Advertisement

ಸದ್ಯಕ್ಕಿಲ್ಲ ಸಂಪುಟ ಖುಷಿ; ಕಾರ್ಯಕಾರಿಣಿವರೆಗೆ ಕಾಯಲು ಸಿಎಂಗೆ ವರಿಷ್ಠರ ಸಲಹೆ

01:31 AM Apr 07, 2022 | Team Udayavani |

ಬೆಂಗಳೂರು: ಸಚಿವ ಸಂಪುಟ ಪುನಾರಚನೆಗೆ ಮತ್ತೆ ಗ್ರಹಣ ಬಡಿದಿದ್ದು, ರಾಜ್ಯ ಕಾರ್ಯಕಾರಿಣಿವರೆಗೆ ಯಾವುದೇ ತೀರ್ಮಾನ ಬೇಡ ಎಂಬ ಸೂಚನೆಯನ್ನು ವರಿಷ್ಠರು ನೀಡಿದ್ದಾರೆ. ಇದರಿಂದ ಸಂಪುಟ ಪುನಾರಚನೆಗೆ ಹಸಿರು ನಿಶಾನೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ.

Advertisement

ಎ.16 ಮತ್ತು 17ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು, ಅದಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಲಿದ್ದಾರೆ. ಆ ಬಳಿಕ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ತೀರ್ಮಾನ ಮಾಡಲು ವರಿಷ್ಠರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಜತೆಗೆ ಪ್ರಸ್ತುತ ಕರ್ನಾಟಕದಲ್ಲಿ ಹಾಗೂ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎನ್ನುವುದನ್ನೂ ವರಿಷ್ಠರು ಸ್ಪಷ್ಟಪಡಿಸಿಲ್ಲ ಎನ್ನಲಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಸಮಯ ಉಳಿದಿದ್ದು, ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಸಚಿವಾಕಾಂಕ್ಷಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿದ್ದು, ಖಾಲಿ ಇರುವ ಸ್ಥಾನಗಳ ಜತೆಗೆ ಕೆಲವು ಹಿರಿಯ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕೆಂಬ ಒತ್ತಡವೂ ಇದೆ ಎನ್ನುವುದನ್ನು ಮುಖ್ಯಮಂತ್ರಿಗಳು ವರಿಷ್ಠರ ಗಮನಕ್ಕೆ ತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಜಾರಿ ನಿರ್ದೇಶನಾಲಯ ಸಮನ್ಸ್‌ ಹಿನ್ನೆಲೆ: ಎ.8ರಂದು ಟಿಟಿವಿ ದಿನಕರನ್‌ ವಿಚಾರಣೆ

Advertisement

ಕೇಂದ್ರ ಸಚಿ ವರ ಭೇಟಿ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾದ ಮುಖ್ಯಮಂತ್ರಿ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವಂತೆ ಕೋರಿದರು. ಬಳಿಕ ರಕ್ಷಣ ಸಚಿವ ರಾಜ ನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಬಗ್ಗೆ ಚರ್ಚಿಸಿದರು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನೂ ಭೇಟಿಯಾದರು.

ಮೂವರು ವಲಸಿಗರಿಂದ ಮನವಿ
ಸಂಪುಟ ಪುನಾರಚನೆ ನಿರೀಕ್ಷೆ ಇಟ್ಟು ದಿಲ್ಲಿಗೆ ತೆರಳಿದ್ದ ವಲಸಿಗ ಶಾಸಕರಾದ ರಮೇಶ್‌ ಜಾರಕಿಹೊಳಿ, ಆರ್‌.ಶಂಕರ್‌ ಹಾಗೂ ಶ್ರೀಮಂತ ಪಾಟೀಲ್‌ ಅವರು ಮಂಗಳವಾರ ರಾತ್ರಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೆ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತದೆ ಎನ್ನುವ ಕಾರಣಕ್ಕೆ ಬಿಜೆಪಿ ಸೇರಿ ಸರಕಾರ ರಚಿಸಲು ಪ್ರಮುಖ ಪಾತ್ರ ವಹಿಸಿದ್ದೇವೆ. ನಮ್ಮನ್ನು ಸಂಪುಟದಿಂದ ಕೈ ಬಿಟ್ಟಿರುವುದರಿಂದ ಅನ್ಯಾಯವಾಗಿದೆ ಎಂದರು.

ಸುದೀರ್ಘ‌ ಚರ್ಚೆ
ಬಸವರಾಜ ಬೊಮ್ಮಾಯಿ ಬುಧವಾರ ಸಂಜೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದರು. ಅನಂತರ ಇಬ್ಬರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಜತೆಯಾಗಿ ಭೇಟಿ ಮಾಡಿ, ಸಂಪುಟದ ಕುರಿತು ಚರ್ಚೆ ನಡೆಸಿದರು. ರಾಜ್ಯದಲ್ಲಿ ಹಿಜಾಬ್‌ ಗಲಾಟೆ ಬಳಿಕ ನಡೆಯುತ್ತಿರುವ ಧರ್ಮ ಸಂಘರ್ಷದ ಬೆಳವಣಿಗೆಗಳ ಬಗ್ಗೆಯೂ ಮುಖ್ಯ ಮಂತ್ರಿಗಳು ಕೇಂದ್ರ ನಾಯಕರ ಜತೆ ಚರ್ಚಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next