Advertisement
ಪಟ್ಟಣದ ಕೃಷಿ ಉತ್ಪನ ಮಾರುಕಟ್ಟೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ, ಡಾಟಾ ಎಂಟ್ರಿ, ಕಂಪ್ಯೂಟರ್ ಆಪರೇಟರ್ ಹುದ್ದೆಗಳ ನೇಮಕಕ್ಕೆ ಎಪಿಎಂಸಿ ಕಚೇರಿ ಟೆಂಡರ್ ಕರೆದು ರಾಯಚೂರ ಮೂಲದ ಸಿದ್ದೇಶ್ವರ ಸೆಕ್ಯೂರಿಟಿ ಸರ್ವಿಸ್‌ನೊಂದಿಗೆ ಒಪ್ಪಂದ ಕರಾರು ಮಾಡಿಕೊಂಡಿತ್ತು. ಆದರೆ, ಗುತ್ತಿಗೆ ಪಡೆದ ಸಂಸ್ಥೆಯವರು ಇಲ್ಲಿನ ಸಿಬ್ಬಂದಿಗಳಿಗೆ ಸೂಕ್ತ ಸಮಯಕ್ಕೆ ಸಂಬಳ ಹಾಗೂ ಇಪಿಎಫ್, ಇಎಸ್‌ಐ ಮಾತ್ರ ಪಾವತಿ ಮಾಡುತ್ತಿಲ್ಲ. ಸಂಬಳ ದೊರೆಯದ ಕಾರಣ ಅನೇಕ ಸಂಕಷ್ಟಗಳು ಎದುರಿಸುತ್ತಿರುವುದಾಗಿ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
Related Articles
Advertisement
ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸೂಕ್ತ ಸಂಬಳ, ಇಪಿಎಫ್, ಇಎಸ್‌ಐ ಪಾವತಿ ಕುರಿತು ಕಚೇರಿ ಕಾರ್ಯದರ್ಶಿಗಳು ಅನೇಕ ನೋಟಿಸ್ ಜಾರಿ ಮಾಡಿದರು ಕೂಡ ಗುತ್ತಿಗೆ ಪಡೆದ ಸಂಸ್ಥೆ ಮಾತ್ರ ಅಧಿಕಾರಿಗಳ ಪತ್ರಕ್ಕೆ ಸೂಕ್ತ ಉತ್ತರ ನೀಡುತ್ತಿಲ್ಲ ಎಂಬುವುದು ತಿಳಿದುಬಂದಿದೆ.
ಕಳೆದ ವರ್ಷ 14-07-2021ರಂದು ಎಪಿಎಂಸಿ ಕಾರ್ಯದರ್ಶಿ ಅವರು ಕಾನೂನು ಕ್ರಮ ಕೈಗೊಳ್ಳುವ ಹಾಗೂ ಸಿಬ್ಬಂದಿಗಳ ಇಪಿಎಫ್, ಇಎಸ್‌ಐ ಹಾಗೂ ಜಿಎಸ್‌ಟಿ ಹಣ ಪಾವತಿ ಮಾಡುವಂತೆ ಎಚ್ಚರಿಕೆ ನೋಟಿಸ್ ಜಾರಿ ಮಾಡಿದರು. ಏಪ್ರಿಲ್ 2020 ರಿಂದ ಜೂನ್ 2021ರ ವರೆಗಿನ ಒಟ್ಟಾರೆ, ಇಪಿಎಫ್ ಸುಮಾರು, 1.35 ಲಕ್ಷ ಹಾಗೂ ಇಎಸ್‌ಐ ಸುಮಾರು 35 ಸಾವಿರ ಸಿಬ್ಬಂದಿ ಖಾತೆಗೆ ಜಮಾ ಆಗಿಲ್ಲ. ಅಲ್ಲದೆ, ಜೂನ್ 2021 ರಿಂದ ಮಾ.2022ರ ವರೆಗೂ ಇಪಿಎಫ್, ಇಎಸ್‌ಐ ಪಾವತಿಯಾಗಿಲ್ಲ.
ಎಪಿಎಂಸಿ ಗುತ್ತಿಗೆ ಸಿಬ್ಬಂದಿಗಳ ಸಂಬಳ ಪಾವತಿಗೆ ಗುತ್ತಿಗೆ ಪಡೆದ ಸಂಸ್ಥೆಗೆ ಚೆಕ್ ಮೂಲಕ ಹಣ ಪಾವತಿ ಮಾಡಲಾಗುತ್ತದೆ. ಗುತ್ತಿಗೆ ಪಡೆದ ಸಂಸ್ಥೆಯು ಆಯಾ ಸಿಬ್ಬಂದಿ ಖಾತೆಗೆ ಸಂಬಳ ಹಾಗೂ ಇಪಿಎಫ್, ಇಎಸ್‌ಐ ಹಾಗೂ ಜಿಎಸ್‌ಟಿ ಹಣ ಪಾವತಿ ಮಾಡಬೇಕಾಗುತ್ತದೆ. ಈ ಹಿಂದಿನ ಕಾರ್ಯದರ್ಶಿಗಳು ನೋಟಿಸ್ ನೀಡಿ ಎಚ್ಚರಿಸುವ ಕೆಲಸ ಮಾಡಿದ್ದು, ಇದೀಗ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಈ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಕ್ತ ವರದಿ ಸಲ್ಲಿಸಲಾಗುವುದು. ಹೊಸ ಟೆಂಡರ್ ಕರೆದು ಬೇರೆ ಸಂಸ್ಥೆಗೆ ಗುತ್ತಿಗೆ ನೀಡಲಾಗುವುದು. -ಅನಿಲಕುಮಾರ ಹಾದಿಮನಿ, ಎಪಿಎಂಸಿ ಪ್ರಭಾರ ಕಾರ್ಯದರ್ಶಿ
-ದುರ್ಯೋಧನ ಹೂಗಾರ