ನವದೆಹಲಿ: ಪರಿಸರ ಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಹೆಚ್ಚು ಆದ್ಯತೆ ನೀಡುತ್ತಿದ್ದರೂ ಕೂಡಾ ದೇಶದಲ್ಲಿ ಡೀಸೆಲ್, ಪೆಟ್ರೋಲ್ ಬಳಕೆಯ ಸಾಂಪ್ರದಾಯಿಕ (ಐಸಿಇ-ಇಂಟರ್ನಲ್ ಕಂಬಷನ್ ಎಂಜಿನ್) ವಾಹನಗಳ ಬಳಕೆಯನ್ನು ನಿಲ್ಲಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಳ್ಳಾರಿ: ಕಾಯಕದಲ್ಲಿ ಇದ್ದಾಗಲೇ ಭೀಕರವಾಗಿ ಕೊಲೆಯಾದ ಸೆಕ್ಯೂರಿಟಿ ಗಾರ್ಡ್
ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಜತೆಗೆ ಎಥೆನಾಲ್, ಬಯೋ ಎಲ್ ಎನ್ ಜಿ, ಗ್ರೀನ್ ಹೈಡ್ರೋಜನ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.
ಎಲೆಕ್ಟ್ರಿಕ್ ವಾಹನ, ಎಥೆನಾಲ್, ಬಯೋ ಎಲ್ ಎನ್ ಜಿ ಹಾಗೂ ಗ್ರೀನ್ ಹೈಡ್ರೋಜನ್ ಗೆ ಆದ್ಯತೆ ನೀಡಿದರೂ ಕೂಡಾ ಸಾಂಪ್ರದಾಯಿಕ ವಾಹನಗಳ ಸಂಚಾರವನ್ನು ನಿಲ್ಲಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಗಡ್ಕರಿ ಸ್ಪಷ್ಟಪಡಿಸಿದರು.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಳವಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಕಡ್ಡಾಯ ಮಾಡಬೇಕೆಂಬುದಾಗಿ ಆಲೋಚಿಸುತ್ತಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದರು. ಸುಮಾರು 250 ಇ-ವಾಹನಗಳ ತಯಾರಿಕೆಯ ಸ್ಟಾರ್ಟ್ ಅಪ್ಸ್ ಕಾರ್ಯಾಚರಿಸುತ್ತಿವೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಕಡಿಮೆಗೊಳಿಸುವುದಾಗಿ ತಿಳಿಸಿದರು.