ಮನಾಲಿ: ಕೋವಿಡ್ ಎರಡನೇ ಅಲೆ ಕೊಂಚ ತಗ್ಗಿದ್ದರಿಂದ ಮೈಮರೆತ ಜನರು ಪ್ರವಾಸಿ ತಾಣ ‘ಮನಾಲಿ’ಯಲ್ಲಿ ಸಾಗರೋಪಾದಿಯಲ್ಲಿ ಸೇರಿದ್ದಾರೆ.
ದೇಶದಲ್ಲಿ ಅನೇಕ ಸಾವು ನೋವಿಗೆ ಕಾರಣವಾದ ಕೋವಿಡ್ ಎರಡನೇ ಅಲೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಸರ್ಕಾರ ಕೂಡ ಲಾಕ್ ಡೌನ್ ನಿಮಯಗಳನ್ನು ಸಡಿಲಿಸಿದೆ. ಆದರೂ ಕೂಡ ಎಚ್ಚರಿಕೆಯಿಂದ ಇರಿ ಎಂದು ಜನರಿಗೆ ತಿಳಿಸಿದೆ. ಆದರೆ, ಇವೆಲ್ಲವುಗಳನ್ನು ಜನರು ಗಾಳಿಗೆ ತೂರಿದಂತಿದೆ. ಇದಕ್ಕೆ ಕಾರಣ ಮನಾಲಿಯಲ್ಲಿ ಸೇರಿರುವ ಜನಜಂಗುಳಿ.
ಲಾಕ್ ಡೌನ್ ತೆರವಾದ ಹಿನ್ನೆಲೆ ಸಾವಿರಾರು ಜನ ಪ್ರವಾಸಿಗರು ಮನಾಲಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅಲ್ಲಿನ ಹೋಟೆಲ್ ಗಳು, ರೆಸ್ಟೊರೆಂಟ್ ಗಳ ರೂಮ್ ಗಳು ಹೌಸ್ ಫುಲ್ ಆಗಿವೆ. ಪ್ರಮುಖ ಬೀದಿಗಳು ಜನರಿಂದ ತುಂಬಿ ತುಳುಕುತ್ತಿವೆ. ಈ ದೃಶ್ಯಗಳನ್ನು ನೋಡುತ್ತಿದ್ದರೆ ಮೂರನೇ ಅಲೆ ಆಹ್ವಾನಕ್ಕಾಗಿಯೇ ಇಲ್ಲಿ ಜನ ಸೇರಿದ್ದಾರೆನೋ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
‘ಮನಾಲಿ’ ಟ್ವಿಟರಿನಲ್ಲಿ ಟ್ರೆಂಡಿಂಗ್ ನಲ್ಲಿದೆ. ಪ್ರವಾಸಿಗರಿಂದ ತುಂಬಿಕೊಂಡಿರುವ ಮನಾಲಿಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜೊತೆಗೆ ಜವಾಬ್ದಾರಿ ಮರೆತ ಜನರ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
ಸದ್ಯ ಮನಾಲಿಯಲ್ಲಿ ಹೋಟೆಲ್ ಗಳು ‘ನೋ ಬೆಡ್’ ಎಂದು ಬೋರ್ಡ್ ಹಾಕಿವೆ. ಮತ್ತೊಮ್ಮೆ ಆಸ್ಪತ್ರೆಗಳಲ್ಲಿ ಈ ರೀತಿಯ ಬೋರ್ಡ್ ಕಾಣಿಸಿಕೊಳ್ಳವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.