ಹೊಸಪೇಟೆ: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ವಿಶ್ವಖ್ಯಾತ ಹಂಪಿ ವೀಕ್ಷಣೆಗೆ ತಂಡೋಪ ತಂಡವಾಗಿ ದೇಶ-ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದರೆ ಇತ್ತ ಹಂಪಿ ಪರಿಸರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ.
ಹೌದು! ಸರಣಿ ರಜೆ ನಿಮಿತ್ತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಯತ್ತ ಧಾವಿಸಿ ಬರುತ್ತಿದ್ದರೆ, ಇತ್ತ ಹಂಪಿಯಲ್ಲಿ ಕುಡಿಯುವ ನೀರು, ಶೌಚಾಲಯಗಳ ಸಮಸ್ಯೆ ಪ್ರವಾಸಿಗರನ್ನು ಬಾಧಿಸುತ್ತಿದೆ. ಹಂಪಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಆಗಮಿಸುವ ಹಂಪಿಗೆ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಇದೀಗ ಕಳೆದ ಎರಡು ವರ್ಷದ ಕಳೆದ ಬಳಿಕ ಹೆಚ್ಚು ಪ್ರವಾಸಿಗರು ಹಂಪಿಗೆ ಆಗಮಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಹಂಪಿ ವಿಶ್ವ ಪರಂಪರೆ ಪ್ರದೇಶಾಭಿವೃದ್ಧಿ ನಿರ್ವಹಣಾ ಪ್ರಾಧಿ ಕಾರ ಮೂರು ಇಲಾಖೆಗಳು ಇದ್ದರೂ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯಗಳನ್ನು ಸಂಪೂರ್ಣ ವಿಫಲವಾಗಿವೆ.
ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿಗರು ವಿಜಯವಿಠಲ ದೇಗುಲದ ಪ್ರದೇಶದ ಬಳಿ ಕುಡಿಯುವ ನೀರಿನ ಸಮಸ್ಯೆ ಅತಿಹೆಚ್ಚು ಕಾಡುತ್ತಿದ್ದು, ಕುಡಿಯುವ ನೀರು ಸಿಗದೇ ಪ್ರವಾಸಿಗರು ಪರದಾಡುತ್ತಿದ್ದಾರೆ. ವಿಜಯವಿಠಲ ದೇವಾಲಯಕ್ಕೆ ತೆರಳಲು ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಇದ್ದರೂ ಪ್ರವಾಸಿಗರು ಕಾಲ್ನಡಿಗೆಯಲ್ಲಿ ವಿಠಲ ದೇವಾಲಯಕ್ಕೆ ಆಗಮಿಸುವುದು ಸಾಮಾನ್ಯವಾಗಿದೆ. ಮಹಿಳೆ, ಮಕ್ಕಳು ಹಾಗೂ ವೃದ್ಧರು ಹೈರಾಣರಾಗುತ್ತಿದ್ದಾರೆ.
ಪ್ರವಾಸಿಗರ ದಂಡು: ವಿರೂಪಾಕ್ಷೇಶ್ವರ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಾಲಯ, ಕೋದಂಡರಾಮ ದೇಗುಲ, ಸಾಸವೆಕಾಳು, ಕಡಲೆಕಾಳು ಗಣಪತಿ, ಕೃಷ್ಣ ದೇವಾಲಯ, ಉಗ್ರನರಸಿಂಹ, ಬಡವಿಲಿಂಗ, ಉದ್ದಾನವೀರಭದ್ರ ದೇಗುಲ, ಭೂಮಿಮಟ್ಟದ ಶಿವಾಲಯ, ರಾಣಿಸ್ನಾನಗೃಹ, ಕಮಲ ಮಹಲ್, ಗಜಶಾಲೆ ಹಾಗೂ ವಿಜಯವಿಠಲ ದೇವಾಲಯ ಸೇರಿದಂತೆ ಪ್ರಮುಖ ಸ್ಮಾರಕಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದರು.