ಬೆಂಗಳೂರು: ಕಳೆದೆರಡು ದಿನಗಳಿಂದ ರಾಜಧಾನಿ ವ್ಯಾಪ್ತಿಯಲ್ಲಿ ಸುರಿದ ಮಳೆ ಬಿಬಿಎಂಪಿ ಗುಂಡಿ ಮುಚ್ಚಿದ ಕಳಪೆ ಕಾಮಗಾರಿಯನ್ನು ಬೆತ್ತಲು ಮಾಡಿದೆ. ಪ್ರತಿ ವಾರ್ಡ್‌ಗೆ ಗುಂಡಿ ಮುಚ್ಚಲು ಪಾಲಿಕೆ 15 ಲಕ್ಷ ರೂ. ನೀಡಿದ್ದು, ಕಳೆದ ಕೆಲವು ವಾರಗಳ ಹಿಂದಷ್ಟೇ ಮುಚ್ಚಿದ್ದ ರಸ್ತೆಗಳು ಜೆಲ್ಲಿ ಕಲ್ಲು ಸಮೇತ ಬಾಯ್ತೆರೆದು ಕೊಂಡಿದ್ದು, ಬಿಬಿಎಂಪಿ ಕಳಪೆ ಕಾಮಗಾರಿಯನ್ನು ಅನಾವರಣ ಮಾಡಿದೆ.
ಜಯನಗರದ ರಾಘವೇಂದ್ರ ಸ್ವಾಮಿ ದೇವಸ್ಥಾನದ ಮುಂದೆ ಯಂತೂ ದೊಡ್ಡ ಗಾತ್ರದ ರಸ್ತೆ ಗುಂಡಿ ಗಳು ಬಿದ್ದಿ ದ್ದು ವಾಹನ ಸವಾರರು ಓಡಾಡುವುದೇ ದುಸ್ತರವಾಗಿದೆ. ಜತೆಗೆ ರಾಗಿಗುಡ್ಡದ ಸಿಗ್ನಲ್ ಸಮೀಪ ಕೂಡ ಜೆಲ್ಲಿ ಕಲ್ಲುಗಳ ಎದ್ದು ಆಳ ಗುಂಡಿಗಳು ಬಿದ್ದಿದ್ದು, ಸಾರ್ವಜನಿಕರು ಪಾಲಿಕೆ ಕಾರ್ಯ ವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಕಳಪೆ ರಸ್ತೆ ನಿರ್ಮಿಸಲಾಗಿದೆ. ರಸ್ತೆ ಗುಂಡಿ ಮುಚ್ಚುವ ಯೋಜನೆ ಹಣ ಮಾಡುವ ಸ್ಕೀಮ್ ಆಗಿದೆ ಎಂದು ಸಿಟ್ಟು ಹೊರ ಹಾಕಿದರು. ಶಾಂತಿನಗರ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಸಂಪಂಗಿರಾಮನಗರ, ಡಬಲ್ ರೋಡ್, ರಿಚ್ಮಂಡ್ ಟೌನ್, ಗರುಡ ಮಹಲ್, ಕೋರಮಂಗಲ, ಬಿಟಿಎಂ ಲೇಔಟ್. ಬನ್ನೇರುಘಟ್ಟ ರಸ್ತೆ, ವಸಂತ ನಗರ, ಹಲಸೂರು, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಪ್ರದೇಶ, ವಿಜಯನಗರ, ಜೆಪಿನಗರ, ಬನಶಂಕರಿ, ಮೈಸೂರು ರಸ್ತೆ. ರಾಜಾಜಿನಗರ, ಯಶವಂತಪುರ, ಪೀಣ್ಯಾ ಕೈಗಾರಿಕಾ ಪ್ರದೇಶ, ಎಚ್.ಎ. ಎಲ್ ಸೇರಿದಂತೆ ಪಾಲಿಕೆಯ ಎಂಟೂ ವಲಯಗಳಲ್ಲಿ ದೊಡ್ಡ ಗಾತ್ರದ ಗುಂಡಿ ಬಿದ್ದಿದ್ದು ವಾಹನ ಸವಾರರು ಓಡಾಟ ನಡೆಸಲು ಭಯ ಪಡುತ್ತಿದ್ದಾರೆ. ಶಾಂತಿನಗರದ ಪ್ರಮುಖ ರಸ್ತೆಯಲ್ಲಿ ಮಾರು ದ್ದದಷ್ಟು ರಸ್ತೆ ಬಾಯ್ತೆರೆದಿದೆ.
ಮಳೆಯಿಂದ ಇಡೀ ರಸ್ತೆ ಅದ್ವಾನವಾಗಿದೆ. ಬೆಂಗಳೂರಿನಲ್ಲಿ ಸುರಿಯು ತ್ತಿರುವ ಮಳೆಗೆ ಬಿಬಿಎಂಪಿಯ ನಿಜವಾದ ಬಣ್ಣ ಬಯಲಾಗಿದೆ. “ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅದೇನು ರಸ್ತೆ ಪರಿಶೀಲನ ಮಾಡಿದರೋ ಗೊತ್ತಿಲ್ಲ’ ಎಂದು ಬೈಕ್ ಸವಾರರು ಸಿಟ್ಟು ಹೊರಹಾಕಿದರು.
ಮೆಜೆಸ್ಟಿಕ್ ಬಸ್ ನಿಲ್ದಾಣದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಇದೀಗ ಮಳೆಯಿಂದಾಗಿ ಮತ್ತಷ್ಟು ರಸ್ತೆ ಹಾಳಾಗಿದೆ. ಬಸ್ ಚಾಲಕರು ಸಂಚರಿಸಲು ಹೈರಾಣ ಪಡುತ್ತಿದ್ದಾರೆ. ಧನ್ವಂತರಿ ರಸ್ತೆ ಹಾಗೂ ಗುಬ್ಬಿ ತೋಟದಪ್ಪ ರಸ್ತೆ ಮೂಲಕ ಬಿಎಂಟಿಸಿ ಬಸ್ ನಿಲ್ದಾಣದ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಗುಂಡಿಗಳಿಂದಲೇ ತುಂಬಿಕೊಂಡಿದೆ. ಇದೇ ರಸ್ತೆ ಮೂಲಕವೇ ಬಿಎಂಟಿಸಿ ಬಸ್‌ಗಳೆಲ್ಲಾ ಬಸ್ ನಿಲ್ದಾಣವನ್ನು ಪ್ರವೇಶಿಸಬೇಕು. ಗುಂಡಿಗಳನ್ನು ತಪ್ಪಿಸಲು ಬಿಎಂಟಿಸಿ ಬಸ್ ಚಾಲಕರು ಹರಸಾಹಸಪಡುತ್ತಾರೆ.