Advertisement
ಮಂಗಳೂರು ನಗರ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿ ವೃದ್ಧಿಯಾಗುತ್ತಿದೆ. ಹೀಗಿದ್ದರೂ ಸಮರ್ಪಕ ಬಸ್ ತಂಗುದಾಣ ನಿರ್ಮಾಣಕ್ಕೆ ನಿರುತ್ಸಾಹ ತೋರಿರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಸ್ಥಳೀಯರು ಹೇಳುವಂತೆ ಬಿಕರ್ನಕಟ್ಟೆಯಲ್ಲಿ ಈ ಹಿಂದೆ ಸುಮಾರು 38 ವರ್ಷಗಳ ಹಿಂದಿನ ಬಸ್ ತಂಗುದಾಣವೊಂದಿತ್ತು. ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಆ ಬಸ್ ತಂಗುದಾಣವನ್ನು ಕೆಡಹಲಾಗಿದೆ. ಬಳಿಕ, ಅಲ್ಲಿ ಯಾವುದೇ ಬಸ್‌ಸ್ಟ್ಯಾಂಡ್ ನಿರ್ಮಾಣಗೊಂಡಿಲ್ಲ. ಬಸ್ ತಂಗುದಾಣ ಇಲ್ಲದ ಪರಿಣಾಮ ಸಾರ್ವಜನಿಕರು ರಸ್ತೆ ಬದಿ ಯಲ್ಲಿಯೇ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಲಿನ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಮತ್ತು ಬಿಸಿಲಿನಿಂದ ರಕ್ಷಿಸಲು ಬಸ್ ತಂಗುದಾಣದ ಆವಶ್ಯಕತೆ ಇದೆ.
ಸ್ಥಳೀಯರಾದ ಐರಿನ್ ಡಿ’ಸಿಲ್ವ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಬಿಕರ್ನಕಟ್ಟೆಯಲ್ಲಿ ಬಸ್ ತಂಗುದಾಣ ಇಲ್ಲದೆ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ. ಸಮರ್ಪಕ ನಿಲ್ದಾಣ ಇಲ್ಲದ ಪರಿಣಾಮ ಬಸ್ ಎಲ್ಲಿ ನಿಲ್ಲುತ್ತದೆ ಎಂದು ತಿಳಿಯುವುದೇ ಕಷ್ಟವಾಗಿದೆ. ಇದರಿಂದಾಗಿ ಹಲವರಿಗೆ ಬಸ್ ತಪ್ಪುತ್ತದೆ. ಈ ಕುರಿತಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆಯೇ ವಿನಾ ಇನ್ನೂ ಪರಿಹಾರವಾಗಿಲ್ಲ’ ಎನ್ನುತ್ತಾರೆ.