಲೆಯ ಯಲ್ಲಿ ಉದ್ಯೋಗ ಖಾತ್ರಿ ಹಾಗೂ ಸ್ವತ್ಛ ಭಾರತ ಕಾರ್ಯಕ್ರಮಗಳು
ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೇ ತೀವ್ರ ಹಿನ್ನಡೆ ಯಾಗಿದೆ ಯೆಂಬ ಮಾತು ಕೇಳಿ ಬರುತ್ತಿದೆ. ಇನ್ನೂ ಜಿಪಂ ಸಿಇಒ ಮುಖ್ಯಸ್ಥ ರಾಗಿರುವ ಹಲವಾರು ಇಲಾಖೆಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೂ
ತೀವ್ರ ತೊಂದರೆ ಆಗುತ್ತಿದೆಯೆಂಬ ಮಾತು ಕೇಳಿ ಬರುತ್ತಿದೆ. 

Advertisement

ಒಟ್ಟಾರೆ ದಶಮಾನೋತ್ಸವ ಸಂಭ್ರಮದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಪಂ ಸಿಇಒ ಸೇರಿದಂತೆ ಹಲವು ಇಲಾಖೆಗಳಿಗೆ ಕಾಯಂ ಅಧಿಕಾರಿಗಳು ಇನ್ನೂ ನೇಮಕಗೊಳ್ಳದೇ ಪ್ರಭಾರಿಗಳ
ಕೈಯಲ್ಲಿ ಆಡಳಿತ ನಡೆಸುತ್ತಿರುವುದು ಎದ್ದು ಕಾಣುತ್ತಿದೆ. ಜಿಲ್ಲೆಯ ಚುನಾಯಿತ ಜನಪ್ರತಿನಿದಿಗಳು ಇನ್ನಾದರೂ ಎಚ್ಚೆತ್ತಿಕೊಂಡು ಜಿಪಂಗೆ ಸಿಇಒರನ್ನು ನೇಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮೇಲೆ
ಒತ್ತಡ ತರುವ ನಿಟ್ಟಿನಲ್ಲಿ ತಮ್ಮ ಬದ್ಧತೆ ಹಾಗೂ ಇಚ್ಛಾಶಕ್ತಿಯನ್ನು ಪ್ರದರ್ಶಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next