Advertisement

ಇಚ್ಲಂಪಾಡಿಯ ಕರ್ತಡ್ಕಕ್ಕೆ ಇನ್ನೂ ಸಿಕ್ಕಿಲ್ಲ ಸೇತುವೆ ಭಾಗ್ಯ

08:27 PM Jul 08, 2021 | Team Udayavani |

ಸುಬ್ರಹ್ಮಣ್ಯ: ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಸರ್ವಋತು ಸೇತುವೆ ಭಾಗ್ಯ ಕನಸಾಗಿಯೇ ಉಳಿದಿದೆ. ತೋಡಿಗೆ ಅಡಿಕೆ ಮರದ ಪಾಲ ನಿರ್ಮಿಸಿ ಜೀವಭಯದಲ್ಲೇ ಸಾಗಬೇಕಾದ ಸ್ಥಿತಿ ಇಲ್ಲಿನವರದ್ದು.

Advertisement

ಇದು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದ 2ನೇ ವಾರ್ಡ್‌ ಕರ್ತಡ್ಕ ಎಂಬಲ್ಲಿನ ಚಿತ್ರಣ. ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ಹೆದ್ದಾರಿಯ ಲವತ್ತಡ್ಕ ಬಳಿ ಕರ್ತಡ್ಕ ಎಂಬಲ್ಲಿ ವಾಲ್ತಾಜೆ ತೋಡಿಗೆ ಸೇತುವೆ ಇಲ್ಲದೆ ಶಾಲಾ ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಸೇರಿದಂತೆ ಮಳೆಗಾಲದಲ್ಲಿ ಎಲ್ಲರೂ ಇದೇ ಪಾಲದ ಮೇಲೆ ಸಂಚರಿಸಬೇಕಿದೆ.

ಬೇಸಗೆಯಲ್ಲಿ ಇದೇ ತೋಡಿಗೆ ಇಲ್ಲಿನ ಜನರೇ ಖರ್ಚು ಹಾಕಿ ಸಿಮೆಂಟ್‌ ಪೈಪ್‌ ಅಳವಡಿಸಿ ರಸ್ತೆ ನಿರ್ಮಿಸುತ್ತಾರೆ. ಮಳೆಗಾಲದಲ್ಲಿ ಅದು ಕೊಚ್ಚಿಕೊಂಡು ಹೋಗಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದಾಗಿ ಮರದ ಪಾಲದಲ್ಲಿ ಭಯದ ನಡಿಗೆ ಇನ್ನೂ ಜೀವನದ ಅವಿಭಾಜ್ಯ ಅಂಗವಾಗಿದೆ.

ಸರ್ವ ಋತು ಸೇತುವೆ ಬೇಡಿಕೆ :

ಕರ್ತಡ್ಕ ಪ್ರದೇಶದಲ್ಲಿ ಏಳು ಮನೆಗಳಿದ್ದು, 35ಕ್ಕೂ ಅಧಿಕ ಜನ ಇಲ್ಲಿ ವಾಸಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಭಾಗದಿಂದ ಕರ್ತಡ್ಕ ಪ್ರದೇಶಕ್ಕೆ ಬರಲು ತೋಡೊಂದನ್ನು ದಾಟಬೇಕಿದೆ. ಇಲ್ಲಿ ಸೇತುವೆ ನಿರ್ಮಿಸುವಂತೆ ಇಲ್ಲಿನ ನಿವಾಸಿಗಳು ಸ್ಥಳೀಯಾಡಳಿತ, ಸ್ಥಳೀಯ  ಜನಪ್ರತಿನಿಧಿಗಳಿಗೆ, ಜಿಲ್ಲಾಧಿ ಕಾರಿಗಳು, ಜಿ.ಪಂ. ಸಿಇಒ, ಲೋಕೋ ಪಯೋಗಿ ಸಚಿವರು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕೂಡ ಮನವಿ ಸಲ್ಲಿಸಿದ್ದಾರೆ. ಇನ್ನಾದರೂ ಇಲ್ಲಿಗೆ ಸರ್ವಋತು ಸೇತುವೆ ನಿರ್ಮಿಸಲು ಸಂಬಂಧಿಸಿದವರು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Advertisement

ಚುನಾವಣೆ ವೇಳೆ ಭರವಸೆ :

ಚುನಾವಣೆ ಸಂದರ್ಭದಲ್ಲಿ ಮತ ಯಾಚನೆಗೆ ಬರುವ ಎಲ್ಲ ಪಕ್ಷದ ಅಭ್ಯರ್ಥಿ ಗಳಲ್ಲಿ ಇಲ್ಲಿ ಸರ್ವಋತು ಸೇತುವೆ ನಿರ್ಮಿಸಲು ಬೇಡಿಕೆ ಇಡಲಾಗಿದೆ. ಸೇತುವೆ ಖಂಡಿತ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.  ಆದರೆ ಸೇತುವೆ ಆಗಿಲ್ಲ ಎಂದು ಜನರು ಹೇಳಿದ್ದಾರೆ.

ಸೇತುವೆ ಬೇಡಿಕೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ನನ್ನದು ಪ್ರಥಮ ಅವಧಿ ಯಾದ್ದರಿಂದ, ಮುಂದೆ ಈ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. -ವನಿತಾ, ಅಧ್ಯಕ್ಷರು,  ಗ್ರಾ.ಪಂ. ಕೌಕ್ರಾಡಿ

ಸೇತುವೆಗೆ ಸುಮಾರು 50 ಲಕ್ಷ ರೂ. ಅನುದಾನ ಬೇಕಾಗಬಹುದು.  ಗ್ರಾ.ಪಂ.ಗೆ ಅಷ್ಟು ಅನುದಾನ ಬರುವುದಿಲ್ಲ. ಬೇರೆ ಇಲಾಖೆಯಿಂದ ಅನುದಾನ ಭರಿಸಬೇಕಾಗುತ್ತದೆ.  -ಮಹೇಶ್‌, ಪಿಡಿಒ  ಕೌಕ್ರಾಡಿ ಗ್ರಾ.ಪಂ.

10-15 ವರ್ಷಗಳಿಂದ ಇಲ್ಲಿ ಸೇತುವೆ ನಿರ್ಮಿಸುವಂತೆ ಸಂಬಂಧಿಸಿದ ಎಲ್ಲರಿಗೂ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಚುನಾವಣೆ ವೇಳೆ ಭರವಸೆ ನೀಡುತ್ತಾರೆ, ಆದರೆ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಇಲ್ಲಿ ಸೇತುವೆ ನಿರ್ಮಿಸಲು ಮುಂದಾಗಬೇಕು. -ಲಿಂಗಪ್ಪ ಗೌಡ ಕರ್ತಡ್ಕ, ಸ್ಥಳೀಯ ನಿವಾಸಿ

 

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next