Advertisement

ಪಾಕಿಸ್ತಾನದ ಹೆಸರಿಲ್ಲದೇ‌ ಬಿಜೆಪಿ ರಾಜಕಾರಣವೇ ಇಲ್ಲ: ಬಿ.ಕೆ.ಹರಿಪ್ರಸಾದ್ ಆರೋಪ

04:26 PM Jun 14, 2021 | Team Udayavani |

ಕಾರವಾರ: ಪಾಕಿಸ್ತಾನದ ಹೆಸರು ತೆಗೆದುಕೊಳ್ಳದೇ ಬಿಜೆಪಿ ಒಂದೇ ದಿನ ರಾಜಕಾರಣ ಮಾಡುವುದಿಲ್ಲ. ಪ್ರಧಾನಿಯಾಗಿ ಹತ್ತು ವರ್ಷ ಇದ್ದ ಮನಮೊಹನ್‌ ಸಿಂಗ್ ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ. ಕಾಂಗ್ರೆಸ್ ಮುಖಂಡರು ಯಾರು ಇತ್ತೀಚಿನ 7 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ಭಯೋತ್ಪಾದನೆ ನಿರ್ಮೂಲನೆಯಾಗುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ದಿಟ್ಟ ನಿರ್ಧಾರ ಕೈಗೊಂಡಿದ್ದರು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.‌

Advertisement

ಸೋಮವಾರ ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಮಾದ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ‌ ಕಾಂಗ್ರೆಸ್ ಮುಖಂಡ  ಹರಿಪ್ರಸಾದ್, ಪಾಕಿಸ್ತಾನದ ಶೇರವಾನಿ ಹಾಕಿ ಬಿರಿಯಾನಿ ತಿನ್ನಲು ಹೋಗಿದ್ದು 56 ಇಂಚಿನ ಎದೆಯ ನರೇಂದ್ರ ಮೋದಿಯವರೇ ಹೊರತು ಬೇರೆ ಯಾರೂ ಅಲ್ಲ. ನಮ್ಮ ದೇಶಕ್ಕೆ, ಪಾಕಿಸ್ತಾನದ ಎದುರು ಇದಕ್ಕಿಂತ ಅವಮಾನ ಬೇರೆ ಇಲ್ಲ ಎಂದು ಕಿಡಿಕಾರಿದರು. ಇನ್ನೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಮಾಡಿದಾಗ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ, ನಟಿ ಮಾಳವಿಕಾ ರಂತಹ ಬಿಜೆಪಿ ಮುಖಂಡರುಗಳೇ ರಸ್ತೆಗಿಳಿದು ಪ್ರತಿಭಟಿಸಿದ್ದರು. ಆದರೆ ಈಗ ಅವರ ಬಳಿ, ಕೇಳಿದ್ರೆ ಬೆಲೆ ಏರಿಕೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ದರ ಏರಿಕೆಯಾಗಿದೆ, ಕೊರೊನಾದಿಂದಾಗಿ ಆರ್ಥಿಕತೆ ಮೇಲೆ ಹೊಡೆತ ಬಿದ್ದಿದೆ ಅಂತಾ ಕಾರಣಗಳನ್ನು ಕೊಡುತ್ತಾರೆ. ಹೀಗಾಗಿ ಇಂತಹ ಬೇಜವಾಬ್ದಾರಿ, ನಾಚಿಕೆಗೆಟ್ಟ, ಜನವಿರೋಧಿ ಸರ್ಕಾರದ ಅಂತ್ಯಸಂಸ್ಕಾರ ಆದಷ್ಟು ಬೇಗ ಆಗಬೇಕು ಅಂತಾ ನನ್ನ ಆಶಯ ಎಂದರು.

ಇದನ್ನೂ ಓದಿ:ಸಿಎಂ ಬದಲಾವಣೆ ವಿಚಾರದಲ್ಲಿ ಎಚ್‌ ಡಿ ಡಿ ಕುಟುಂಬ ಎಳೆಯುವುದು ಬೇಡ : ಕುಮಾರಸ್ವಾಮಿ

ಹಣ ಕೊಟ್ಟರೆ ಮಾತ್ರ ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡುತ್ತಾರೆ ಎನ್ನುವ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹಣದಿಂದ ಎಂಎಲ್ಎಗಳನ್ನೇ ಖರೀದಿ ಮಾಡಬಹುದು ಅಂತಾ ತೋರಿಸಿಕೊಟ್ಟಿದ್ದೇ ಬಿಜೆಪಿಯವರು. ಆಪರೇಷನ್ ಕಮಲ ಸಂಸ್ಕೃತಿಯ ಜನಕ ಯಡಿಯೂರಪ್ಪ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ನನ್ನ ಕೆಲಸದಿಂದ ಗುರುತಿಸಿಕೊಂಡು ಇಷ್ಟು ದೂರ ಬೆಳೆದು ಬಂದಿದ್ದೇನೆ. ನಾನು ಯಾರಿಗೂ ಹಣಕೊಟ್ಟಿಲ್ಲ, ಯಾರಿಂದಲೂ ಹಣವನ್ನೂ ಪಡೆದಿಲ್ಲ ಎಂದರು.

ಭಾರತೀಯ ಜನತಾ ಪಾರ್ಟಿ ಆರ್‌ಎಸ್ಎಸ್‌ನ ಒಂದು ರಾಜಕೀಯ ಘಟಕವಾಗಿದೆ. ಅಲ್ಲಿನ ಸರಸಂಘ ಚಾಲಕರ ಸೂಚನೆ ಮೇರೆಗೆ ಬಿಜೆಪಿಯಲ್ಲಿ ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರ ಬದಲಾವಣೆಯಾಗುತ್ತದೆ. ಆದರೆ ಕಾಂಗ್ರೆಸ್‌ನಲ್ಲಿ 11 ಸಾವಿರ ಮಂದಿ ಪ್ರದೇಶ ಕಾಂಗ್ರೆಸ್ ಸದಸ್ಯರು ಇದ್ದು, ಅವರಿಂದಲೇ ನೇರವಾಗಿ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಅವರ ಆಶಯ ಇರುವವರೆಗೆ ಕಾಂಗ್ರೆಸ್ ನಲ್ಲಿ ಈಗಿರುವ ಅಧ್ಯಕ್ಷರೇ ಮುಂದುವರೆಯುತ್ತಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next