Advertisement

Cast Census: ಜಾತಿ ಗಣತಿ ವರದಿ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

02:57 AM Jan 13, 2025 | Team Udayavani |

ಹೊಸಪೇಟೆ: ಜಾತಿ ಜನಗಣತಿ ಜಾರಿ ಕುರಿತು ಪರ -ವಿರೋಧ ಚರ್ಚೆಗಳ ನಡುವೆಯೂ ವರದಿಯ ಅನುಷ್ಠಾನದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ವಿಜಯನಗರ ಜಿಲ್ಲೆಯಲ್ಲಿ ರವಿವಾರ ಜಾತಿಗಣತಿ ವರದಿಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಜಾತಿ ಗಣತಿ ವರದಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. 160 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಲಾದ ವರದಿಯನ್ನು ಸ್ವೀಕರಿಸಲಾಗಿದ್ದು, ವರದಿ ಜಾರಿ ಬಗ್ಗೆ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲಾಗುವುದು ಎಂದು ಸ್ಪಷ್ಟ ಪಡಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಜ. 16ರಂದು ಸಚಿವ ಸಂಪುಟದಲ್ಲಿ ಸಭೆಯಲ್ಲಿ ಮಂಡನೆ ಆಗಲಿದೆ. ಬಹಳಷ್ಟು ತಳ ಸಮುದಾಯಗಳು ಸ್ವಾಗತಿಸಿರುವ, ಮೇಲ್ವರ್ಗದವರು ಪ್ರಬಲವಾಗಿ ವಿರೋ ಧಿಸಿರುವ ಜಾತಿ ಗಣತಿ ವಿಚಾರದಲ್ಲಿ ಸರಕಾರ ಯಾವ ಹೆಜ್ಜೆ ಇರಿಸಬೇಕು ಎಂಬುದು ಸಚಿವ ಸಂಪುಟದಲ್ಲಿ ತೀರ್ಮಾನವಾಗಲಿದೆ ಎಂದರು.

10 ವರ್ಷಗಳ ಹಿಂದೆ ಆರಂಭ
2013ರಿಂದ 2018ರವರೆಗೆ ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದ ಅವ ಧಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಅರ್ಥಾತ್‌ ಜಾತಿ ಗಣತಿಯನ್ನು ಮಾಡಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸರಕಾರ ವರದಿ ಸ್ವೀಕರಿಸಿರಲಿಲ್ಲ. ಈ ಮಧ್ಯೆ ವರದಿ ಸೋರಿಕೆಯಾಗಿದ್ದು ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿ ಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಜಾತಿ ಗಣತಿ ವರದಿ ಸ್ವೀಕಾರ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಲೇ ಬಂದಿದ್ದರು.

ಆದರೆ ಜಾತಿ ಗಣತಿ ವರದಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದೊಂದು ಅವೈಜ್ಞಾನಿಕ ವರದಿ ಎಂದು ಒಕ್ಕಲಿಗ, ವೀರಶೈವ ಲಿಂಗಾಯತ ಸಮುದಾಯಗಳು ವಿರೋಧಿಸಿವೆ. ಜಾತಿ ಗಣತಿ ವರದಿ ಪರಿಷ್ಕರಣೆ ಮಾಡಬೇಕೆನ್ನುವ ಒಕ್ಕಲಿಗ ಸಮುದಾಯದ ಮನವಿ ಪತ್ರಕ್ಕೆ ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್‌ ಕೂಡ ಸಹಿ ಮಾಡಿದ್ದರು. ಇಷ್ಟೆಲ್ಲದರ ನಡುವೆಯೇ ಈಗ ಸರಕಾರಕ್ಕೆ ವರದಿ ಜಾರಿಯ ಚರ್ಚೆ ಜೋರಾಗಿದೆ.

Advertisement

ಸಮೀಕ್ಷಾ ವರದಿ ಸಮರ್ಪವಾಗಿಲ್ಲ ಮತ್ತು ದಶಕಗಳ ಹಿಂದಿನ ದತ್ತಾಂಶ ಆಧರಿಸಿದ ಇದು ವೈಜ್ಞಾನಿಕವೂ ಅಲ್ಲ ಎಂಬ ವಾದದ ಹಿನ್ನೆಲೆಯಲ್ಲಿ ಸರಕಾರ ಏಕಾಏಕಿ ವರದಿಯನ್ನು ಅಂಗೀಕರಿಸುವ ಸ್ಥಿತಿಯಲ್ಲೂ ಇಲ್ಲ. ಅಂಯೆಯೇ ಮಹತ್ವದ ಆಶಯದೊಂದಿಗೆ ಒಟ್ಟು 169 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ವರದಿಯನ್ನು ನೇಪಥ್ಯದಲ್ಲಿ ಉಳಿಸಲೂ ಸಾಧ್ಯವಿಲ್ಲ. ಹೀಗಾಗಿ ಈ ವರದಿ ವಿಚಾರದಲ್ಲಿ ಸಚಿವ ಸಂಪುಟ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ಕೂತೂಹಲ ಮೂಡಿಸಿದೆ.

ಜಾತಿಗಣತಿ ವಿಷಯವಾಗಿ ಈಗಲೇ ಸಭೆ ಮಾಡಿ ಗೊಂದಲ ಸೃಷ್ಟಿಸುವುದು ಬೇಡ, ಸಭೆ ಮುಂದೂಡುವಂತೆ ನಾನೇ ಒಕ್ಕಲಿಗರ ಸಂಘದ ಪದಾಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಿಚುಂಚನಗಿರಿ ಸ್ವಾಮೀಜಿ ಜತೆಗೂ ಮಾತನಾಡುವುದಾಗಿ ಭರವಸೆ ನೀಡಿದ್ದೇನೆ. ಯಾರಿಗೂ ಅನ್ಯಾಯವಾಗದಂತೆ ನಾವು ನೋಡಿಕೊಳ್ಳುತ್ತೇವೆ. ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.