ಮಾಗಡಿ: ನಾರಸಂದ್ರ-ಮರೂರು ವ್ಯಾಪ್ತಿಯ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆ ಸ್ಥಾಪನೆ ಮಾಡುವುದನ್ನು ವಿರೋಧಿಸಿ ಎರಡು ವರ್ಷದಿಂದ ನಡೆಯುತ್ತಿದ್ದ ರೈತರ ಹೋರಾಟ ಅಂತ್ಯ ಕಂಡಿದೆ. ಅಂದರೆ, ಕೊನೆಗೂ ಶಾಸಕ ಎ.ಮಂಜುನಾಥ್ ಅವರು, ಕೆಐಎಡಿಬಿ ಭೂ ಸ್ವಾಧೀನ ಕೈಬಿಡುವಂತೆ ಪತ್ರ ಬರೆದುಕೊಟ್ಟು ರೈತರ ಹೋರಾಟಕ್ಕೆ ಮಣಿದಿದ್ದಾರೆ.
ತಾಲೂಕಿನ ನಾರಸಂದ್ರ, ಮರೂರು ಶಿವನಸಂದ್ರ ಗ್ರಾಮದ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿತ್ತು. ಕೆಐಎಡಿಬಿ ಕೈಗಾರಿಕೆ ಸ್ಥಾಪನೆಗೆ ಶಾಸಕರು ಪತ್ರ ಬರೆದಿದ್ದರು. ಈ ವೇಳೆ, ರೈತರು ತಮ್ಮ ಫಲವತ್ತಾದ ಜಮೀನನ್ನು ಎಲ್ಲಿ ಕಳೆದುಕೊಂಡು ಬೀದಿಪಾಲಾಗುತ್ತೇವೆಯೋ ಎಂದು ತಿಳಿದು ಶಾಸಕರ ವಿರುದ್ಧ ನಿರಂತರವಾಗಿ ಹೋರಾಟ, ಶಾಸಕರ ಕಾರಿಗೆ ಮುತ್ತಿಗೆ, ಬಹಿಷ್ಕಾರ ಯತ್ನ ಸೇರಿದಂತೆ ಹಲವು ಪ್ರತಿಭಟನೆಗಳನ್ನು ನಡೆಸಿದ್ದರು.
ಮುತ್ತಿಗೆ ಹಾಕಿದ್ದರು: ಇನ್ನು ಶನಿವಾರ ಕುದೂರಿಗೆ ತೆರಳುತ್ತಿದ್ದ ವೇಳೆ ಮರೂರು ಬಳಿ ಶಾಸಕರ ಕಾರು ತಡೆದು ರೈತರು ಮುತ್ತಿಗೆ ಹಾಕಲು ಯತ್ನಿಸಿದರು. ಅಲ್ಲದೇ, ಕೈಗಾರಿಕಾ ಪ್ರದೇಶವನ್ನು ಕೈಬಿಡುವಂತೆ ಕೆಐಎಡಿಬಿಗೆ ಪತ್ರ ಬರೆದುಕೊಡುವಂತೆ ಪಟ್ಟು ಹಿಡಿದರು.
ಈ ವೇಳೆ ಶಾಸಕರು, ರೈತರ ವಿರೋಧದ ನಡುವೆ ಕೈಗಾರಿಕೆ ಸ್ಥಾಪನೆ ಬೇಡವೆನ್ನುವುದಾದರೆ ಶಾಸಕರ ಭವನಕ್ಕೆ ಬನ್ನಿ. ಪತ್ರ ಬರೆದುಕೊಡುವುದಾಗಿ ರೈತರ ಮನವೊಲಿಸಿದ್ದರು. ಅದರಂತೆ ರೈತರ ನಿಯೋಗ ಸೋಮವಾರ ಶಾಸಕರ ಭವನ ದಲ್ಲಿ ಶಾಸಕರನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಶಾಸಕರು, ಕೈಗಾರಿಕಾ ಪ್ರದೇಶವನ್ನು ಕೈ ಬಿಡುವ ಕುರಿತು ಕೆಐಎಡಿಬಿ ಅಧಿಕಾರಿಗಳಿಗೆ ಪತ್ರ ಬರೆದುಕೊಟ್ಟರು.
ರೈತರಿಗೆ ನೆಮ್ಮದಿ: ಮಾಗಡಿ ಕೆಂಪೇಗೌಡ ಭೂ ಹೋರಾಟ ಸಮಿತಿ ಅಧ್ಯಕ್ಷ ಜಯರಾಮು (ಬಾಬು )ಮಾತನಾಡಿ, ರೈತರ ಹೋರಾಟಕ್ಕೆ ಜಯಸಿಕ್ಕಿದ್ದು, ಸಂತಸ ತಂದಿದೆ. ನಮಗೆ ಇದು ನೆಮ್ಮದಿಯ ದಿನವಾಗಿದೆ. ನಾವು ಜಮೀನು ಕಳೆದುಕೊಂಡು ಬೀದಿಗೆ ಬೀಳುತ್ತೇವೆ ಎಂದು ಭಯಗೊಂಡಿದ್ದೆವು. ಇದರಿಂದ ಮುಂದಿನ ಜೀವನ ಹೇಗೆ ಎಂದು ರೈತರು ಕಳೆದ ಎರಡು ವರ್ಷಗಳಿಂದ ನೆಮ್ಮದಿ ಕಳೆದುಕೊಂಡಿದ್ದರು. ಸೋಮವಾರ ಶಾಸಕರು ರೈತರ ಬಗ್ಗೆ ಕಾಳಜಿ ವಹಿಸಿ, ಪಕ್ಷದ ಸಿದ್ಧಾಂತದ ವಿರುದ್ಧ ನಡೆದುಕೊಳ್ಳಬಾರದು, ರೈತರು ಉಳಿಯಬೇಕೆಂದು ಕೈಗಾರಿಕೆ ಬೇಡ, ಭೂಸ್ವಾಧೀನ ಕೈಬಿಡುವಂತೆ ಕೆಐಎಡಿಬಿ, ಮುಖ್ಯಮಂತ್ರಿ, ಕೈಗಾರಿಕಾ ಸಚಿವರಿಗೆ ಶಾಸಕರು ಪತ್ರ ಬರೆದಿದ್ದಾರೆ. ರೈತರೆಲ್ಲರೂ ಶಾಸಕರಿಗೆ ಚಿರಋಣಿಯಾಗಿದ್ದೇವೆ. ಶಾಸಕರು ರೈತ ವಿರೋಧಿ ಪಟ್ಟ ಅಳಿಸಿಕೊಂಡಿದ್ದಾರೆ. ರೈತರು ನೆಮ್ಮದಿ ಯಾಗಿ ಇರುವಂತೆ ತಿಳಿಸಿದ್ದಾರೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಶಿವ ಪ್ರಸಾದ್, ಮರೂರು ಸಾಗರ್ ಗೌಡ, ಶಂಕರಪ್ಪ, ಮರೂರು ಕುಮಾರ್, ನರಸೇಗೌಡ, ನಾಗರಾಜು, ಗೋವಿಂ ದಯ್ಯ, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಶಾಸಕರು ಬರೆದಿರುವ ಪತ್ರದ ಸಾರಾಂಶ ಏನು? : ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ರೈತರ ಜಮೀನು ಫಲವತ್ತಾದ ಭೂಮಿ, ತೆಂಗು, ಅಡಕೆ, ಮಾವು ಸೇರಿದಂತೆ ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ಒಳಗೊಂಡಿದೆ. ಬಹುಪಾಲು ರೈತರು ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟು ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವ್ಯವಸಾಯಕ್ಕೆ ಯೋಗ್ಯವಲ್ಲದ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವುದು ಸೂಕ್ತವೆಂದು ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಅವರಿಗೆ ಶಾಸಕ ಎ.ಮಂಜುನಾಥ್ ಪತ್ರ ಬರೆದಿದ್ದಾರೆ.