ಕಲಬುರಗಿ: ತಂತ್ರಜ್ಞಾನದ ಭರಾಟೆಯಲ್ಲಿ ಸಿಲುಕಿರುವ ಮನುಷ್ಯನಿಗೆ ಪುಸ್ತಕಗಳಿಂದ ಸಿಗುವ ಆನಂದ, ಸಂತೋಷ ಬೇರೆ ಯಾವುದರಲ್ಲೂ ದೊರೆಯುವುದಿಲ್ಲ. ಪುಸ್ತಕಗಳು ಸುಖ ಮತ್ತು ಭೋಗ ಎರಡನ್ನು ಅರಸಿಕೊಂಡು ಹೋಗುವ ಪಾಠ ಕಲಿಸುತ್ತದೆ. ಆದ್ದರಿಂದ ಪುಸ್ತಕಗಳಿಗೆ ಎಂದೂ ಸಾವಿಲ್ಲ ಎಂದು ಹಿರಿಯ ಸಾಹಿತಿ, ಚಿಂತಕ ಡಾ| ಬರಗೂರು ರಾಮಚಂದ್ರಪ್ಪ ಹೇಳಿದರು.
ಎಚ್ಕೆಸಿಸಿಐ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಿದ್ಧಲಿಂಗೇಶ್ವರ ಬುಕ್ ಡಿಪೋ, ಪ್ರಕಾಶನದ 42ನೇ ವಾರ್ಷಿಕೋತ್ಸವ, 111 ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪುಸ್ತಕಗಳಿಗೆ ಎಂದೆಂದಿಗೂ ಜೀವಂತಿಕೆ ಇರುತ್ತದೆ. ಪುಸ್ತಕಗಳು ನಮ್ಮೊಂದಿಗೆ ಮಾತನಾಡುತ್ತಲೇ ಇರುತ್ತವೆ. ಅಂತರಂಗದೊಳಗೆ ಓದುಗ ಹಾಗೂ ಪುಸ್ತಕಗಳ ಸಂವಾದ ನಿರಂತರವಾಗಿ ನಡೆಯುತ್ತದೆ. ತಂತ್ರಜ್ಞಾನ ಪ್ರಭಾವದಿಂದಾಗಿ ಇಂದು ಪುಸ್ತಕಗಳು ಸ್ವಲ್ಪ ಹಿಂದಕ್ಕೆ ಸರಿದಿರಬಹುದು ಅಷ್ಟೆ ಎಂದು ಹೇಳಿದರು.
ಉದ್ಯಮಕ್ಕೆ ಸಂಪಾದನೆ ಮುಖ್ಯವಾದರೆ, ಮಾಧ್ಯಮಕ್ಕೆ ಸಂವೇದನೆ ಮುಖ್ಯ. ಸಂವೇದನೆಗಿಂತ ಸಂಪಾದನೆಯೇ ಮುಖ್ಯವಾದಲ್ಲಿ ಅಗ್ಗದ ಪುಸ್ತಕಗಳು ಹೊರ ಬರುತ್ತವೆ. ಅಗ್ಗದ ಪುಸ್ತಕಗಳು ಅಭಿರುಚಿ ಹಾಳು ಮಾಡುತ್ತವೆ. 20ನೇ ಶತಮಾನ ಸುಖ ಮಾತ್ರ ಹುಡುಕಿಕೊಂಡು ಹೊರಟಿತ್ತು. ಆದರೆ, 21ನೇ ಶತಮಾನ ಭೋಗ ಅರಸಿಕೊಂಡು ಹೊರಟಿದೆ. ಸರಕು ಸಂಸ್ಕೃತಿಯೇ ಮುಖ್ಯವಾಗಿರುವ ಇಂದಿನ ಕಾಲ ಘಟ್ಟದಲ್ಲಿ ಮಾನವ ಸಂಸ್ಕೃತಿ ಹುಡುಕಾಟದಲ್ಲಿ ನಾವಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಎಸ್.ಆರ್. ನಿರಂಜನ ಮಾತನಾಡಿ, ಪುಸ್ತಕ ಉದ್ಯಮ ಮತ್ತು ತಂತ್ರಜ್ಞಾನ ಎರಡೂ ಬೆಳೆಯಬೇಕು. ಇದು ಓದುಗರು, ತಂತ್ರಜ್ಞರು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಮಾತನಾಡಿ, ಪುಸ್ತಕ ಉದ್ಯಮವಾಗಿದ್ದು, ಮೌಖೀಕ ಸಾಧನೆಯೇ ಹೆಚ್ಚಾಗಿದೆ. ಸರ್ಕಾರ ಕನ್ನಡಕ್ಕೆ ಮೀಸಲಿಟ್ಟ ಅನುದಾನವನ್ನು ಇತರ ಕಾರ್ಯ ಚಟುವಟಿಕೆಗಳಿಗೆ ಬಳಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶಕುಮಾರ ಹೊಸಮನಿ, ಸಾಹಿತಿ ಡಾ| ಪ್ರದೀಪಕುಮಾರ ಹೆಬ್ರಿ, ಪ್ರಕಾಶಕ ಬಸವರಾಜ ಕೋನೆಕ, ಡಾ| ಶಿವರಾಜ ಪಾಟೀಲ, ಡಾ| ಚಿ.ಸಿ. ನಿಂಗಣ್ಣ, ಡಾ| ಶ್ರೀಶೈಲ ನಾಗರಾಳ, ಡಾ| ಜಗದೇವಿ ಗಾಯಕವಾಡ, ಚಂದ್ರಕಾಂತ ಕರದಳ್ಳಿ ಹಾಜರಿದ್ದರು.