ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂಬ ಆರೋಪ ವ್ಯಾಪಕವಾಗಿದ್ದು, ಇದಕ್ಕೆ ಚಿತ್ರದುರ್ಗ ಜಿಲ್ಲೆಯೂ
ಹೊರತಾಗಿಲ್ಲ.
Advertisement
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕೊಠಡಿ ಸಮಸ್ಯೆ ಹಾಗೂ ಮೂಲ ಸೌಲಭ್ಯ ಕೊರತೆ ಕಾಡುತ್ತಿದೆ.ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೆ ಸರ್ಕಾರಿ ಶಾಲೆಗಳು ಮಾತ್ರ
ಮೂಲ ಸೌಲಭ್ಯ ಕೊರತೆಯಿಂದ ಬಳಲುತ್ತಿರುವುದು ವಿಪರ್ಯಾಸ.
ನೀರು, ಶೌಚಾಲಯ, ಆಟದ ಮೈದಾನ, ಗ್ರಂಥಾಲಯ, ವಿದ್ಯುತ್ ಸಂಪರ್ಕ, ಕಾಂಪೌಂಡ್ ಇಲ್ಲವೇ ಇಲ್ಲ. ಸೌಲಭ್ಯದ
ಕೊರತೆಯಿಂದ ಅದೆಷ್ಟೋ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಸರ್ಕಾರಿ ಶಾಲೆಗಳಿಗೆ ರ್‍ಯಾಂಕ್ ಮತ್ತು ಹೆಚ್ಚು ಅಂಕ ಪಡೆದ ಶಿಕ್ಷಕರನ್ನೇ ನೇಮಕ ಮಾಡಲಾಗುತ್ತಿದೆ. ಆದರೆ ಪರೀಕ್ಷಾ ಫಲಿತಾಂಶದಲ್ಲಿ ಮಾತ್ರ ಸುಧಾರಣೆ ಆಗುತ್ತಿಲ್ಲ. ಮಕ್ಕಳ ಕಲಿಕಾ ಸಾಮರ್ಥ್ಯವೂ ಕುಂಠಿತವಾಗುತ್ತಿರುವುದರಿಂದ ಪೋಷಕರು ಮತ್ತು ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಶಾಲಾ ದಾಖಲಾತಿ ಆಂದೋಲನ ಮಾಡಿದರಷ್ಟೇ ಶಿಕ್ಷಣ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಮುಗಿಯುವುದಿಲ್ಲ, ಮೂಲ ಸೌಕರ್ಯ ಇಲ್ಲದಿರುವ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಇಚ್ಛಾಶಕ್ತಿ ತೋರಿದರೆ ಸರ್ಕಾರಿ ಶಾಲೆಗಳನ್ನು
ಮುಚ್ಚುವ ಪರಿಸ್ಥಿತಿಯೇ ಎದುರಾಗುತ್ತಿರಲಿಲ್ಲ.
Related Articles
ಸೌಲಭ್ಯ ಕೊರತೆ ಜೊತೆಗೆ ಆಂದ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮೊಳಕಾಲ್ಮೂರು, ಚಳ್ಳಕೆರೆ ಮತ್ತು
ಹಿರಿಯೂರು ತಾಲೂಕುಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಮೊಳಕಾಲ್ಮೂರು ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 21, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 173, ಬದಲಿ ಶಿಕ್ಷಕರ 2 ಹುದ್ದೆ ಸೇರಿ ಒಟ್ಟು 196 ಹುದ್ದೆಗಳು ಖಾಲಿ ಇವೆ. ಚಳ್ಳಕೆರೆ ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 14, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 34, ಬದಲಿ ಶಿಕ್ಷಕರ 2 ಹುದ್ದೆ ಸೇರಿ ಒಟ್ಟು 50 ಹುದ್ದೆ ಖಾಲಿ ಇವೆ. ಹಿರಿಯೂರು ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 5, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 23, ಬದಲಿ ಶಿಕ್ಷಕರು 2 ಹುದ್ದೆ ಸೇರಿ ಒಟ್ಟು 30 ಹುದ್ದೆಗಳು ಖಾಲಿ ಉಳಿದಿವೆ. ಜಿಲ್ಲೆಯ ಆರು ತಾಲೂಕುಗಳಿಂದ 40 ಕಿರಿಯ, 230 ಹಿರಿಯ, ಬದಲಿ 12 ಒಟ್ಟು 282 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರೌಢಶಾಲಾ ವಿಭಾಗದಲ್ಲಿ 30 ಹುದ್ದೆಗಳು ಖಾಲಿ ಇರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ.
ಸರ್ಕಾರ ತಕ್ಷಣ ಶಿಕ್ಷಕರ ಕೊರತೆ ನೀಗಿಸದೇ ಇದ್ದರೆ ಕೂಲಿ ಕಾರ್ಮಿಕರು ಹಾಗೂ ಬಡ ಕುಟುಂಬಗಳ ಮಕ್ಕಳು ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸುವ ಅಪಾಯವಿದೆ.
Advertisement
ಖಾಸಗಿ ಶಾಲೆಗಳಿಗೇ ಹೆಚ್ಚು ಬೇಡಿಕೆ: 5-10 ಸಾವಿರ ರೂ.ಒಳಗೆ ವೇತನ ಪಡೆಯುವ ಖಾಸಗಿ ಶಾಲೆಗಳಶಿಕ್ಷಕರು ಮಕ್ಕಳಿಗೆ ಉತ್ತಮ ಪಾಠ, ಪ್ರವಚನ ಮಾಡಿ ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತಾರೆ. ರ್‍ಯಾಂಕ್ ಪಡೆದು
ಸರ್ಕಾರಿ ಶಾಲೆ ಶಿಕ್ಷಕರ ಹುದ್ದೆ ಗಿಟ್ಟಿಸಿಕೊಳ್ಳುವವರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿಲ್ಲ. ಹಾಗಾಗಿ
ಸಿರಿವಂತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಎ ಸೇರಿಸುತ್ತಾರೆ. ಕೂಲಿ ಮಾಡಿಕೊಂಡು ಬದುಕಿನ ಬಂಡಿ ಎಳೆಯುವ ಕುಟುಂಬಗಳ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಿದ್ದು, ಸೌಲಭ್ಯಗಳು ದೊರೆಯದಿದ್ದರೆ ಅವರು ಕೂಡ ಶಾಲೆಗೆ ಬಾರದೆ ಇರುವ ದಿನಗಳೂ ದೂರವಿಲ್ಲ. ಹಾಗಾಗಿ ಸರ್ಕಾರ ಅನುತ್ಪಾದಕ ಯೋಜನೆಗಳಿಗೆ ಕೋಟಿಗಟ್ಟಲೆ ಹಣ ಸುರಿಯುವ
ಬದಲು ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಇಚ್ಛಾಶಕ್ತಿ ತೋರಬೇಕಿ¨ ಹರಿಯಬ್ಬೆ ಹೆಂಜಾರಪ್ಪ