Advertisement

ವೈಟ್‌ಟಾಪಿಂಗ್‌ನಲ್ಲಿ ಅವ್ಯವಹಾರ ನಡೆದಿಲ್ಲ!

12:24 AM Nov 18, 2019 | mahesh |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ವೈಟ್‌ಟಾಪಿಂಗ್‌ ಹಾಗೂ ಟೆಂಡರ್‌ ಶ್ಯೂರ್‌ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕ್ಯಾಪ್ಟನ್‌ ಆರ್‌.ಆರ್‌. ದೊಡ್ಡಿಹಾಳ್‌ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿಲ್ಲ ಎಂದು ಹೇಳಿದೆ.

Advertisement

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಅನುದಾನದಡಿ ಬಿಬಿಎಂಪಿಯ ಆಯ್ದ ರಸ್ತೆಗಳಲ್ಲಿ ಒಂದು ಮತ್ತು ಎರಡನೇ ಹಂತದ ವೈಟ್‌ಟಾಪಿಂಗ್‌ ಕಾಮಗಾರಿ ಹಾಗೂ ಆಯ್ದ ರಸ್ತೆಗಳಲ್ಲಿ ಟೆಂಡರ್‌ ಶ್ಯೂರ್‌ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್‌ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್ಸಿ)ದ ಮುಖ್ಯ ಎಂಜಿನಿಯರ್‌ ಆಗಿರುವ ಕ್ಯಾಪ್ಟನ್‌ ಆರ್‌.ಆರ್‌. ದೊಡ್ಡಿಹಾಳ್‌ ನೇತೃತ್ವದಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿಗೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಗಸ್ಟ್‌ನಲ್ಲಿ ಆದೇಶ ಮಾಡಿದ್ದರು.

ಈ ಹಿಂದಿನ ಸಮ್ಮಿಶ್ರ ಸರ್ಕಾರ ರೂಪಿಸಿದ್ದ ಯೋಜನೆಗಳಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಬಿಜೆಪಿಯ ಹಲವು ಹಿರಿಯ ನಾಯಕರು ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ದೊಡ್ಡಿಹಾಳ್‌ ಸಮಿತಿ ವರದಿ ನೀಡಿದ್ದು, ವೈಟ್‌ಟಾಪಿಂಗ್‌ ಕಾಮಗಾರಿಗೆ ಪ್ರತಿ ಕಿ.ಮೀ 10ರಿಂದ 12 ಕೋಟಿ ರೂ. ವೆಚ್ಚವಾಗಿಲ್ಲ. ಪ್ರತಿ ಕಿ.ಮೀಗೆ 2.4 ಕೋಟಿ ಮಾತ್ರ ವೈಟ್‌ಟಾಪಿಂಗ್‌ಗೆ ವೆಚ್ಚವಾಗುತ್ತಿದ್ದು, ಉಳಿದ ಶೇ.80ರಷ್ಟು ಮೊತ್ತವು ಪಾದಚಾರಿ ಮಾರ್ಗ ಮತ್ತು ಮೂಲಭೂತ ಸೌಕರ್ಯಗಳಿಗೆ ವೆಚ್ಚವಾಗಿರುತ್ತದೆ ಎಂದು ಹೇಳಿದೆ.

ವೈಟ್‌ಟಾಪಿಂಗ್‌ ಕಾಮಗಾರಿಗೆ ಭಾರೀ ಹಣ ಖರ್ಚಾಗಿತ್ತು ಎನ್ನುವ ಆರೋಪಕ್ಕೆ ಸ್ಪಷ್ಟನೆ ಸಿಕ್ಕಂತಾಗಿದೆ. ಅಲ್ಲದೆ, ವೈಟ್‌ಟಾಪಿಂಗ್‌ನಲ್ಲಿ ಅನುದಾನ ದುರ್ಬಳಕೆಗಾಗಿಯೇ ಯೋಜನೆಯನ್ನು ಬದಲಾಯಿಸಿಲ್ಲ ಎಂದು ತಿಳಿಸಲಾಗಿದೆ. ಇದೇ ವೇಳೆ ಯೋಜನಾ ವರದಿಗಳಲ್ಲಿ ವಿನ್ಯಾಸವನ್ನು ಉತ್ತಮಪಡಿಸುವ ಸಾಧ್ಯತೆ ಮತ್ತು ಅಂದಾಜು ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆಗಳು ಇತ್ತು ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ವೈಟ್‌ಟಾಪಿಂಗ್‌ ಮತ್ತು ಟೆಂಡರ್‌ ಶ್ಯೂರ್‌ ರಸ್ತೆಗಳು ಬೆಂಗಳೂರು ನಗರಕ್ಕೆ ಸೂಕ್ತವೇ ಇದರ ಉಪಯೋಗವಿದೆಯೇ ಎನ್ನುವ ಪ್ರಶ್ನೆಗೆ ಸಮಿತಿಯು ಬ್ಲ್ಯಾಕ್‌ ಟಾಪಿಂಗ್‌ ಅಥವಾ ಅಸ್ಫಾಲೆಡ್‌ ರಸ್ತೆ ನಿರ್ಮಾಣದಲ್ಲೂ ಬಿಬಿಎಂಪಿಯು ಚೆನ್ನೈನ ಮಾದರಿಯನ್ನು ಅಳವಡಿಸಿಕೊಳ್ಳುವುದು ಹಾಗೂ ನಗರದ ಬ್ಲ್ಯಾಕ್‌ ಟಾಪಿಂಗ್‌ ರಸ್ತೆಗಳಲ್ಲೂ ಟೆಂಡರ್‌ ಶ್ಯೂರ್‌ ಹಾಗೂ ವೈಟ್‌ಟಾಪಿಂಗ್‌ ಮಾದರಿಯಲ್ಲೇ ಕೇಬಲ್‌ಗ‌ಳನ್ನು ರಸ್ತೆಯ ಪಾರ್ಯಭಾಗಕ್ಕೆ ಬದಲಾಯಿಸುವುದು ಸೂಕ್ತ ಎಂದು ನಿರ್ದೇಶನ ನೀಡಿದೆ. ಅಲ್ಲದೆ, ಟೆಂಡರ್‌ ಶ್ಯೂರ್‌ ಮತ್ತು ವೈಟ್‌ಟಾಪಿಂಗ್‌ ಕಾಮಗಾರಿ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಸಮಿತಿ ಸಲಹೆ ನೀಡಿದ್ದು, ಇವುಗಳನ್ನು ಕೂಡಲೇ ಅಳವಡಿಸಿಕೊಳ್ಳುವಂತೆ ಹೇಳಿದೆ.

Advertisement

ಟೆಂಡರ್‌ ಶ್ಯೂರ್‌ ಅಡಿ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಡಿ ಬಿಬಿಎಂಪಿಯು ಮೊದಲ ಹಂತದಲ್ಲಿ 12 ಮತ್ತು ಎರಡನೇ ಹಂತದಲ್ಲಿ 13 ರಸ್ತೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಯೋಜನೆ ರೂಪಿಸಿಕೊಂಡಿತ್ತು. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯ್ದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಅಡಿ 2016-17ರಲ್ಲಿ 800 ಕೋಟಿ ರೂ. ಮತ್ತು 2017-18ರಲ್ಲಿ 690 ಕೋಟಿರೂ.ಗಳ ಮೊತ್ತದ ಅನುದಾನ ಒದಗಿಸಿದ್ದು, ಮೂರನೇ ಹಂತದ ವೈಟ್‌ಟಾಪಿಂಗ್‌ ಕಾಮಗಾರಿ ಪ್ರಗತಿಯಲ್ಲಿದೆ.

ದೊಡ್ಡಿಹಾಳ್‌ ವರದಿಯಲ್ಲಿನ ಮುಖ್ಯಾಂಶಗಳು: ಯೋಜನಾ ವರದಿಗಳನ್ನು ಬಿಬಿಎಂಪಿಯ ತಾಂತ್ರಿಕ ಸಲಹಾ ಸಮಿತಿಯು ಟೆಂಡರ್‌ಗೆ ಮುನ್ನ ಪರಿಶೀಲಿಸಿದೆ. ಅನುದಾನ ದುರುಪಯೋಗ ಮಾಡುವ ಉದ್ದೇಶದಿಂದಲೇ ವಿನ್ಯಾಸ ಮತ್ತು ಅಂದಾಜು ಮೊತ್ತವನ್ನು ಉದ್ದೇಶಪೂರ್ವಕವಾಗಿ ತಿರುಚಿರುವುದು ಕಂಡು ಬಂದಿರುವುದಿಲ್ಲ. ಅಂದಾಜಿನಲ್ಲಿ ಅಳವಡಿಸಿಕೊಂಡಿರುವ ಮೊತ್ತವು ಅನುಷ್ಠಾನದ ಸಮಯದಲ್ಲಿ ಬದಲಾಗುವ ಸಾಧ್ಯತೆ ಇರುವಂತೆ ಇಲ್ಲೂ ಕೂಡ ಬದಲಾಗುವ ಸಾಧ್ಯತೆ ಇರುತ್ತದೆ ಮತ್ತು ಈ ಯೋಜನೆಗಳಲ್ಲಿ ಉದ್ದೇಶಿತ ದೋಷಪೋರಿತ ಅಂಶಗಳು ಕಂಡು ಬರುವುದಿಲ್ಲ ಎಂದು ಹೇಳಲಾಗಿದೆ.

ಬಿಬಿಎಂಪಿ ಮತ್ತು ಸಂಚಾರ ಪೊಲೀಸರ ನಡುವೆ ಸಮನ್ವಯತೆ ಇರಬೇಕು. ರಸ್ತೆಯಡಿ ಅಳವಡಿಸಿರುವ ಪೈಪ್‌ಲೈನ್‌ಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುವುದು, ನಿರ್ಮಾಣ ಹಂತದಲ್ಲಿ ಇನ್ನೂ ಹೆಚ್ಚಿನ ಗುಣ ನಿಯಂತ್ರಣ ಅಳವಡಿಸುವುದು. ರಸ್ತೆಗಳಲ್ಲಿ ಉಬ್ಬು ಮತ್ತು ತಗ್ಗುಗಳು ಇಲ್ಲದಂತೆ ಕಾಂಕ್ರೀಟ್‌ ಸರ್ಮಪಕವಾಗಿ ಹಾಕುವುದಕ್ಕೆ ಗಮನ ನೀಡಬೇಕು.

ಪ್ಯಾಕೇಜ್‌ ಮೊತ್ತವನ್ನು 100 ಕೋಟಿಗೆ ಇಳಿಸುವಂತೆ, ಜಂಕ್ಷನ್‌ಗಳಲ್ಲಿ ಎಂ-60 ಬಳಸುವುದು ಹಾಗೂ ರಸ್ತೆಗಳಲ್ಲಿ ಕಾಮಗಾರಿಗಳನ್ನು ನಡೆಸುವುದಕ್ಕೆ ಸಂಚಾರ ಪೊಲೀಸರು 10 ಷರತ್ತುಗಳನ್ನು ವಿಧಿಸುವುದು, ಇವುಗಳಲ್ಲಿ ಶೇ.90ರಷ್ಟು ಷರತ್ತುಗಳನ್ನು ಪೂರೈಸಿದರೂ ಕಾಮಗಾರಿ ನಡೆಸುವುದಕ್ಕೆ ಗುತ್ತಿಗೆದಾರರಿಗೆ ಅವಕಾಶ ನೀಡುವುದು. ಮುಖ್ಯವಾಗಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಯುವ ಪ್ರದೇಶದ 2ಕಿ.ಮೀ ಅಂತರದಲ್ಲಿ ಬೇರೆ ಯಾವುದೇ ಕಾಮಗಾರಿಗೆ ಅವಕಾಶ ನೀಡಬಾರದು ಹಾಗೂ ಬಿಬಿಎಂಪಿಯೇ ಗುಣನಿಯಂತ್ರಣ ವಿಭಾಗವನ್ನು ಹೊಂದುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆಯೂ ಸೂಚನೆ ನೀಡಲಾಗಿದೆ.

ಕಾಮಗಾರಿ ಅನುಷ್ಠಾನದಲ್ಲಿ ಉಂಟಾಗಿರುವ ನ್ಯೂನ್ಯತೆಗಳು: ವೈಟ್‌ಟಾಪಿಂಗ್‌ ಹಾಗೂ ಟೆಂಡರ್‌ ಶ್ಯೂರ್‌ ಕಾಮಗಾರಿಗಳ ಅನುಷ್ಠಾನದ ಸಮಯದಲ್ಲಿ ಕೆಲವು ನ್ಯೂನ್ಯತೆಗಳು ಕಂಡು ಬಂದಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸಿ.ವಿ ರಾಮನ್‌ರಸ್ತೆಯಲ್ಲಿ ಜಾಯಿಂಟ್‌ಗಳಿಗೆ ಬಿಟಮಿನ್‌ ಫಿಲ್ಲಿಂಗ್‌ ಮಾಡಿಲ್ಲ, ಕೊಡಿಗೆಹಳ್ಳಿ ರಸ್ತೆಯಲ್ಲಿ ವಕ್ರವಾಗಿ ಕಾಂಕ್ರೀಟ್‌ ಹಾಕಲಾಗಿದ್ದು, ರಸ್ತೆಯಲ್ಲೇ ನೀರು ನಿಲ್ಲುವಂತಾಗಿದೆ.

ಕಾಟನ್‌ಪೇಟೆ ರಸ್ತೆಯಲ್ಲಿರುವ ಆರ್‌ಸಿ ಛೇಂಬರ್‌ಗಳನ್ನು ಸೂಕ್ತವಾಗಿ ಅಳವಡಿಸಿಲ್ಲ. ಕೆಲವು ಪ್ರದೇಶಗಳಲ್ಲಿ ಕಾಂಕ್ರೀಟ್‌ ದಪ್ಪ ಪ್ರಮಾಣದಲ್ಲಿ ಹಾಕಲಾಗಿದೆ. ಅಲ್ಲದೆ ಗುಣಮಟ್ಟದ ಮೇಲ್ವಿಚಾರಣೆ ಹೊಣೆ ಹೊತ್ತಿರುವ ಮುಖ್ಯ ಎಂಜಿನಿಯರ್‌ಗಳು ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣದ ಸಮಯದಲ್ಲಿ ಇನ್ನೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಲಾಗಿದೆ.

ಯೋಜನೆಗೆ ರಸ್ತೆಗಳ ಆಯ್ಕೆಯನ್ನು ತಾಂತ್ರಿಕ ಆಧಾರದ ಮೇಲೆ ಮಾಡುವುದು, ಸಿಮೆಂಟ್‌ ಜತೆಗೆ ಸಿಮೆಂಟಿಶಿಯಸ್‌ ಸಾಮಗ್ರಿಗಳನ್ನು ನೀಡುವುದು. ಇದರಿಂದ ಕಾಂಕ್ರೀಟ್‌ ಸಾರ್ಮಥ್ಯ ಹೆಚ್ಚಾಗುತ್ತದೆ ಮತ್ತು ರಸ್ತೆಯ ಖರ್ಚು ಕಡಿಮೆಯಾಗುತ್ತದೆ ಹಾಗೂ ಗುತ್ತಿಗೆಯ ನಿರ್ವಹಣೆ ಭಾಗವನ್ನು ಕಡಿಮೆ ಮಟ್ಟದಲ್ಲಿ ಮಾಡುವುದು.

ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ಬಿಜೆಪಿ: ವೈಟ್‌ಟಾಪಿಂಗ್‌ ಕಾಮಗಾರಿಯಲ್ಲಿ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿಯ ಬೆಂಗಳೂರು ನಗರ ವಕ್ತಾರ ಎನ್‌.ಆರ್‌. ರಮೇಶ್‌, ಸಚಿವ ಆರ್‌ ಅಶೋಕ್‌ ಸೇರಿದಂತೆ ಹಲವು ಬಿಜೆಪಿ ನಾಯಕರು ಆರೋಪಿಸಿದ್ದರು. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬಿಬಿಎಂಪಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅವ್ಯವಹಾರ ನಡೆದಿದೆ. ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಈಗ ವೆಚ್ಚ ಮಾಡಿರುವ ಹಣಕ್ಕಿಂತ ಕಡಿಮೆ ವೆಚ್ಚದಲ್ಲಿ ಮಾಡಿ ತೋರಿಸುತ್ತೇವೆ ಎಂದು ಹೇಳಿದ್ದರು. ಈಗ ಬಿಜೆಪಿ ಸರ್ಕಾರ ರಚಿಸಿದ ಸಮಿತಿಯೇ ವೈಟ್‌ಟಾಪಿಂಗ್‌ನಲ್ಲಿ ಅವ್ಯವಹಾರ ನಡೆದಿರುವುದು ಪತ್ತೆಯಾಗಿಲ್ಲ ಎಂದು ವರದಿ ನೀಡಿರುವುದು ಬಿಜೆಪಿ ನಾಯಕರಿಗೆ ಮುಜುಗರವುಂಟು ಮಾಡಿದೆ.

ದೊಡ್ಡಿಹಾಳ್‌ ವರದಿಯಲ್ಲಿ ಉಲ್ಲೇಖೀಸಿರುವ ರಸ್ತೆ ಯೋಜನೆಗಳ ವಿವರ
ಕಾಂಕ್ರೀಟ್‌ ರಸ್ತೆಯ ವೆಚ್ಚ: ಶೇ 20 ಅಂದಾಜು 2.40 ಕೋಟಿ ರೂ. ಪ್ರತಿ ಕಿ.ಮೀಗೆ ಪಾದಚಾರಿ
ಡಕ್ಟ್ಗಳ ಅಳವಡಿಕೆ: ಶೇ 30 ಅಂದಾಜು 3.60 ಕೋಟಿ ರೂ. ಪ್ರತಿ ಕಿ.ಮೀಗೆ
ಯುಟಿಲಿಟಿಗಳು ಹಾಗೂ ಇತರೆ: ಶೇ 50 ಅಂದಾಜು 6 ಕೋಟಿ ರೂ. ಪ್ರತಿ ಕಿ.ಮೀಗೆ.

ವೈಟ್‌ಟಾಪಿಂಗ್‌ ಕಾಮಗಾರಿ
ಹಂತ ವರ್ಷ ರಸ್ತೆಗಳ ಸಂಖ್ಯೆ ಉದ್ದ ಅಂದಾಜು ಮೊತ್ತ (ಕೋಟಿ ರೂ)
1ನೇ ಹಂತ 2016-17 29 93.47 800
2ನೇ ಹಂತ 2017-18 41 63.26 690
3ನೇ ಹಂತ 2018-19(ಮುಖ್ಯಮಂತ್ರಿಗಳ ನವಬೆಂಗಳೂರು ಯೋಜನೆ) 89 123 1139

ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿ
ರಸ್ತೆಗಳ ಸಂಖ್ಯೆ ಉದ್ದ ಅಂದಾಜು ಮೊತ್ತ (ಕೋಟಿ ರೂ)
12 16.98 201.79
13 20 442.99

ಕಾಂಗ್ರೆಸ್‌ ಸರ್ಕಾರದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಬರುವಂತೆ ಬಿಜೆಪಿ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಿರುವುದಕ್ಕೆ ಕ್ಷಮೆಯಾಚಿಸಬೇಕು.
-ಅಬ್ದುಲ್‌ ವಾಜೀದ್‌, ವಿರೋಧ ಪಕ್ಷದ ನಾಯಕ

ನಮ್ಮ ಅವಧಿಯಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ವರದಿ ಬಂದಿದೆ. ವೈಟ್‌ಟಾಪಿಂಗ್‌ ಹೆಚ್ಚು ಬಾಳಿಕೆ ಬರುವುದರಿಂದ ನಗರದ ಮುಖ್ಯ ರಸ್ತೆಗಳಿಗೆ ಈ ಯೋಜನೆ ಮುಂದುವರಿಸಬೇಕು.
-ಗಂಗಾಂಬಿಕೆ ಮಲ್ಲಿಕಾರ್ಜುನ್‌, ಮಾಜಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next