ಅಫಜಲಪುರ: ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ಪುಣ್ಯಕ್ಷೇತ್ರಗಳಾದ ಘತ್ತರಗಿ, ದೇವಲ ಗಾಣಗಾಪುರದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ನ ತಡೆಗೋಡೆಗಳು ಒಡೆದು ಹೋಗಿರುವುದರಿಂದ ಸುಗಮ ಸಂಚಾರಕ್ಕೆ ಸಂಚಕಾರ ಬಂದೊದಗಿದೆ.
ಸೆಲ್ಫಿ ಹುಚ್ಚು: ಪುಣ್ಯಕ್ಷೇತ್ರ ಘತ್ತರಗಿಯಲ್ಲಿ ನಿತ್ಯ ಸ್ಥಳೀಯ ಜನ ಭೀಮಾ ನದಿಗೆ ಭೇಟಿ ನೀಡುತ್ತಿದ್ದಾರೆ. ದೇವಿದರ್ಶನ ಪಡೆದು ಪುಣ್ಯಸ್ನಾನಕ್ಕಾಗಿ ನದಿಗೆ ಆಗಮಿಸುತ್ತಾರೆ.ಅಮವಾಸ್ಯೆ, ಹುಣ್ಣಿಮೆಯಂತ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಜನ ಆಗಮಿಸಿ ದೇವಿ ದರ್ಶನದ ಜೊತೆಗೆ ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ.
ಅಮಾವಾಸ್ಯೆ ಹುಣ್ಣಿಮೆ ಸಂದರ್ಭದಲ್ಲಿ ವಾಹನ ದಟ್ಟಣೆಹೆಚ್ಚಾಗುವುದರಿಂದ ನದಿ ಸೇತುವೆ ಮೇಲೆ ವಾಹನ ದಟ್ಟಣೆ ಹೆಚ್ಚಾಗಿ ಅನಾಹುತಕ್ಕೆ ಆಹ್ವಾನನೀಡುವಂತಾಗುತ್ತಿದೆ. ಒಂದು ದೊಡ್ಡ ವಾಹನ ಎದುರಿಗೆ ಬಂದರೆ ಸರ್ಕಸ್ ಮಾಡುವಂತ ಪರಿಸ್ಥಿತಿಯಿದೆ. ದೇವಲ ಗಾಣಗಾಪುರದಲ್ಲೂ ಭೀಮಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ಕಟ್ಟಿಸಲಾಗಿದ್ದು, ಅಲ್ಲಿಯೂ ಬ್ಯಾರೇಜ್ ತಡೆಗೋಡೆ ಒಡೆದುಹೋಗಿದೆ.
ಹೀಗಾಗಿ ಗಾಣಗಾಪುರದಲ್ಲಿಯೂ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಣಗಾಪುರದಲ್ಲಿ ನಿತ್ಯವು ಜನ ಜಾತ್ರೆ ಇರುತ್ತದೆ. ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕಾಗಿ ಹೆಚ್ಚು ಜನ ನದಿ ದಡಕ್ಕೆ ಬರುತ್ತಾರೆ. ಭಕ್ತರ ಪುಣ್ಯಸ್ನಾನಕ್ಕಿಂತಹ ಹೆಚ್ಚಾಗಿ ಯುವ ಜನ ಸೆಲ್ಪಿಹುಚ್ಚಿನಿಂದಾಗಿ ಕೈಯಲ್ಲೊಂದುಮೊಬೈಲ್ ಹಿಡಿದು ನದಿ ದಡಕ್ಕೆ ಹಾಗೂ ತಡೆಗೋಡೆ ಇಲ್ಲದ ಬ್ಯಾರೇಜ್ ಬಳಿ ಬಂದು ಫೋಸು ಕೊಡುತ್ತಿದ್ದಾರೆ.
ಸಂಬಂಧ ಪಟ್ಟವರು ಕೂಡಲೇ ಘತ್ತರಗಿ, ದೇವಲ ಗಾಣಗಾಪುರ ಗ್ರಾಮಗಳಲ್ಲಿರುವ ಬ್ರಿಡ್ಜ್ ಕಂ ಬ್ಯಾರೇಜ್ ಗಳಿಗೆ ತಡೆಗೋಡೆ ನಿರ್ಮಿಸಿ ಅಪಾಯ ಆಗುವುದನ್ನು ತಪ್ಪಿಸಬೇಕಿದೆ.
-ಮಲ್ಲಿಕಾರ್ಜುನ ಹಿರೇಮಠ