Advertisement

ಬಸ್‌ ಪ್ರಯಾಣದರ ಏರಿಕೆ ಇಲ್ಲ

06:00 AM Jun 21, 2018 | Team Udayavani |

ಬೆಂಗಳೂರು: ನಷ್ಟ ಭರಿಸಲು ಶೇ. 15ರಷ್ಟು ಪ್ರಯಾಣದರ ಹೆಚ್ಚಳ ಮಾಡಬೇಕು ಎಂಬ ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದರೂ ಸದ್ಯಕ್ಕೆ ಬಸ್‌ ಪ್ರಯಾಣ ದರ ಏರಿಕೆ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

Advertisement

ಆದರೆ, ನಷ್ಟ ಕಡಿಮೆ ಮಾಡಲು ಮತ್ತು ಆದಾಯ ಹೆಚ್ಚಿಸಲು ಅನಗತ್ಯ ವೆಚ್ಚಕ್ಕೆ ಕಡಿವಾಣ, ಬಸ್‌ ನಿಲ್ದಾಣಗಳ ವಾಣಿಜ್ಯೀಕರಣ ಮುಂತಾದ ಪರ್ಯಾಯ ಮಾರ್ಗಗಳನ್ನು ಅನುಸರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗಳು ಸುಮಾರು 500 ಕೋಟಿ ರೂ. ನಷ್ಟದಲ್ಲಿದ್ದು, ಶೇ. 15ರಷ್ಟು ಪ್ರಯಾಣದರ ಏರಿಸಬೇಕು ಎಂದು ನಿಗಮಗಳು ಪ್ರಸ್ತಾವನೆ ಸಲ್ಲಿಸಿವೆ. ಆದರೆ, ಹೊಸ ಸರ್ಕಾರ ಈಗ ತಾನೇ ಅಧಿಕಾರಕ್ಕೆ ಬಂದಿರುವುದರಿಂದ ಸದ್ಯಕ್ಕೆ ಪ್ರಯಾಣದರ ಏರಿಕೆ ಬೇಡ ಎಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ವೈಯಕ್ತಿಕವಾಗಿ ನನಗಂತೂ ಬಸ್‌ ಪ್ರಯಾಣ ದರ ಏರಿಕೆ ಪ್ರಯಾಣಿಕರ ಮೇಲೆ ಹೊರೆ ಹಾಕುವುದು ಇಷ್ಟವಿಲ್ಲ ಎಂದರು.

ಈ ಮಧ್ಯೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ನಷ್ಟ ಕಡಿಮೆ ಮಾಡಲು ಮತ್ತು ಬಸ್‌ ನಿಲ್ದಾಣಗಳನ್ನು ವಾಣಿಜ್ಯೀಕರಣಗೊಳಿಸಿ ಆದಾಯ ಹೆಚ್ಚಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲಾಗುವುದು. ನಿಲ್ದಾಣಗಳ ವಾಣಿಜ್ಯೀಕರಣದಿಂದಲೇ ಸಾರಿಗೆ ಸಂಸ್ಥೆಗಳಿಗೆ ವಾರ್ಷಿಕ 100ರಿಂದ 200 ಕೋಟಿ ರೂ. ಆದಾಯ ಹೆಚ್ಚಳವಾಗುವ ಅಂದಾಜು ಮಾಡಲಾಗಿದೆ ಎಂದು ವಿವರಿಸಿದರು.

ಉಚಿತ ಬಸ್‌ ಪಾಸ್‌:
ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇರುವ ಉಚಿತ ಬಸ್‌ ಪಾಸ್‌ ಸೌಲಭ್ಯವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ವಿತರಿಸಲು ಸರ್ಕಾರ ಬದ್ಧವಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮತ್ತೂಮ್ಮೆ ಈ ಕುರಿತು ಚರ್ಚಿಸಲಾಗುವುದು. ಈ ನಿರ್ಧಾರ ಕೈಗೊಂಡರೆ ಸುಮಾರು 19.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಿಸಬೇಕಿದ್ದು, ಇದರಿಂದ 620 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದರು.

Advertisement

ಪ್ರಸ್ತುತ ರಿಯಾಯಿತಿ ದರದ ಬಸ್‌ ಪಾಸ್‌ಗಳಿಂದ ಆಗುವ ಹೊರೆ ಪೈಕಿ ಶೇ. 50 ರಷ್ಟು ಹಣವನ್ನು ರಾಜ್ಯ ಸರ್ಕಾರ, ಶೇ.25 ರಷ್ಟು ಹಣವನ್ನು ಸಾರಿಗೆ ನಿಗಮಗಳು ಹಾಗೂ ಶೇ.25 ರಷ್ಟು ಹಣವನ್ನು ಫ‌ಲಾನುಭವಿ ಭರಿಸುತ್ತಿದ್ದಾರೆ. ಉಚಿತ ಬಸ್ಸು ಪಾಸಿಗಾಗಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯಿಂದ ಶೇ.25 ರ ಬದಲಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೇ.35-40 ರಷ್ಟು ಹಣ ಒದಗಿಸಲು ನಾವು ಸಿದ್ಧರಿದ್ದೇವೆ. ಇದರಿಂದ ಪ್ರತಿ ವರ್ಷ 100 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ. ಆದರೂ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಆದರೆ, ರಾಜ್ಯ ಸರ್ಕಾರದ ಪಾಲು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯ ಕಾರ್ಯಕ್ರಮವಾದ್ದರಿಂದ ಶಿಕ್ಷಣ ಇಲಾಖೆಯು ಅನುದಾನ ನೀಡಿ ಕೈ ಜೋಡಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next